ಇರಾನ್-ಇಸ್ರೇಲ್ ತೈಲಾಗಾರಗಳ ಮೇಲೆ ಪರಸ್ಪರ ದಾಳಿ – ಜಾಗತಿಕ ತೈಲ ಪೂರೈಕೆಯ ಮೇಲೆ ಆತಂಕ !

ಟೆಹ್ರಾನ್‌/ಜೆರುಸಲೇಂ, ಮಾ. 09 : ಇರಾನ್-ಇಸ್ರೇಲ್- ಅಮೆರಿಕ ಯುದ್ಧವು 9ನೇ ದಿನ ಪೂರೈಸಿದ್ದು, ಇರಾನ್ ಮತ್ತು ಇಸ್ರೇಲ್ ನಡುವೆ ಭಾನುವಾರವೂ ಭಾರೀ ದಾಳಿ-ಪ್ರತಿದಾಳಿ ನಡೆದಿದೆ. ಆಘಾತಕಾರಿ ವಿಚಾರವೆಂದರೆ, ಎರಡೂ ದೇಶಗಳು ಪರಸ್ಪರರ ತೈಲಾಗಾರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಇದು ಜಾಗತಿಕ ತೈಲ ಪೂರೈಕೆಯ ಸರಪಳಿಯ ಮೇಲೆ ಮತ್ತಷ್ಟು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಇರಾನ್ ಮೇಲೆ ಇನ್ನಷ್ಟು ದಾಳಿಯ ಆಘಾತ ಕಾದಿದೆ ಎಂದು ಇಸ್ರೇಲ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿಯು ನಡೆದಿದೆ.

Advertisement

ಮೊದಲಿಗೆ, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ 5 ಪ್ರಮುಖ ಇಂಧನ ಡಿಪೋಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ರಾತ್ರಿ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಇಬ್ಬರು ಟ್ಯಾಂಕರ್ ಚಾಲಕರು ಸೇರಿ 4 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ರಾಷ್ಟ್ರೀಯ ತೈಲ ಉತ್ಪನ್ನಗಳ ವಿತರಣಾ ಕಂಪನಿ ಸಿಇಒ ಹೇಳಿದ್ದಾರೆ. ದಾಳಿಯ ತೀವ್ರತೆಗೆ ಟೆಹ್ರಾನ್ ಆಗಸದಲ್ಲಿ ಬೆಂಕಿಯ ಉಂಡೆ ಎದ್ದಿದ್ದು, ದಟ್ಟ ಹೊಗೆಯು ನೆರೆಯ ಕರಾಜ್ ಪ್ರಾಂತ್ಯದಲ್ಲೂ ಕಾಣಿಸಿಕೊಂಡಿದೆ. ರಾತ್ರಿಯ ಆಗಸವು ಬೆಂಕಿಯ ಕೆನ್ನಾಲಿಗೆಯಿಂದಾಗಿ ಕೇಸರಿ ಬಣ್ಣಕ್ಕೆ ತಿರುಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಕಿಯ ನದಿ !

ತೈಲಾಗಾರದ ಮೇಲೆ ಇಸ್ರೇಲ್ ಯುದ್ಧವಿಮಾನಗಳು, ಕ್ಷಿಪಣಿಗಳು ಅಪ್ಪಳಿಸುತ್ತಿದ್ದಂತೆ, ಟೆಹ್ರಾನ್‌ನ ರಸ್ತೆಯುದ್ದಕ್ಕೂ ತೈಲ ಸೋರಿಕೆಯಾಗಿದ್ದು, ಆ ತೈಲಕ್ಕೆ ಪೂರ್ತಿ ಬೆಂಕಿ ಹೊತ್ತಿಕೊಂಡಿತ್ತು. ನಗರದ ಬೀದಿಯುದ್ದಕ್ಕೂ ಬೆಂಕಿಯ ನದಿ ಹರಿಯುತ್ತಿದೆ ಎಂದು ಇದನ್ನು ಸ್ಥಳೀಯರು ಬಣ್ಣಿಸಿದ್ದಾರೆ. ಈ ದಾಳಿಯಲ್ಲಿ ಶಹರಾನ್, ಅಘಾಸಿಯೇಯಂತಹ ಪ್ರಮುಖ ತೈಲಾಗಾರಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ಕೇಂದ್ರಕ್ಕೆ ಭಾರೀ ಹಾನಿಯಾಗಿದೆ. ಶನಿವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಅಗ್ನಿಶಾಮಕ ಪಡೆಗಳು ಹರಸಾಹಸ ಪಟ್ಟವು.

ಹೈಫಾ ಮೇಲೆ ಇರಾನ್‌ ಪ್ರತಿದಾಳಿ :

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರವೆಂಬಂತೆ, ಇಸ್ರೇಲ್‌ನ ಹೈಫಾದಲ್ಲಿರುವ ಅತಿದೊಡ್ಡ ತೈಲ ಶುದ್ದೀಕರಣ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆರ್ಥಿಕ ಮತ್ತು ರಕ್ಷಣಾ ವಲಯದಲ್ಲಿ ಇದು ಇಸ್ರೇಲ್‌ಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟುಮಾಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ತೈಲ ಘಟಕಕ್ಕೂ ಭಾರತಕ್ಕೂ ನಂಟಿರುವುದು ಕೂಡ ಭವಿಷ್ಯದ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.

ಭಾರತದ ನಂಟಿರುವ ತೈಲ ಘಟಕ:

ಹೈಫಾದಲ್ಲಿರುವ ಬೇಝನ್ ಗ್ರೂಪ್ ತೈಲ ಶುದ್ದೀಕರಣ ಘಟಕಕ್ಕೆ ಭಾನುವಾರ ಬೆಳಗ್ಗೆ ಇರಾನ್‌ನ ಪಡೆಗಳ ಖೈಬರ್ ಶೇಕನ್ ಘನ-ಇಂಧನ ಖಂಡಾಂತರ ಕ್ಷಿಪಣಿ ಅಪ್ಪಳಿಸಿದೆ. ಇದು ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕವಾಗಿದೆ. ಇಸ್ರೇಲ್‌ನ ದೇಶೀಯ ಇಂಧನ ಬೇಡಿಕೆಯ ಶೇ.50-60ರಷ್ಟನ್ನು ಈ ಘಟಕದಿಂದಲೇ ಪೂರೈಸಲಾಗುತ್ತದೆ.

  • ಹೈಫಾ ಬಂದರಿನಲ್ಲಿ ಭಾರತದ ಅದಾನಿ ಸಮೂಹ ಸಂಸ್ಥೆಯು ಶೇ.70ರಷ್ಟು ಷೇರುಗಳನ್ನು ಹೊಂದಿದೆ.
  • 2023ರಲ್ಲಿ ಅದಾನಿ ಸಂಸ್ಥೆಯು 1.2 ಶತಕೋಟಿ ಡಾಲರ್ ಪಾವತಿಸಿ ಈ ಷೇರು ಖರೀದಿಸಿತ್ತು
  • ತೈಲ ಶುದ್ದೀಕರಣ ಘಟಕದ ಮೇಲಾಗುವ ಯಾವುದೇ ದಾಳಿಯು ಬಂದರಿನ ಮೂಲಸೌಕರ್ಯಕ್ಕೆ ಅಪಾಯ ಉಂಟುಮಾಡುತ್ತದೆ
  • ಭಾರತಕ್ಕೆ ಹೈಫಾ ಕೇವಲ ವಾಣಿಜ್ಯ ಬಂದರಷ್ಟೇ ಆಗಿಲ್ಲ. ಬದಲಿಗೆ ಅದು ಮೆಡಿಟರೇನಿಯನ್ ಪ್ರವೇಶದ ದ್ವಾರವಾಗಿದೆ
  • ಭಾರತ- ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್‌ನ ಪ್ರಮುಖ ಟರ್ಮಿನಲ್ ಆಗಿಯೂ ಹೈಫಾ ಕಾರ್ಯನಿರ್ವಹಿಸುತ್ತಿದೆ
  • ಅದಾನಿ ಮಾತ್ರವಲ್ಲದೇ ರಿಲಯನ್ಸ್ ಇಂಡಸ್ಟ್ರೀಸ ಮತ್ತು ಎಲ್ ಆ್ಯಂಡ್ ಟಿ ಕೂಡ ಇಲ್ಲಿ ವಿವಿಧ ಯೋಜನೆಗಳ ಭಾಗವಾಗಿವೆ
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.