IPL 2026 : ರಾಜಸ್ಥಾನ ತಂಡದ ಎಡಗೈ ಬ್ಯಾಟ್ಸ್ ಮೆನ್ ವೈಭವ್ ಸೂರ್ಯವಂಶಿಯ ಅಬ್ಬರ ಈ ಬಾರಿಯ ಐಪಿಎಲ್ ನಲ್ಲೂ ಮುಂದುವರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅವರು ಬಾರಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತನ್ನ ಸೀಸನ್ ನ ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ.
ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಮಾರ್ಚ್ 30ರ ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಗದಿತ 20 ಓವರ್ ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಗುರಿ ತಲುಪಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಮಾಡುವ ವೇಳೆ ಪಿಚ್ ಬೌಲರ್ ಗಳಿಗೆ ಸಹಕಾರಿಯಂತೆ ಕಂಡುಬಂದಿತ್ತು. ಋತುರಾಜ್ ಗಾಯಕ್ವಾಡ್ ತಂಡ ಪ್ರತೀ ರನ್ ಗೂ ಪರದಾಡುತ್ತಿದ್ದಾಗ ರಾಜಸ್ಥಾನ ತಂಡ ಸಹ ಇದೇ ಪರಿಸ್ಥಿತಿ ಎದುರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಚೆನ್ನೈಗೆ ಯಾವುದೇ ಅವಕಾಶವನ್ನೂ ನೀಡಲಿಲ್ಲ. ಕಳೆದ ಐಪಿಎಲ್ ಸೀಸನ್ ನಲ್ಲಿ ಶರವೇಗದ ಶತಕ ಬಾರಿಸಿದ್ದ ವೈಭವ್ ಈ ಬಾರಿ ಮೊದಲ ಪಂದ್ಯದಲ್ಲೇ ಮಿಂಚಿದರು.
ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಪವರ್ ಪ್ಲೇನ 6 ಓವರ್ ಗಳಲ್ಲಿ 74 ರನ್ ಗಳನ್ನು ಕಲೆ ಹಾಕಿದರು. ಅಷ್ಟರಲ್ಲಿಯೇ ವೈಭವ್ ಅವರು 15 ಎಸೆತಗಳಿಂದ 52 ರನ್ ಗಳ ಗಡಿ ತಲುಪಿದರು. ಅದರಲ್ಲಿ ನಾಲ್ಕು ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದವು. ಪವರ್ ಪ್ಲೇ ಮುಗಿದ ಕೂಡಲೇ ಅವರ ವಿಕೆಟ್ ಪತನಗೊಂಡರೂ ಯಾವುದೇ ಪರಿಣಾಮ ಬೀರಲಿಲ್ಲ. ಅನುಭವಿ ಯಶಸ್ವಿ ಜೈಸ್ವಾಲ್ (36 ಎಸೆತದಲ್ಲಿ 38 ರನ್) ಅವರು ಧ್ರುವ್ ಜ್ಯುರೆಲ್(9 ಎಸೆತದಲ್ಲಿ 18 ರನ್) ಮತ್ತು ರಿಯಾನ್ ಪರಾಗ್(11 ಎಸೆತದಲ್ಲಿ ನಾಟೌಟ್ 14 ರನ್) ಅವರೊಂದಿಗೆ ಸಣ್ಣ ಸಣ್ಣ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನದ ವೇಗಿಗಳಾದ ನ್ಯಾಂಡ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಅವರ ಮೊನಚಾದ ದಾಳಿಗೆ ಒದ್ದಾಡಿದರು. ಬರ್ಗರ್ ಅವರು 2ನೇ ಓವರ್ ನ ಕೊನೇ ಎಸೆತದಲ್ಲಿ ಸಂಜು ಸ್ಯಾಮ್ಸನ್(7 ಎಸೆತದಲ್ಲಿ 6 ರನ್) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಚೆನ್ನೈಗೆ ಮೊದಲ ಆಘಾತ ನೀಡಿದರು. ಆ ಬಳಿಕ 3ನೇ ಓವರ್ ನ ಕೊನೇ ಎಸೆತದಲ್ಲಿ ಜೋಫ್ರಾ ಆರ್ಚರ್ ಅವರು ನಾಯಕ ರುತುರಾಜ್ ಗಾಯಕ್ನಾಡ್ (11 ಎಸೆತದಲ್ಲಿ 6) ಅವರ ವಿಕೆಟ್ ಅನ್ನು ಎಗರಿಸಿದರು. 4ನೇ ಓವರ್ ನ ಮೊದಲ ಎಸೆತದಲ್ಲಿ ಬರ್ಗರ್ ಅವರು ಆಯುಷ್ ಮ್ಹಾತ್ರೆ ಅವರನ್ನು ಖಾತೆ ತೆರೆಯುವ ಮೊದಲೇ ಔಟ್ ಮಾಡಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್ ರೇಟ್ ಸಂಪೂರ್ಣ ಬಿತ್ತು. ಜೊತೆಗೆ ವಿಕೆಟ್ ಗಳೂ ಪಟಪಟನೇ ಬೀಳುತ್ತಾ ಹೋದವು. ಒಂದು ಹಂತದಲ್ಲಂತೂ ತಂಡ 100ರ ಗಡಿ ದಾಟುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಆಲ್ರೌಂಡರ್ ಜಾಮಿ ಓವರ್ಟನ್ ಅವರು ತಾಳ್ಮೆಯಿಂದ ಆಡಿ 36 ಎಸೆತಗಳಲ್ಲಿ 43 ರನ್ ಬಾಚಿದ ಕಾರಣ ತಂಡ ಗೌರವಯುತ ಮೊತ್ತ ಕಲೆ ಹಾಕುವಂತಾಯಿತು. ಅವರು ಕೊನೇ ಓವರ್ ನಲ್ಲಿ ರನೌಟ್ ಆಗುವ ಮೂಲಕ ಚೆನ್ನೈ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಚೆನ್ನೈ ತಂಡವನ್ನು ಆರಂಭದಲ್ಲೇ ಕಟ್ಟಿಹಾಕಿದ ಬರ್ಗರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.
ಸಂಕ್ತಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ ಗಳಲ್ಲಿ 127, ಜಾಮಿ ಓವರ್ಟನ್ 43(36), ಕಾರ್ತಿಕ್ ಶರ್ಮಾ 18(15), ಸರ್ಫರಾಝ್ ಖಾನ್ 17(12), ಇತರೆ 16, ಜೋಫ್ರಾ ಆರ್ಚರ್ 19ಕ್ಕೆ 2, ನ್ಯಾಂಡ್ರೆ ಬರ್ಗರ್ 26ಕ್ಕೆ 2, ರವೀಂದ್ರ ಜಡೇಜಾ 18ಕ್ಕೆ 2.
ರಾಜಸ್ಥಾನ ರಾಯಲ್ಸ್ 12.1 ಓವರ್ ಗಳಲ್ಲಿ 128/2, ವೈಭವ್ ಸೂರ್ಯವಂಶಿ 52(17), ಯಶಸ್ವಿ ಜೈಸ್ವಾಲ್ 38(36), ಧ್ರುವ್ ಜ್ಯುರೆಲ್ 18(9). ರಿಯಾನ್ ಪರಾಗ್ 14(11), ಅಂಶುಲ್ ಕಾಂಬೋಜ್ 27ಕ್ಕೆ 2.

