ಬೆಳ್ತಂಗಡಿ, ಮಾ. 18 : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ರಾಜ್ಯಾದ್ಯಂತ ಬುಡಕಟ್ಟು ಸಮುದಾಯದ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮಾನ್ಯ ಮುಖ್ಯಮಂತ್ರಿಗಳೆ ಖುದ್ದಾಗಿ ಸೂಚನೆ ನೀಡಿದರು ಕೂಡ ಸರ್ಕಾರದ ಸಮನ್ವಯತೆಯ ಕೊರತೆಯಿಂದ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದು ದಕ್ಷಿಣ ಕನ್ನಡ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಪ್ರಕಾರ ಮೂಲಭೂತ ಸೌಕರ್ಯ ಕಲ್ಪಿಸಲು ಫಾರೆಸ್ಟ್ ಕ್ಲಿಯರೆನ್ಸ್ ಮತ್ತು ವನ್ಯ ಜೀವಿ ಮಂಡಳಿಯ ಅನುಮತಿ ಅವಶ್ಯಕತೆ ಇಲ್ಲ ಎಂದು ಬುಡಕಟ್ಟು ಸಚಿವಾಲಯ ನೀಡಿದ ನಿರ್ದೇಶನ ಸರ್ಕಾರದ ಗಮನದಲ್ಲಿ ಇದೆಯಾ ಎಂಬ ಪ್ರಮುಖ ಪ್ರಶ್ನೆಯ ಜೊತೆಗೆ ಅರಣ್ಯವಾಸಿಗಳ ವ್ಯಾಖ್ಯಾನದ ಬಗ್ಗೆ ಶಾಸಕ ಹರೀಶ್ ಪೂಂಜಾರವರು ಗಮನ ಸೆಳೆಯುವ ಸೂಚನೆಯಡಿಯಲ್ಲಿ ಪ್ರಶ್ನೆಯನ್ನು ಕೇಳಿದ್ದರು. ಕೇಂದ್ರ ಬುಡಕಟ್ಟು ಸಚಿವಾಲಯ 02-07-2025 ರಂದು ನಿರ್ದೆಶನ ಗಮನದಲ್ಲಿ ಇದೆ ಎಂದು ಹೇಳಿರುವ ಅರಣ್ಯ ಇಲಾಖೆ ಜೊತೆಗೆ ಅಕ್ಟೋಬರ್ 2020 ರಂದು ಕೇಂದ್ರ ಪರಿಸರ ಸಚಿವಾಲಯ ಬುಡಕಟ್ಟು ಸಚಿವಾಲಯಕ್ಕೆ ಕೊಟ್ಟಿರುವ ಅಭಿಪ್ರಾಯದ ಪತ್ರವನ್ನು ಲಗತ್ತಿರಿಸುವ ಮೂಲಕ ಗೊಂದಲಕಾರಿ ಉತ್ತರವನ್ನು ನೀಡಿದೆ. ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ನೋಡಲ್ ಇಲಾಖೆ ಬುಡಕಟ್ಟು ಸಚಿವಾಲಯದ ಸ್ಪಷ್ಟನೆಯನ್ನು ಮರೆಮಾಚುವ ಪ್ರಯತ್ನ ಉತ್ತರದಲ್ಲಿ ಎದ್ದು ಕಾಣುತ್ತಿದೆ ಎಂದರು.
ಈ ಮಧ್ಯೆ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಪ್ರಕಾರ ಭೂ ಪರಿವರ್ತನೆ ಮಾಡಲಾಗಿದೆ ಎಂದು 22 ಪ್ರಕರಣಗಳನ್ನು ಉಲ್ಲೇಖ ಮಾಡಲಾಗಿದ್ದು ಪತ್ರ ಸಂಖ್ಯೆಯನ್ನು ನೋಡುವಾಗ ಮೇಲ್ನೋಟಕ್ಕೆ ಇದು ಫಾರೆಸ್ಟ್ ಕ್ಲಿಯರೆನ್ಸ್ ಎಂದು ಗೊತ್ತಾಗುತ್ತದೆ ಆದರೂ ಕೂಡ ಅರಣ್ಯ ಹಕ್ಕು ಕಾಯ್ದೆ ಎಂಬ ಸುಳ್ಳು ಉತ್ತರವನ್ನು ಅಧಿಕಾರಿಗಳು ಸಚಿವರ ಮೂಲಕ ಕೊಟ್ಟಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಆಗಿದ್ದಾರೆ ಫಾರಂ ಎ ಫಾರಂ ಬಿ ಗ್ರಾಮ ಸಭೆಯ ನಿರ್ಣಯ ಕೈಗೊಳ್ಳಲಾಗಿದೆ ಇದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಅರಣ್ಯವಾಸಿಗಳಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸುವುದಕ್ಕಾಗಿ ತಂದ ಅರಣ್ಯ ಹಕ್ಕು ಕಾಯ್ದೆ ಬುಡಕಟ್ಟು ಸಮುದಾಯಗಳಿಗೆ ಆಶಾದಾಯಕವಾಗಿದ್ದರು ಕೂಡ ಅರಣ್ಯ ಇಲಾಖೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಫಾರೆಸ್ಟ್ ಕ್ಲಿಯರೆನ್ಸ್ ಮತ್ತು ವನ್ಯಜೀವಿ ಮಂಡಳಿಯ ಅನುಮತಿ ಪಡೆದು ಮೂಲಭೂತ ಸೌಕರ್ಯ ಕಲ್ಪಿಸಲು ಅನೇಕ ಪ್ರಕ್ರಿಯೆಗಳು ಇದ್ದು. ಕೆಲಸ ಮಾಡುವ ಸಂಸ್ಥೆ ಅರಣ್ಯ ಇಲಾಖೆಗೆ ಪರಿಹಾರ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ರಸ್ತೆ ಮೋರಿ ಮಾಡಲು ಅನುದಾನ ಸಿಗೋದು ಕಷ್ಟ ಇರುವಾಗ ಇಂತಹ ಪ್ರಕ್ರಿಯೆಗಳನ್ನು ಮಾಡಿ ಮೂಲಭೂತ ಸೌಕರ್ಯಗಳನ್ನು ಕೊಡುವುದು ಬಹಳ ಕಠಿಣ. ಹಾಗಾಗಿ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಡಿ.ಎಫ್ .ಓ ಹಂತದಲ್ಲಿ ಅನುಮತಿ ಸಿಗುತ್ತದೆ ಯಾವುದೆ ಪರಿಹಾರ ಧನವನ್ನು ನೀಡುವ ಅವಶ್ಯಕತೆ ಕೂಡ ಇಲ್ಲದೆ ಇರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು.
ಅರಣ್ಯ ಇಲಾಖೆಯ ಅತೀ ಬುದ್ದಿವಂತ ಅವಿವೇಕಿ ಅಧಿಕಾರಿಗಳ ಗುಂಪು ವ್ಯವಸ್ಥಿತವಾಗಿ ಸರ್ಕಾರದ ದಿಕ್ಕು ತಪ್ಪಿಸುತ್ತಿದ್ದಾರೆ. ಬುಡಕಟ್ಟು ಸಚಿವಾಲಯ ಸ್ಪಷ್ಟನೆ ನೀಡುವುದಕ್ಕಾಗಿ ಪ್ರಕ್ರಿಯೆ ಆರಂಭಿಸುವಾಗ ಸಂಬಂಧಿಸಿದ ಇಲಾಖೆಗಳ ಅಭಿಪ್ರಾಯ ಪಡೆಯುತ್ತದೆ ಆಗ ಇಲಾಖೆಗಳು ನೀಡಿದ ಅಭಿಪ್ರಾಯವನ್ನು ಗಮನಿಸಿ ಅಂತಿಮ ಆದೇಶ ನೀಡುವುದು ಅರಣ್ಯ ಇಲಾಖೆ ಅಂತಿಮ ಆದೇಶವನ್ನು ಪಾಲಿಸಬೇಕು. ಅಭಿಪ್ರಾಯದ ಆಧಾರದಲ್ಲಿ ಸರ್ಕಾರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪ್ರಕಟನೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

