ಬೆಂಗಳೂರು : ಕೈ ಅಭ್ಯರ್ಥಿ ಸೋಲಿಸಲು ಷಡ್ಯಂತ್ರ – ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಗೆ ಆತಂಕ !

ಬೆಂಗಳೂರು, ಏ. 15 : ದಾವಣಗೆರೆ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಷಡ್ಯಂತ್ರ ರೂಪಿಸಿದ್ದರು ಎಂಬ ಆಡಿಯೋ ದಾಖಲೆ ಕಾಂಗ್ರೆಸ್‌ ಹೈಕಮಾಂಡ್‌ ಕೈಸೇರಿದೆ. ಸದ್ಯ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರ ಪೈಕಿ 2 ನೇ ತಲೆದಂಡವಾಗಿದೆ. ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ ಆಪಾದನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಬೆಲೆ ತೆತ್ತಿದ್ದಾರೆ. ಇದೇ ಆರೋಪ ಎದುರಿಸುತ್ತಿರುವ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಗೂ ಆತಂಕ ಶುರುವಾಗಿದೆ.

ನಸೀರ್‌ ಅಹ್ಮದ್‌ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ನಸೀರ್‌ 2023ರ ಜೂನ್‌ 1ರಿಂದ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದರು. ದಾವಣಗೆರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮೂರು ದಿನಗಳ ಹಿಂದಷ್ಟೇ ಅಬ್ದುಲ್‌ ಜಬ್ಬರ್‌ ಅವರಿಗೆ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸ್ಥಾನದಿಂದ ಗೇಟ್‌ ಪಾಸ್‌ ನೀಡಲಾಗಿತ್ತು. ಜತೆಗೆ ಈ ಅಲ್ಪಸಂಖ್ಯಾತರ ಘಟಕವನ್ನೇ ವಿಸರ್ಜಿಸಲಾಗಿದೆ. ಜಬ್ಬರ್‌ ಹಾಗೂ ನಸೀರ್‌ ಅಹ್ಮದ್‌ ತಲೆದಂಡದ ಬೆನ್ನಲ್ಲೇ ಇದೇ ಆಪಾದನೆ ಎದುರಿಸುತ್ತಿರುವ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಗೂ ಎದೆಬಡಿತ ಜೋರಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ಗೆ ಸಮುದಾಯದಿಂದ ಬೇಡಿಕೆ ಇತ್ತು. ಆದರೆ, ಹಲವು ಸುತ್ತಿನ ಕಸರತ್ತು ನಡೆಸಿದ ಬಳಿಕ ಪಕ್ಷವು ಸಮರ್ಥ್‌ ಶಾಮನೂರುಗೆ ಟಿಕೆಟ್‌ ನೀಡಿತ್ತು. ಇದರಿಂದ ಮುನಿಸಿಕೊಂಡಿದ್ದ ಜಮೀರ್‌, ನಸೀರ್‌ ಹಾಗೂ ಜಬ್ಬರ್‌ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಸಂಬಂಧ ಪಕ್ಷದ ಸೂಚನೆಯನ್ನು ನಿರ್ಲಕ್ಷಿಸಿದರು. ಚುನಾವಣಾ ಪ್ರಚಾರದಿಂದ ಹೊರಗುಳಿದರು ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಆಡಿಯೋ ದಾಖಲೆ ಹೈಕಮಾಂಡ್‌ ಕೈಸೇರಿದೆ
ಈ ಮೂವರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಅಧಿಕೃತ ಅಭ್ಯರ್ಥಿಯನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದರು ಎಂದು ಕಾಂಗ್ರೆಸ್‌ನ ಇತರ ಮುಸ್ಲಿಂ ನಾಯಕರೇ ಗಂಭೀರ ಆಪಾದನೆ ಮಾಡಿದ್ದರು. ಈ ಸಂಬಂಧ ಎಐಸಿಸಿಗೆ ದೂರು ಸಲ್ಲಿಕೆಯಾಗಿತ್ತು. ಕ್ಷೇತ್ರದಲ್ಲಿ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಅಭಿಷೇಕ್‌ ದತ್‌ ವರದಿಯಲ್ಲೂ ಈ ಅಂಶಗಳಿದ್ದವು ಎನ್ನಲಾಗಿದೆ. ಇನ್ನೊಂದು ಗಂಭೀರ ವಿಚಾರವೆಂದರೆ, ಈ ಆಪಾದನೆ ಬಗ್ಗೆ ಆಡಿಯೋ ದಾಖಲೆ ಹೈಕಮಾಂಡ್‌ ಕೈಸೇರಿದೆ. ಹಾಗಾಗಿ ಎಐಸಿಸಿ ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿತು ಎಂದು ಹೇಳಲಾಗುತ್ತಿದೆ.

ಜಮೀರ್‌ಗೆ ಸಿಎಂ ಬುಲಾವ್‌
ಈ ಬೆಳವಣಿಗೆ ಬೆನ್ನಿಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸತಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಮಂಗಳವಾರ ಬುಲಾವ್‌ ನೀಡಿ ಕರೆಸಿಕೊಂಡರು. ಸಿಎಂ ಸರಕಾರಿ ನಿವಾಸಕ್ಕೆ ಬಂದ ಜಮೀರ್‌ ತಮ್ಮ ವಿರುದ್ಧದ ಆಪಾದನೆಗಳಿಗೆ ವಿವರಣೆ ನೀಡಲು ಆರಂಭಿಸುತ್ತಿದ್ದಂತೆ ಮುಖ್ಯಮಂತ್ರಿಯವರು ಅರ್ಧಕ್ಕೇ ತಡೆದರು ಎನ್ನಲಾಗಿದೆ. ಏನೇ ವಿವರಣೆ ಇದ್ದರೂ ಹೈಕಮಾಂಡ್‌ ನಾಯಕರಿಗೆ ನೀಡುವಂತೆ ಸೂಚಿಸಿದ್ದು, ಮತ್ತೊಮ್ಮೆ ಬರುವಂತೆ ಸೂಚನೆ ನೀಡಿ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು ಎಂದು ತಿಳಿದು ಬಂದಿದೆ.

ಸರದಿ ಮುಂದುವರಿಕೆ
”ಅಲ್ಪಸಂಖ್ಯಾತರಿಗೆ ಟಿಕೆಟ್‌ ಬೇಡಿಕೆ ನಿರಾಕರಣೆಯಿಂದ ಅಸಮಾಧಾನವಾಗಿದ್ದು ನಿಜವಾದರೂ ಪಕ್ಷದ ಕೆಲಸ ಮಾಡಿದ್ದೇನೆ,” ಎಂದು ಜಮೀರ್‌ ಅಹ್ಮದ್‌ ಸಮಜಾಯಿಷಿ ನೀಡಿದ್ದರೂ ಆತಂಕ ಎದುರಾಗಿದೆ. ಕ್ಷೇತ್ರದಲ್ಲಿನ ಮುಸ್ಲಿಂ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಟಾಸ್ಕ್‌ ನಿರ್ಲಕ್ಷಿಸಿದ್ದಾರೆ ಎಂಬ ಆಪಾದನೆ ಗಂಭೀರವಾದುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಭಾವಿ ಅಲ್ಪಸಂಖ್ಯಾತ ನಾಯಕರಾಗಿ ಹೊರಹೊಮ್ಮಿದ್ದ ಮತ್ತು ಇತರ ರಾಜ್ಯಗಳಲ್ಲೂ ಪಕ್ಷದ ಪರ ತಾರಾ ಪ್ರಚಾರಕರಾಗಿರುವ ಜಮೀರ್‌ ವಿರುದ್ಧವೂ ಕ್ರಮ ಜಾರಿಯಾಗುತ್ತದಾ ಎಂಬ ಪ್ರಶ್ನೆ ಎದ್ದಿದೆ.

ಪಕ್ಷದಲ್ಲಿ ಶಿಸ್ತು ಮುಖ್ಯ
ದಾವಣಗೆರೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿತ್ತು. ನಂತರ ಏನೇನಾಯ್ತು ಎಲ್ಲರಿಗೂ ಗೊತ್ತಿದೆ. ಸಿಎಂ ತಮ್ಮದೇ ಮೂಲಗಳಿಂದ ಮಾಹಿತಿ ಪಡೆದು ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಅವರನ್ನು ಸ್ಥಾನದಿಂದ ಬಿಡುಗಡೆ ಮಾಡಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯ. ಶಿಸ್ತು ಇಲ್ಲದಿದ್ದರೆ ಪಕ್ಷ ನಡೆಸುವುದು ಕಷ್ಟ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಟಿಕೆಟ್‌ ಕೊಡದಿರುವುದರಿಂದ ಅಸಮಧಾನವಾಗಿತ್ತು ಎಂದ ಜಮೀರ್ ಅಲ್ಪಸಂಖ್ಯಾತರಿಗೆ ಅವಕಾಶ ಕೇಳಿ 7 ಮುಸ್ಲಿಂ ಅಭ್ಯರ್ಥಿಗಳ ಹೆಸರು ನೀಡಿದ್ದೆ. ಟಿಕೆಟ್‌ ಕೊಡದಿರುವುದರಿಂದ ಅಸಮಧಾನವಾಗಿತ್ತು. ಆದರೆ, ಬಳಿಕ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆ. ನನ್ನನ್ನು ನಾಯಕ ಎಂದು ಹೇಳಿಕೊಳ್ಳುವುದಿಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.