ಕೇರಳ : ಶಾಲೆಗಳಲ್ಲಿ ಲಿಪ್ ಸ್ಟಿಕ್ ಬಳಕೆ ನಿಷೇಧ – “ಲಿಪ್‌ಸ್ಟಿಕ್‌ ಮುಕ್ತ ಕ್ಯಾಂಪಸ್‌” ಯೋಜನೆ

ಕೇರಳ, ಜೂ. 16 : ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಲಿಪ್‌ಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಶಿಶು ಕಲ್ಯಾಣ ಸಮಿತಿ ಮುಂದಾಗಿದೆ. ಹೆಚ್ಚುತ್ತಿರುವ ಸೌಂದರ್ಯ ವರ್ಧಕ ವಸ್ತುಗಳ ಬಳಕೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ನೂತನ ಪ್ರಯೋಗದೊಂದಿಗೆ ಕೇರಳ ರಾಜ್ಯ ಶಿಶು ಕಲ್ಯಾಣ ಸಮಿತಿಯು ಸಕ್ರಿಯವಾಗಿ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ.

Advertisement

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಶಾಲೆಗಳು ಲಿಪ್‌ಸ್ಟಿಕ್‌ ಮುಕ್ತ ಕ್ಯಾಂಪಸ್‌ ಆಗಿ ಬದಲಾವಣೆಯಾಗಲಿವೆ. ಅಲರ್ಜಿ, ಹಾರ್ಮೋನ್‌ ಏರುಪೇರು ಮಾತ್ರವಲ್ಲದೆ, ಕ್ಯಾನ್ಸರ್‌ಗೂ ಕಾರಣವಾಗಬಹುದಾದ ಲಿಪ್‌ಸ್ಟಿಕ್‌ಗಳನ್ನು ಶಾಲೆಗಳಿಂದ ಸಂಪೂರ್ಣವಾಗಿ ದೂರೀಕರಿಸುವ ಪ್ರಯತ್ನವಾಗಿ ʼಲಿಪ್‌ಸ್ಟಿಕ್‌ ಮುಕ್ತ ಕ್ಯಾಂಪಸ್‌ʼ ಯೋಜನೆಯತ್ತ ಶಿಶು ಕಲ್ಯಾಣ ಸಮಿತಿ ಹೆಜ್ಜೆ ಇರಿಸಿದೆ.

ಮಕ್ಕಳಲ್ಲಿ ಲಿಪ್‌ಸ್ಟಿಕ್‌ ಉಪಯೋಗದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ ನೀಡುವ ಲಿಪ್‌ಸ್ಟಿಕ್‌ಫ್ರೀ ಕ್ಯಾಂಪಸ್‌ ಪ್ರಚಾರ ವಿಡಿಯೊಗಳು, ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಲಿಪ್‌ಸ್ಟಿಕ್‌ ಬಳಕೆ ಅಪಾಯಕಾರಿನಾ?

ಕೆಲವು ಕಳಪೆ ಗುಣಮಟ್ಟದ ಲಿಪ್‌ಸ್ಟಿಕ್‌ಗಳಲ್ಲಿ ಸೀಸ, ಕ್ಯಾಡ್ಮಿಯಂನಂತಹ ವಿಷಕಾರಿ ರಾಸಾಯನಿಕಗಳು ಅಡಕವಾಗಿರುತ್ತವೆ. ಇವುಗಳನ್ನು ಪ್ರತಿದಿನ ಹಾಗೂ ದೀರ್ಘಕಾಲ ಬಳಸುವುದರಿಂದ ಬಾಯಿ ಮತ್ತು ತುಟಿ ಕ್ಯಾನ್ಸರ್‌ ಬರುವ ಅಪಾಯ ಹೆಚ್ಚುತ್ತದೆ. ಅಗ್ಗದ ಲಿಪ್‌ಸ್ಟಿಕ್‌ಗಳಲ್ಲಿ ಸೀಸ, ಆರ್ಸೆನಿಕ್‌ ಮತ್ತು ಕ್ಯಾಡ್ಮಿಯಂನಂತಹ ಲೋಹಗಳು ಅಡಕವಾಗಿರುತ್ತವೆ. ಇವು ದೇಹ ಸೇರಿದಾಗ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ. ಈ ರಾಸಾಯನಿಕಗಳು ನಿರಂತರವಾಗಿ ಬಾಯಿಯ ಮೂಲಕ ಹೊಟ್ಟೆ ಸೇರುವುದರಿಂದ ಕ್ಯಾನ್ಸರ್‌ ಅಪಾಯಗಳು ಹೆಚ್ಚಾಗಬಹುದು ಎಂದು ಸಂಶೋಧನೆಗಳು ಎಚ್ಚರಿಸಿವೆ. ಹಿರಿಯರನ್ನು ಹೋಲಿಸಿದರೆ ಮಕ್ಕಳ ಮೇಲೆ ಇವುಗಳ ದುಷ್ಪರಿಣಾಮಗಳು ಗಂಭೀರವಾಗಿರುತ್ತವೆ.

ಲಿಪ್‌ಸ್ಟಿಕ್‌, ಐ ಲೈನರ್‌, ಐ ಶಾಡೋ, ಬ್ಲಶ್‌, ಫೇಸ್‌ ಕ್ರೀಂ ಮೊದಲಾದವುಗಳಲ್ಲಿ ಸೀಸ, ಕಾಡ್ಮಿಯಂ ಮೊದಲಾದ ಅಂಶಗಳು ಅಡಕವಾಗಿವೆ. ಇವುಗಳ ಪ್ರಮಾಣ ಹೆಚ್ಚಿದರೆ ಚರ್ಮಕ್ಕೆ ಬಾಧಕವಾಗುವುದಲ್ಲದೆ ಆಂತರಿಕ ಅವಯವಗಳನ್ನು ಕೂಡಾ ಬಾಧಿಸುವಂತಹ ಆರೋಗ್ಯ ಸಮಸ್ಯೆಗಳತ್ತ ಕೊಂಡೊಯ್ಯಲಿದೆ.

ಕೊಲ್ಲಂ, ಎರ್ನಾಕುಳಂ, ಕೋಳಿಕ್ಕೋಡು ಜಿಲ್ಲೆಗಳಲ್ಲಿ ಕರುಳು-ಗುದನಾಳ ಕ್ಯಾನ್ಸರ್‌ ಬಾಧಿತ ಮಕ್ಕಳ ಸಂಖ್ಯೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚುತ್ತಿರುವುದಾಗಿ ತಿರುವನಂತಪುರ ರೀಜನಲ್‌ ಕ್ಯಾನ್ಸರ್‌ ಕೇಂದ್ರದಿಂದ ಅಧ್ಯಯನ ವರದಿ ಲಭಿಸಿದ ಹಿನ್ನೆಲೆಯಲ್ಲಿ ಇಂತಹದೊಂದು ಯೋಜನೆಯನ್ನು ರಾಜ್ಯದ ಶಾಲೆಗಳಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ.

ಬಿಡುವಿನ ವೇಳೆ ಶಾಲೆಗಳಲ್ಲಿ ಹೆಚ್ಚಾಗುತ್ತಿದೆ ಸೌಂಧರ್ಯವರ್ಧಕಗಳ ಬಳಕೆ

ಲಿಪ್‌ಸ್ಟಿಕ್‌ ಮೊದಲಾದ ಸೌಂದರ್ಯ ವರ್ಧಕ ವಸ್ತುಗಳೊಂದಿಗೆ ಶಾಲೆಗೆ ಬರುವ ಹೆಣ್ಮಕ್ಕಳು ತರಗತಿಗಳ ಬಿಡುವಿನ ವೇಳೆ ಇವುಗಳನ್ನು ಉಪಯೋಗಿಸುತ್ತಿರುವುದಾಗಿ ಅಧ್ಯಾಪಕರು ಹೇಳುತ್ತಿದ್ದಾರೆ. ಮಕ್ಕಳು ಅಮಿತವಾಗಿ ಇದನ್ನು ತುಟಿಗೆ ಲೇಪಿಸುತ್ತಾರೆ. ಮಕ್ಕಳ ಚರ್ಮ ಮೃದುವಾಗಿರುವುದರಿಂದ ಇದರಲ್ಲಿ ಅಡಕವಾಗಿರುವ ರಾಸಾಯನಿಕ ವಸ್ತುಗಳನ್ನು ಶರೀರವು ಬೇಗನೇ ಎಳೆದುಕೊಳ್ಳುತ್ತದೆ. ಅಲರ್ಜಿ, ಹಾರ್ಮೋನ್‌ ಸಮಸ್ಯೆಗಳು, ಬೆಳವಣಿಗೆ ವೈಕಲ್ಯಗಳು, ಕ್ಯಾನ್ಸರ್‌ ಸಾಧ್ಯತೆಗಳಿಗೆಲ್ಲ ಇದು ಕಾರಣವಾಗಬಹುದು.

ಇವುಗಳನ್ನು ಉಪಯೋಗಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಮಕ್ಕಳಿಗೆ ತರಗತಿ ನೀಡಲಾಗುವುದು. ಶಾಲೆಗಳಲ್ಲಿ ಸೌಂದರ್ಯವರ್ಧಕ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಉದ್ದೇಶಿಸಲಾಗಿದೆ. ಆರೋಗ್ಯ ತಜ್ಞರ ನೇತೃತ್ವದಲ್ಲಿ ತಿಳಿವಳಿಕೆ ತರಗತಿಗಳನ್ನು ಪೂರ್ತಿಗೊಳಿಸಿದ ಶಾಲೆಗಳನ್ನು ಲಿಪ್‌ಸ್ಟಿಕ್‌ ಮುಕ್ತ ಕ್ಯಾಂಪಸ್‌ ಆಗಿ ಘೋಷಿಸಲಾಗುವುದು. ಬಳಿಕ ರಕ್ಷಕರಿಗೂ ತಿಳಿವಳಿಕೆ ನೀಡಲಾಗುವುದು. ಶಾಲೆಗಳ ಹೊರತು ರೆಸಿಡೆನ್ಸ್‌ ಅಸೋಸಿಯೇಶನ್‌ಗಳಲ್ಲಿ, ಕುಟುಂಬಶ್ರೀ ನೆರೆಮನೆ ಕೂಟಗಳಲ್ಲಿ, ನಾನಾ ಸಂಘಟನೆಗಳಲ್ಲಿ ತಿಳಿವಳಿಕೆ ತರಗತಿಗಳನ್ನು ನಡೆಸಲಾಗುವುದು.

ಮಿತಿಗಿಂತಲೂ ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಸಿದ ಲಿಪ್‌ಸ್ಟಿಕ್‌ಗಳು, ಫೇಸ್‌ ಕ್ರೀಂಗಳನ್ನು ರಾಜ್ಯ ಡ್ರಗ್ಸ್‌ ನಿಯಂತ್ರಣ ಇಲಾಖೆಯ ನೇತೃತ್ವದಲ್ಲಿ ಕಳೆದ ವರ್ಷ ಪತ್ತೆ ಹಚ್ಚಲಾಗಿತ್ತು. ಶಾಲೆಗಳ ಸಮೀಪದಲ್ಲಿರುವ ವ್ಯಾಪಾರ ಸಂಸ್ಥೆಗಳಲ್ಲಿ ಹಾನಿಕಾರಕವಾದ ಪದಾರ್ಥಗಳನ್ನು ಬೆರೆಸಿದ ಸೌಂದರ್ಯವರ್ಧಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಇಲ್ಲೆಲ್ಲ ತಪಾಸಣೆ ನಡೆಸಲು, ತಿಳಿವಳಿಕಾ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಬಾಲ ಹಕ್ಕು ಆಯೋಗವು ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಎಲ್ಲ ಶಾಲೆಗಳಲ್ಲಿ ಲಿಪ್‌ಸ್ಟಿಕ್‌ ಮುಕ್ತ ಕ್ಯಾಂಪಸ್‌ ಯೋಜನೆಯು ಜಾರಿಗೆ ಬರಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.