ಜಮ್ಮು : ಮಾಜಿ ಸಿಎಂ ಡಾ. ಫಾರೂಕ್ ಅಬ್ದುಲ್ಲಾ ಕೊಲೆಗೆ ಯತ್ನ – ಪವಾಡ ಸದೃಶ್ಯವಾಗಿ ಪಾರು

ಜಮ್ಮು, ಮಾ. 12 : ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಸರೆನ್ಸ್ (ಎನ್‌ಸಿ) ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ರಾತ್ರಿ ನಡೆದ ಭೀಕರ ಕೊಲೆಯತ್ನವೊಂದು ವಿಫಲವಾಗಿದೆ. ನಗರದ ಹೊರವಲಯದ ‘ಗ್ರೇಟರ್ ಕೈಲಾಶ್’ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ಸಂಭವಿಸಿದ್ದು, ಫಾರೂಕ್ ಅಬ್ದುಲ್ಲಾ ಅವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

Advertisement

ಪಕ್ಷದ ಹಿರಿಯ ನಾಯಕ ಬಿ.ಎಸ್. ಚೌಹಾಣ್ ಅವರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಬ್ದುಲ್ಲಾ ಅವರು ಆಗಮಿಸಿದ್ದರು. ಸಮಾರಂಭಮುಗಿಸಿ ಹೊರಬರುತ್ತಿದ್ದಾಗ, ಜನರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅತಿ ಸಮೀಪದಿಂದ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್, ಗುರಿ ತಪ್ಪಿದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಎಚ್ಚೆತ್ತ ರಾಷ್ಟ್ರೀಯ ಭದ್ರತಾ ಪಡೆ (NSG) ಕಮಾಂಡೋಗಳು ಮತ್ತು ಭದ್ರತಾ ಸಿಬ್ಬಂದಿ ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತನಿಂದ ಶಾಕಿಂಗ್ ಮಾಹಿತಿ
ಬಂಧಿತ ವ್ಯಕ್ತಿಯನ್ನು ಜಮ್ಮುವಿನ ಹಳೆಯ ಮಂಡಿ ನಿವಾಸಿ ಕಮಲ್ ಸಿಂಗ್ ಜಮ್ರಾಲ್ (63) ಎಂದು ಗುರುತಿಸಲಾಗಿದೆ. ಪ್ರಾಥಮಿಕ ವಿಚಾರಣೆಯ ವೇಳೆ ಆತ ನೀಡಿದ ಹೇಳಿಕೆ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. “ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಹೊಂಚು ರೂಪಿಸುತ್ತಿದ್ದೆ, ಇವತ್ತು ಆ ಕಾಲ ಕೂಡಿಬಂದಿತ್ತು” ಎಂದು ಆತ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ಹೇಳಿದ್ದಾನೆ. ಈತ ಯಾವುದೋ ಅನಾಮಧೇಯ ‘ಜಾಗರಣ ಮಂಚ್’ನ ಅಧ್ಯಕ್ಷನೆಂದು ಹೇಳಿಕೊಂಡಿದ್ದು, ಕೃತ್ಯದ ವೇಳೆ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ.

ಭದ್ರತಾ ಲೋಪದ ಬಗ್ಗೆ ಆಕ್ರೋಶ
Z+ ಶ್ರೇಣಿಯ ಭದ್ರತೆ ಹೊಂದಿರುವ ಫಾರೂಕ್ ಅಬ್ದುಲ್ಲಾ ಅವರ ಬಳಿಗೆ ಪರವಾನಗಿ ಹೊಂದಿದ ಪಿಸ್ತೂಲು ಹಿಡಿದು ವ್ಯಕ್ತಿಯೊಬ್ಬ ಬರಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎದ್ದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಅಲ್ಲಾಹನ ಕೃಪೆಯಿಂದ ತಂದೆಯವರು ಅಪಾಯದಿಂದ ಪಾರಾಗಿದ್ದಾರೆ. ಇದು ಗಂಭೀರ ಭದ್ರತಾ ಲೋಪವಾಗಿದೆ” ಎಂದು ಕಿಡಿಕಾರಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.