ನವದೆಹಲಿ : ಹೊರ್ಮುಜ್ ಜಲಸಂಧಿಯಿಂದ ಭಾರತದ ಬಂದರುಗಳತ್ತ ಪ್ರಯಾಣ ಆರಂಭಿಸಿದ ಮತ್ತೆರಡು ಎಲ್‌ಪಿಜಿ ಟ್ಯಾಂಕರ್ ನೌಕೆಗಳು

ನವದೆಹಲಿ, ಮಾ. 24 : ಪರ್ಷಿಯನ್ ಗಲ್ಫ್ ರಾಷ್ಟ್ರದ ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯಿಂದ ಭಾರತದ ಧ್ವಜ ಹೊಂದಿರುವ ಮತ್ತೆರಡು ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಟ್ಯಾಂಕರ್ ನೌಕೆಗಳು ಭಾರತದ ಬಂದರುಗಳತ್ತ ತಮ್ಮ ಪ್ರಯಾಣ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೋಮವಾರ ಮಧ್ಯಾಹ್ನ ‘ಪೈನ್ ಗ್ಯಾಸ್’ ಮತ್ತು ‘ಜಗ್ ವಸಂತ್’ ಎಂಬ ಹೆಸರಿನ ತೈಲ ಟ್ಯಾಂಕರ್‌ಗಳು ಇರಾನ್‌ನ ಲಾರಕ್ ಮತ್ತು ಕೇಶ್ ದ್ವೀಪಗಳ ನಡುವೆ ಹಾದು ಹೋಗಿವೆ. ಜಲಸಂಧಿಯನ್ನು ದಾಟುವ ಮೊದಲು ಇರಾನ್ ಅಧಿಕಾರಿಗಳಿಗೆ ತಮ್ಮ ಗುರುತನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಈ ಹಡಗುಗಳು ಈ ಮಾರ್ಗವನ್ನು ಅನುಸರಿಸಿರಬಹುದು ಎಂದು ಹೇಳಲಾಗಿದೆ. ಸುಮಾರು 92,000 ಟನ್ ಎಲ್‌ಪಿಜಿಯನ್ನು ಹೊತ್ತ ‘ಜಗ್ ವಸಂತ್’ ಹಾಗೂ ‘ಪೈನ್ ಗ್ಯಾಸ್’ ನೌಕೆಗಳು ಪರ್ಷಿಯನ್ ಕೊಲ್ಲಿಯಿಂದ ಪ್ರಯಾಣ ಆರಂಭಿಸಿವೆ. ಈ ಎರಡು ಹಡಗುಗಳಲ್ಲಿನ ಎಲ್‌ಪಿಜಿಯು ಇಡೀ ದೇಶಕ್ಕೆ 1 ದಿನಕ್ಕಾಗುವಷ್ಟು ಅಡುಗೆ ಅನಿಲ ಬಳಕೆಗೆ ಪೂರೈಸಬಹುದಾಗಿದೆ.

ಜಲಸಂಧಿಯಲ್ಲಿ ಸಿಲುಕಿದ್ದ 28 ಹಡಗುಗಳು:

ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದಾಗ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜ ಹೊಂದಿದ್ದ ಒಟ್ಟು 28 ಹಡಗುಗಳು ಸಿಲುಕಿಕೊಂಡಿದ್ದವು. ಇವುಗಳಲ್ಲಿ 24 ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿದ್ದರೆ, ನಾಲ್ಕು ಹಡಗುಗಳು ಪೂರ್ವ ಭಾಗದಲ್ಲಿದ್ದವು. ಕಳೆದ ಕೆಲವು ದಿನಗಳಲ್ಲಿ ಪೂರ್ವ ಮತ್ತು ಪಶ್ಚಿಮ ಭಾಗದಿಂದ ತಲಾ ಎರಡು ಹಡಗುಗಳು ಸುರಕ್ಷಿತವಾಗಿ ಪ್ರಯಾಣ ಬೆಳೆಸುವಲ್ಲಿ ಯಶಸ್ವಿಯಾಗಿವೆ.

ಮಾರ್ಚ್ 16ರಂದು ಎಲ್‌ಪಿಜಿ ಹೊತ್ತ ಹಡಗು ‘ಶಿವಾಲಿಕ್’, ಗುಜರಾತ್‌ನ ಮುದ್ರಾ ಬಂದರನ್ನು ತಲುಪಿದರೆ, ಮರುದಿನ ‘ನಂದಾದೇವಿ’ ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪಿತ್ತು. ಈ ಎರಡು ಹಡಗುಗಳು ಮಾ.13ರಂದು ಪ್ರಯಾಣ ಆರಂಭಿಸಿ, ಮಾ. 14ರ ಮುಂಜಾನೆ ಹೊರ್ಮುಜ್ ಜಲಸಂಧಿಯನ್ನು ದಾಟಿದ್ದವು.

ಯುಎಇಯಿಂದ 80,886 ಟನ್ ಕಚ್ಚಾ ತೈಲ ಹೊತ್ತಿದ್ದ ಭಾರತದ ‘ಜಗ ಲಾಗ್ನಿ’, ಮಾರ್ಚ್ 18ರಂದು ಮುದ್ರಾ ತಲುಪಿದೆ. ಒಮಾನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿನ್ ಸಾಗಿಸುತ್ತಿದ್ದ ಮತ್ತೊಂದು ಟ್ಯಾಂಕರ್ ‘ಜಗ ಪ್ರಕಾಶ’ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ತಾಂಜಾನಿಯಾದತ್ತ ಸಾಗುತ್ತಿದೆ.

ಭಾರತವು ಆಮದು ಮಾಡಿಕೊಳ್ಳುವ ಶೇ.88 ಕಚ್ಚಾ ತೈಲದಲ್ಲಿ ಶೇ.50 ನೈಸರ್ಗಿಕ ಅನಿಲ ಮತ್ತು ಎಲ್‌ಪಿಜಿಗೆ ಶೇ.60 ಬಳಕೆಯಾಗುತ್ತದೆ. ಯುದ್ಧ ಆರಂಭಕ್ಕೂ ಮೊದಲು, ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ಅರ್ಧಕ್ಕಿಂತ ಹೆಚ್ಚು ಕಚ್ಚಾ ತೈಲವು ಈ ಜಲಸಂಧಿ ಮೂಲಕ ಹಡಗು ಸಾಗಣೆಯಾಗುತ್ತಿದ್ದವು.

ಉಳಿದ ಹಡಗುಗಳ ವಿವರ:
ಉಳಿದಿರುವ 24 ಹಡಗುಗಳ ಪೈಕಿ 22 ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿವೆ. ಈ ಹಡುಗುಗಳಲ್ಲಿ ಒಟ್ಟು 611 ನಾವಿಕರಿದ್ದಾರೆ. ಇನ್ನುಳಿದ ಎರಡು ಹಡಗುಗಳು ಪೂರ್ವ ಭಾಗದಲ್ಲಿವೆ. ಪಶ್ಚಿಮ ಭಾಗದಲ್ಲಿರುವ 22 ಹಡಗುಗಳಲ್ಲಿ 6 ಎಲ್‌ಪಿಜಿ ನೌಕೆಗಳಾಗಿದ್ದು, ಅವುಗಳಲ್ಲಿ ಎರಡು (ಪೈನ್ ಗ್ಯಾಸ್ ಮತ್ತು ಜಗ ವಸಂತ) ಈಗ ಭಾರತಕ್ಕೆ ಪ್ರಯಾಣ ಬೆಳೆಸಿವೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.