ನವದೆಹಲಿ, ಆ. 15 : ಇಂದು ದೇಶದಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶದ ಜನತೆಯನ್ನು ಉದ್ದೇಶಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಭಾರತದ 80ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಪೂರ್ಣ ರೂಪದಲ್ಲಿ ಮೊಳಗಿತು. ಸ್ವಾತಂತ್ರ್ಯದ ನಂತರ ಕೆಂಪುಕೋಟೆಯ ಅಧಿಕೃತ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಈ ಗೀತೆಯನ್ನು ನುಡಿಸಿರುವುದು ಇದೇ ಮೊದಲು.
ಕೆಂಪುಕೋಟೆಯ ಅಂಗಳದಲ್ಲಿ ನಡೆದ ಅದ್ದೂರಿ ಸಮಾರಂಭಕ್ಕೆ ಕೇಂದ್ರ ಸಚಿವರು, ಗಣ್ಯರು, ರಾಜತಾಂತ್ರಿಕರು, ಸೇನಾಪಡೆಗಳ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಯುವ ಸಮೂಹವೂ ಪಾಲ್ಗೊಂಡು ದೇಶದ 80ನೇ ಸ್ವಾತಂತ್ರ್ಯೋತ್ಸವದ ವೈಭವಕ್ಕೆ ಸಾಕ್ಷಿಯಾದರು.
ರಾಷ್ಟ್ರಧ್ವಜಾರೋಹಣದ ಬಳಿಕ ದೇಶಭಕ್ತಿ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶಗಳು ಮೊಳಗಿದ್ದು, ಇಡೀ ಕೆಂಪುಕೋಟೆಯ ಆವರಣ ದೇಶಭಕ್ತಿಯ ವಾತಾವರಣದಿಂದ ಕಂಗೊಳಿಸಿತು. ದೇಶದಾದ್ಯಂತವೂ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.




