ನವದೆಹಲಿ, ಮಾ. 17 : ಮಧ್ಯಪ್ರಾಚ್ಯದಲ್ಲಿ ತೀವ್ರವಾಗುತ್ತಿರುವ ಯುದ್ಧ ಪರಿಸ್ಥಿತಿಯ ನಡುವೆಯೇ, ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ‘ಜಗತ್ತಿನಲ್ಲಿರುವ ಮುಸಲ್ಮಾನರನ್ನ’ ಉದ್ದೇಶಿಸಿ 6 ಅಂಶಗಳುಳ್ಳ ಬಹಿರಂಗ ಪತ್ರ ಬರೆದಿದ್ದಾರೆ. ಆ ಮೂಲಕ ಇಸ್ಲಾಮಿಕ್ ರಾಷ್ಟ್ರಗಳ ಮೌನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ಇರಾನ್ ರಾಯಭಾರಿ ಕಚೇರಿ ಈ ಪತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಯುದ್ಧದ ವಿವರಗಳಿಗಿಂತ ಹೆಚ್ಚಾಗಿ ಮುಸ್ಲಿಂ ರಾಷ್ಟ್ರಗಳ ನಿಲುವು ಮತ್ತು ಬೆಂಬಲದ ಕೊರತೆ ಕುರಿತು ಅಲಿ ಲಾರಿಜಾನಿ ಪ್ರಶ್ನಿಸಿದ್ದಾರೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುತ್ತಿದ್ದರೂ ಬಹುತೇಕ ಇಸ್ಲಾಮಿಕ್ ದೇಶಗಳು ಮೌನಕ್ಕೆ ಶರಣಾಗಿರುವುದನ್ನು ಅಲಿ ಲಾರಿಜಾನಿ ಕಟುವಾಗಿ ಟೀಕಿಸಿದ್ದಾರೆ. ಹಾಗೇ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿದ್ದಾರೆ.
ಇರಾನ್‌ನ ಸುಪ್ರೀಂ ಲೀಡರ್, ಸೇನಾ ಕಮಾಂಡರ್‌ಗಳು, ಸಾವಿರಾರು ಸಾಮಾನ್ಯ ನಾಗರಿಕರು ಹತ್ಯೆಗೀಡಾಗುತ್ತಿದ್ದರೂ.. ಇಸ್ಲಾಮಿಕ್ ದೇಶಗಳು ಮೂಕ ಪ್ರೇಕ್ಷಕರಾಗಿವೆ ಎಂದು ಅಲಿ ಲಾರಿಜಾನಿ ತಮ್ಮ ಬೇಸರವನ್ನ ಪತ್ರದ ಮುಖೇನ ಹೊರಹಾಕಿದ್ದಾರೆ.
ದೇವರ ಹೆಸರಿನಲ್ಲಿ…
‘ಅತಿ ಕರುಣಾಮಯನಾದ, ದಯಾಮಯನಾದ ಅಲ್ಲಾಹ್ ಹೆಸರಿನಲ್ಲಿ…
ಜಗತ್ತಿನಲ್ಲಿರುವ ಎಲ್ಲಾ ಮುಸ್ಲಿಮರಿಗೆ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಸರ್ಕಾರಗಳಿಗೆ..’ ಎಂದು ಉಲ್ಲೇಖಿಸಿ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಲಾರಿಜಾನಿ ಪತ್ರ ಬರೆದಿದ್ದಾರೆ.
ಮೊದಲನೇ ಅಂಶ – ಮೋಸದ ದಾಳಿ
‘’ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಅಮೆರಿಕ – ಇಸ್ರೇಲ್ ಮೈತ್ರಿಯ ಮೋಸದ ದಾಳಿಗೆ ಇರಾನ್ ಗುರಿಯಾಯಿತು. ಈ ದಾಳಿಯ ಉದ್ದೇಶ ಇರಾನ್ ಅನ್ನು ನಾಶಪಡಿಸುವುದು. ಈ ದಾಳಿಯಿಂದಾಗಿ ಇರಾನ್ ಸುಪ್ರೀಂ ಲೀಡರ್ ಹತರಾದರು. ಹಲವಾರು ಸಾಮಾನ್ಯ ನಾಗರಿಕರು ಮತ್ತು ಸೇನಾ ಕಮಾಂಡರ್‌ಗಳು ಸಾವನ್ನಪ್ಪಿದರು’’ ಎಂದು ಪತ್ರದಲ್ಲಿ ಅಲಿ ಲಾರಿಜಾನಿ ಉಲ್ಲೇಖಿಸಿದ್ದಾರೆ.
ಎರಡನೇ ಅಂಶ – ನೆರವಿಗೆ ಬಾರದ ಇಸ್ಲಾಮಿಕ್ ರಾಷ್ಟ್ರಗಳು
‘’ಕೆಲವು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿದರೆ (ಅದರಲ್ಲೂ ಕೇವಲ ರಾಜಕೀಯ ಮಟ್ಟದಲ್ಲಿ ಮಾತ್ರ) ಯಾವ ಇಸ್ಲಾಮಿಕ್ ರಾಷ್ಟ್ರವೂ ಇರಾನ್ ನೆರವಿಗೆ ಧಾವಿಸಿಲ್ಲ. ಆದರೂ ದೃಢ ಸಂಕಲ್ಪದಿಂದ ಇರಾನ್ ಜನತೆ ದುಷ್ಟ ಶತ್ರುಗಳಿಗೆ ಪ್ರತಿರೋಧ ತೋರುತ್ತಿದ್ದಾರೆ. ಇಂದು ಆ ಶತ್ರುವಿಗೆ ಈ ಸಂಕಷ್ಟದಿಂದ ಹೇಗೆ ಹೊರಬರಬೇಕು ಎಂಬುದೇ ತಿಳಿಯುತ್ತಿಲ್ಲ’’ ಎಂದು ಪತ್ರದ ಮೂಲಕ ಇಸ್ಲಾಮಿಕ್ ರಾಷ್ಟ್ರಗಳಿಗೆ ತಿರುಗೇಟು ನೀಡಿದ್ದಾರೆ ಅಲಿ ಲಾರಿಜಾನಿ.
ಮೂರನೇ ಅಂಶ – ಮುಸಲ್ಮಾನನೇ ಅಲ್ಲ!
‘’ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಇರಾನ್ ತನ್ನ ಪ್ರತಿರೋಧ ಮುಂದುವರೆಸುತ್ತದೆ. ಆದರೆ ಕೆಲವು ಇಸ್ಲಾಮಿಕ್ ರಾಷ್ಟ್ರಗಳ ನಡೆ ಪ್ರವಾದಿ ಹೇಳಿದ ಮಾತಿಗೆ ವಿರುದ್ಧವಾಗಿಲ್ಲವೇ? – “ಒಬ್ಬ ಮುಸಲ್ಮಾನನ ಕೂಗಿಗೆ ನೀವು ಪ್ರತಿಕ್ರಿಯಿಸದಿದ್ದರೆ, ನೀವು ಮುಸಲ್ಮಾನರೇ ಅಲ್ಲ”? ಇದು ಯಾವ ರೀತಿಯ ಇಸ್ಲಾಂ?’’ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ ಅಲಿ ಲಾರಿಜಾನಿ
ನಾಲ್ಕನೇ ಅಂಶ – ಯಾವ ಪಾಳೆಯದಲ್ಲಿದ್ದೀರಿ?
‘’ತಮ್ಮ ದೇಶದಲ್ಲಿರುವ ಅಮೆರಿಕ ಸೇನಾ ತಾಣಗಳು ಹಾಗೂ ಇಸ್ರೇಲ್ ಹಿತಾಸಕ್ತಿಗಳನ್ನು ಇರಾನ್ ಗುರಿಯಾಗಿಸಿದ್ದರಿಂದ, ಇರಾನ್ ಈಗ ತಮ್ಮ ಶತ್ರುವಾಗಿದೆ ಎಂದು ಕೆಲ ದೇಶಗಳು ಘೋಷಿಸಿವೆ. ಆದರೆ, ನಿಮ್ಮ ದೇಶಗಳಲ್ಲಿ ಇರುವ ಅಮೆರಿಕ ಸೇನಾತಾಣಗಳಿಂದ ಇರಾನ್ ಮೇಲೆ ದಾಳಿಗಳು ನಡೆಯುತ್ತಿರುವಾಗ, ಇರಾನ್ ಮೌನವಾಗಿಯೇ ಇರಬೇಕಿತ್ತೇ? ಇದು ಕೇವಲ ನೆಪ ಮಾತ್ರ. ಇಂದಿನ ಈ ಸಂಘರ್ಷದಲ್ಲಿ ಒಂದು ಕಡೆ ಅಮೆರಿಕ ಮತ್ತು ಇಸ್ರೇಲ್ ಇದ್ದರೆ, ಮತ್ತೊಂದು ಕಡೆ ಮುಸ್ಲಿಂ ಇರಾನ್ ಮತ್ತು ಪ್ರತಿರೋಧ ಶಕ್ತಿಗಳು ನಿಂತಿವೆ. ನೀವು ಯಾವ ಪಾಳೆಯದಲ್ಲಿದ್ದೀರಿ?’’ ಎಂದು ಅತ್ಯಂತ ಸೂಕ್ಷ್ಮ ಪ್ರಶ್ನೆಯನ್ನ ಇಸ್ಲಾಮಿಕ್ ರಾಷ್ಟ್ರಗಳ ಮುಂದಿಟ್ಟಿದ್ದಾರೆ ಅಲಿ ಲಾರಿಜಾನಿ.

