ಮುಂಬೈ, ಏ. 28 : ದೇಶದ ಆರ್ಥಿಕ ರಾಜಧಾನಿ ಮುಂಬೈನ ನಯಾ ನಗರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಇಬ್ಬರು ಭದ್ರತಾ ಸಿಬ್ಬಂದಿಯ ಧರ್ಮವನ್ನು ಕೇಳಿ, ಅವರಿಗೆ ಇಸ್ಲಾಂ ಧರ್ಮದ ‘ಕಲ್ಮಾ’ ಪಠಿಸುವಂತೆ ಒತ್ತಾಯಿಸಿ ಚಾಕುವಿನಿಂದ ಇರಿದಿದ್ದ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೈಬ್ ಜುಬೇರ್ ಅನ್ಸಾರಿ ಬಂಧಿತ ಆರೋಪಿ. ಈತ ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ವೋಕಹಾರ್ಡ್ ಆಸ್ಪತ್ರೆಯ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಬಳಿ ತೆರಳಿದ್ದನು. ಅಲ್ಲಿ ಕರ್ತವ್ಯದಲ್ಲಿದ್ದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರತೋ ಸೇನ್ ಎಂಬ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಡ್ಡಗಟ್ಟಿದ ಅನ್ಸಾರಿ, ಅವರ ಧರ್ಮದ ಬಗ್ಗೆ ವಿಚಾರಿಸಿದ್ದಾನೆ. ಅಷ್ಟೇ ಅಲ್ಲದೆ, ಅವರಿಗೆ ಬಲವಂತವಾಗಿ ‘ಕಲ್ಮಾ’ ಪಠಿಸುವಂತೆ ಧಮಕಿ ಹಾಕಿದ್ದಾನೆ. ಅವರು ನಿರಾಕರಿಸಿದಾಗ ತನ್ನ ಬಳಿಯಿದ್ದ ಚಾಕುವಿನಿಂದ ಇಬ್ಬರಿಗೂ ಮನಬಂದಂತೆ ಇರಿದು ಅಲ್ಲಿಂದ ಪರಾರಿಯಾಗಿದ್ದನು.
ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಿಶ್ರಾ ಹೇಗೋ ನಡೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾದರು. ಆದರೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸುಬ್ರತೋ ಸೇನ್ ಅವರು ಅಲ್ಲೇ ಸಮೀಪದ ಕ್ಯಾಬಿನ್‌ನಲ್ಲಿ ಅವಿತು ಕುಳಿತಿದ್ದರು. ಈ ವೇಳೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನಯಾಬ್ ಶೇಖ್ ಎಂಬುವವರು ಗಾಯಾಳುವನ್ನು ಗಮನಿಸಿ, ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಕೇವಲ 90 ನಿಮಿಷಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಯತ್ನ ಮತ್ತು ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟಿಸುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್‌ಗೆ ಹಾಜರುಪಡಿಸಿದ ನಂತರ ಅನ್ಸಾರಿಯನ್ನು ಮೇ 4ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.
ತನಿಖೆಯ ವೇಳೆ ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿವೆ. ಅನ್ಸಾರಿ ಹಲವು ವರ್ಷಗಳ ಕಾಲ ಅಮೆರಿಕದಲ್ಲಿದ್ದನು. ಅಲ್ಲಿ ಕೆಲಸ ಸಿಗದೆ ಭಾರತಕ್ಕೆ ಮರಳಿದ್ದ ಈತ, ಮೀರಾ ರೋಡ್ ಪ್ರದೇಶದಲ್ಲಿ ಒಬ್ಬನೇ ವಾಸಿಸುತ್ತಾ ಆನ್‌ಲೈನ್ ಮೂಲಕ ಕೆಮಿಸ್ಟ್ರಿ ಪಾಠಗಳನ್ನು ಮಾಡುತ್ತಿದ್ದನು. ಈತನ ಮೊಬೈಲ್ ಮತ್ತು ಡೈರಿಗಳನ್ನು ಪರಿಶೀಲಿಸಿದಾಗ ‘ಐಸಿಸ್’ (ISIS), ‘ಜಿಹಾದ್’ ಮತ್ತು ‘ಗಾಜಾ’ ಅಂತಹ ಪದಗಳು ಕಂಡುಬಂದಿವೆ. ಆನ್‌ಲೈನ್‌ನಲ್ಲಿ ಪ್ರಚೋದನಾತ್ಮಕ ವಿಡಿಯೋಗಳನ್ನು ನೋಡಿ ಈತ ಹಾದಿ ತಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ (ATS) ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು ಮತ್ತು ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

