IPL-2026 : ಆರ್ ಸಿಬಿ ಸರ್ವಾಂಗಿಣ ಹೋರಾಟಕ್ಕೆ ತವರಿನಲ್ಲೇ ಮಣಿದ ಮುಂಬೈ ಇಂಡಿಯನ್ಸ್ !

IPL-2026 : ಆರ್ ಸಿಬಿ ಆರಂಭಿಕ ದಾಂಡಿಗ ಫಿಲ್ ಸಾಲ್ಟ್ ಸ್ಫೋಟಕ ಅರ್ಧಶತಕ, ಅನಾರೋಗ್ಯದ ನಡುವೆಯೂ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಹಾಗೂ ನಾಯಕನ ಜವಾಬ್ದಾರಿಯುತ ಅರ್ಧಶತಕ ಮತ್ತು ನಿರ್ಣಾಯಕ ಹಂತದಲ್ಲಿ ಪ್ರಮುಖ ವಿಕೆಟ್ ಕಬಳಿಸಿದ ಸುಯೇಶ್ ಶರ್ಮಾ. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಬಳಗವನ್ನು 18 ರನ್ ಗಳಿಂದ ಪರಾಭವಗೊಳಿಸಿತು.

Advertisement

ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 6 ಅಂಕಗಳನ್ನು ಕಲೆ ಹಾಕಿದ ರಜತ್ ಪಾಟೀದಾರ್ ಬಳಗ ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಮುಂಬೈ ಇಂಡಿಯನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿರುವುದರಿಂದ 2 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆಕರ್ಷಕ ಅರ್ಧಶತಕ ಗಳಿಸಿದ ಫಿಲ್ ಸಾಲ್ಟ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬೃಹತ್ ಮೊತ್ತ ಬೆಂಬತ್ತಿ ಹೊರಟ ಮುಂಬೈ ತಂಡಕ್ಕೆ ರಾನ್ ರಿಕೆಲ್ಟನ್(22 ಎಸೆತದಲ್ಲಿ 37) ಮತ್ತು ರೋಹಿತ್ ಶರ್ಮಾ(13 ಎಸೆತದಲ್ಲಿ 19) ಅವರು ಉತ್ತಮ ಆರಂಭವನ್ನು ನೀಡಿದರು. ಆದರೆ ತಂಡದ ಮೊತ್ತ 57 ಆಗಿದ್ದಾಗ ರೋಹಿತ್ ಶರ್ಮಾ ಅವರು ಗಾಯಾಳುವಾಗಿ ನಿವೃತ್ತರಾಗುತ್ತಾರೆ. ಆ ಬಳಿಕ ಸೂರ್ಯಕುಮಾರ್ ಯಾದವ್(22 ಎಸೆತದಲ್ಲಿ 33) ಮತ್ತು ನಾಯಕ ಹಾರ್ದಿಕ್ ಪಾಂಡ್ಯ(22 ಎಸೆತದಲ್ಲಿ 40) ಮುಂಬೈ ಹೋರಾಟಕ್ಕೆ ಜೀವ ತುಂಬುತ್ತಾರೆ. ಅಂತಿಮ ಹಂತದಲ್ಲಿ ಶೆರ್ಫಾನ್ ರುದರ್ ಫೋರ್ಡ್ (31 ಎಸೆತದಲ್ಲಿ ಅಜೇಯ 71) ಸರ್ವಪ್ರಯತ್ನವನ್ನೂ ನಡೆಸುತ್ತಾರೆ. ಆದರೂ ಮುಂಬೈ ಕೇವಲ 18 ರನ್ ಗಳಿಂದ ಹಿಂದುಳಿಯುತ್ತದೆ.

ಸಾಲ್ಟ್- ಕೊಹ್ಲಿ ಭರ್ಜರಿ ಆರಂಭ

ಇದಕ್ಕೂ ಮೊದಲು ಆರ್ ಸಿಬಿ ತಂಡ ಆರಂಭಕಾರರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅವರು ಒದಗಿಸಿಕೊಟ್ಟ ಭರ್ಜರಿ ಆರಂಭದ ಮೇಲೆ ದೊಡ್ಡ ಮೊತ್ತ ಕಲೆ ಹಾಕುತ್ತದೆ. ಇವರಿಬ್ಬರು ಮೊದಲ ವಿಕೆಟ್ ಗೆ 10.5 ಓವರ್ ಳಲ್ಲಿ 120 ರನ್ ಗಳನ್ನು ಕಲೆ ಹಾಕುತ್ತಾರೆ. 36 ಎಸೆತಗಳನ್ನು ಎದುರಿಸಿದ ಫಿಲ್ ಸಾಲ್ಟ್ 6 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 78 ರನ್ ಬಾರಿಸುತ್ತಾರೆ. ಇನ್ನು ವಿರಾಟ್ ಕೊಹ್ಲಿ ಅವರು ಅನಾರೋಗ್ಯದ ಮಧ್ಯೆಯೂ 38 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದ 53 ರನ್ ಗಳಿಸಿ ಔಟಾಗುತ್ತಾರೆ.

ಇಡೀ ಇನ್ನಿಂಗ್ಸ್ ನಲ್ಲಿ ಗಮನ ಸೆಳೆದದ್ದು ನಾಯಕ ರಜತ್ ಪಾಟೀದಾರ್(20 ಎಸೆತದಲ್ಲಿ 53) ಅವರ ಹೊಡೆಬಡಿಯ ಆಟ. ಐಪಿಎಲ್ ನ ಅತಿ ವೇಗದ ಅರ್ಧಶತಕವನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡ ಅವರು 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಆರ್ ಸಿಬಿ ಪರ ಎರಡನೇ ಅತಿ ವೇಗದ ಅರ್ಧಶತಕವಾಗಿದೆ. ಅವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದವು. ಟಿಂ ಡೇವಿಡ್ ಅವರು 16 ಎಸೆತಗಳಿಂದ 34 ರನ್ ಬಾರಿಸಿ ನಾಟೌಟ್ ಆಗಿ ಉಳಿದರು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 240/4, ಫಿಲ್ ಸಾಲ್ಟ್ 78(36), ವಿರಾಟ್ ಕೊಹ್ಲಿ 50(38), ರಜತ್ ಪಾಟೀದಾರ್ 53(20), ಟಿಮ್ ಡೇವಿಡ್ ಅಜೇಯ 34(16), ಶಾರ್ದೂಲ್ ಠಾಕೂರ್ 32ಕ್ಕೆ1, ಹಾರ್ದಿಕ್ ಪಾಂಡ್ಯ 39ಕ್ಕೆ 1, ಮಿಚೆಲ್ ಸ್ಯಾಂಟ್ನರ್ 43ಕ್ಕೆ1.

ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 222/5, ಶರ್ಫೇನ್ ರುದರ್ ಫೋರ್ಡ್ 71(31), ಹಾರ್ದಿಕ್ ಪಾಂಡ್ಯ 40(22), ಸೂರ್ಯಕುಮಾರ್ ಯಾದವ್ 33(22), ರಾನ್ ರಿಕೆಲ್ಟನ್ 37(22), ಸುಯಶ್ ಶರ್ಮಾ 47ಕ್ಕೆ 2, ರಸಿಕ್ ಸಲಾಂ 23ಕ್ಕೆ 1, ಕೃನಾಲ್ ಪಾಂಡ್ಯ 26ಕ್ಕೆ1, ಜಾಕೋಬ್ ಡಫಿ 58ಕ್ಕೆ 1.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.