ಬೆಂಗಳೂರು, ಮೇ 13 : ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಲಾಗಿದೆ. ಜತೆಗೆ ಹಿಂದೂ ಧರ್ಮದ ಪವಿತ್ರ ದಾರ, ಪೇಟ, ರುದ್ರಾಕ್ಷಿ, ಜನಿವಾರ ಸೇರಿ ಎಲ್ಲಾ ಧರ್ಮಗಳ ಧಾರ್ಮಿಕ ವಸ್ತುಗಳಿಗೂ ಅವಕಾಶವಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಜಾರಿಗೊಳಿಸಿದ್ದ ಶಾಲಾ ಕಾಲೇಜುಗಳಲ್ಲಿ ಹಿಬಾಜ್ ನಿಷೇಧ ಆದೇಶವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ತೆರವು ಮಾಡಲಾಗವುದು. ಮುಸ್ಲಿಂ ಸಮುದಾಯದ ಬೇಡಿಕೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಹಿಜಾಬ್ ರದ್ದು ಮಾಡಿ 2022 ರಲ್ಲಿ ಬಿಜೆಪಿ ಆದೇಶ
2022ರ ಆರಂಭದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿತು. ಇದರ ಬೆನ್ನಲ್ಲೇ, ಫೆಬ್ರವರಿ 5, 2022 ರಂದು ಅಂದಿನ ಬಿಜೆಪಿ ಸರ್ಕಾರ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ಆದೇಶವೊಂದನ್ನು ಹೊರಡಿಸಿತು. ಶಾಲಾ-ಕಾಲೇಜುಗಳಲ್ಲಿ ಆಡಳಿತ ಮಂಡಳಿಗಳು ನಿಗದಿಪಡಿಸಿದ ‘ಸಮವಸ್ತ್ರ’ವನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಸಮಾನತೆ, ಸಮಗ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಧಾರ್ಮಿಕ ಉಡುಪುಗಳನ್ನು (ಹಿಜಾಬ್ ಅಥವಾ ಕೇಸರಿ ಶಾಲು) ಧರಿಸಿ ತರಗತಿಯೊಳಗೆ ಬರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಹೈಕೋರ್ಟ್‌ನ ತ್ರಿಸದಸ್ಯ ಪೀಠವು, “ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ” ಎಂದು ಅಭಿಪ್ರಾಯಪಟ್ಟು, ಸರ್ಕಾರದ ಸಮವಸ್ತ್ರ ಕಡ್ಡಾಯ ಆದೇಶವನ್ನು ಎತ್ತಿಹಿಡಿಯಿತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ‘ವಿಭಜಿತ ತೀರ್ಪು ನೀಡಿತು. ಒಬ್ಬ ನ್ಯಾಯಮೂರ್ತಿಗಳು ಹೈಕೋರ್ಟ್ ತೀರ್ಪನ್ನು ಬೆಂಬಲಿಸಿದರೆ, ಮತ್ತೊಬ್ಬರು ಹಿಜಾಬ್ ನಿಷೇಧವನ್ನು ರದ್ದುಪಡಿಸಿದರು. ಇದರಿಂದಾಗಿ ಅಂತಿಮ ತೀರ್ಪಿಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಭರವಸೆ
2023ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಡಿಸೆಂಬರ್ 2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಹಿಜಾಬ್ ನಿಷೇಧದ ಆದೇಶವನ್ನು ಹಿಂಪಡೆಯಲು ಸೂಚಿಸಿದ್ದೇನೆ, ಯಾರು ಯಾವ ಬಟ್ಟೆ ಬೇಕಾದರೂ ಧರಿಸಬಹುದು” ಎಂದು ಹೇಳಿಕೆ ನೀಡಿದ್ದರು. ಸದ್ಯ ಜಾರಿಗೆ ನಿರ್ಧರಿಸಲಾಗಿದೆ.

