ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಕೈಬಿಡುವಂತೆ ಕೋರಿ ನಟ ದರ್ಶನ್‌ ಗ್ಯಾಂಗ್ ಸದಸ್ಯ ಹೈಕೋರ್ಟ್‌ ಮೊರೆ – ಅರ್ಜಿ ಹಿಂಪಡೆದರೆ ಒಳಿತೆಂದ ಜಡ್ಜ್‌!

ಬೆಂಗಳೂರು, , ಫೆ. 11 : ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14 ನೇ ಆರೋಪಿ ಪ್ರದೋಶ್‌ ಎಸ್‌.ರಾವ್‌ ತನ್ನ ವಿರುದ್ಧದ ಆರೋಪ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. ವಿಚಾರಣೆ ವೇಳೆ ಅರ್ಜಿ ವಾಪಸು ಪಡೆಯುವುದು ಒಳಿತು. ಇಲ್ಲವೇ ವಜಾಗೊಳಿಸಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

Advertisement

ಅಲ್ಲದೆ, ನಿಮ್ಮ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿರುವಾಗ ನೀವು ಹೇಗೆ ಆರೋಪಗಳಿಂದ ಕೈಬಿಡಬೇಕೆಂದು ಕೋರುತ್ತೀರಿ ಎಂದು ಪ್ರಶ್ನಿಸಿದೆ. ಪ್ರಕರಣದಲ್ಲಿ ಪೊಲೀಸರು ತಮ್ಮ ವಿರುದ್ಧ ಹೊರಿಸಿರುವ ಕೊಲೆ ಮತ್ತು ಕೊಲೆ ಅಪರಾಧದ ಜಂಟಿ ಹೊಣೆಗಾರಿಕೆ ಆರೋಪಗಳಿಂದ ಕೈಬಿಡಲು ವಿಚಾರಣಾ ಕೋರ್ಟ್‌ಗೆ ನಿರ್ದೇಶಿಸಬೇಕೆಂದು ಕೋರಿ ಪ್ರದೋಶ್‌ ಎಸ್‌.ರಾವ್‌ ಅಲಿಯಾಸ್‌ ಪ್ರದೋಶ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿ ಕುರಿತು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ”ಪ್ರಕರಣ ಸಂಬಂಧ ಜನವರಿ ತಿಂಗಳಿಂದಲೇ ಸಂಚು ರೂಪಿಸಲಾಗಿತ್ತೆಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಆ ದಿನಗಳಲ್ಲಿಅರ್ಜಿದಾರರದ್ದು ಯಾವುದೇ ಪಾತ್ರವಿಲ್ಲ. ಘಟನೆಯ ಅಂತಿಮ ಭಾಗದಲ್ಲಿ ಅವರಿದ್ದರು ಮತ್ತು 30 ಲಕ್ಷ ಮೊತ್ತವನ್ನು ದರ್ಶನ್‌ ಕಡೆಯಿಂದ ಪಡೆದು ಬೇರೆಯವರಿಗೆ ವರ್ಗಾಯಿಸಿದ್ದರೆಂದು ಆರೋಪಿಸಲಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ಕೈಬಿಡದಿದ್ದರೂ ಸ್ವಲ್ಪಮಟ್ಟಿಗೆ ಸಡಿಲಿಸಬೇಕು,” ಎಂದು ಕೋರಿದರು.

ಅದಕ್ಕೆ ಆಕ್ಷೇಪಿಸಿದ ವಿಶೇಷ ಪ್ರಾಸಿಕ್ಯೂಟರ್‌ಪಿ. ಪ್ರಸನ್ನ ಕುಮಾರ್‌, ”ಪ್ರದೋಶ್‌ ಇತರೆ ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಸಾಕ್ಷಿ ವಿಚಾರಣೆಯಲ್ಲಿಅರ್ಜಿದಾರರ ಪಾತ್ರದ ಬಗ್ಗೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ- 1973ರ (ಸಿಆರ್‌ಪಿಸಿ) ಕಲಂ 164ರಡಿ ನೀಡಲಾದ ಹೇಳಿಕೆಯಲ್ಲಿ ಎಲ್ಲವನ್ನೂ ವಿವರಿಸಲಾಗಿದೆ. ಜತೆಗೆ, ಸುಪ್ರೀಂಕೋರ್ಟ್‌, ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ,’ ಎಂದು ತಿಳಿಸಿದರು.

ಅದಕ್ಕೆ ನ್ಯಾಯಪೀಠ, ”ಸುಪ್ರೀಂಕೋರ್ಟ್‌ ನಿಮ್ಮ ಜಾಮೀನು ಅರ್ಜಿ ತಿರಸ್ಕರಿಸಿದೆಯಲ್ಲವೇ? ಪ್ರಾಸಿಕ್ಯೂಷನ್‌ ಬಳಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವಷ್ಟು ಸಾಕ್ಷ್ಯಧಾರಗಳು ಇವೆಯಲ್ಲಾ? ಹಾಗಾಗಿ, ಈ ಕೋರ್ಟ್‌ ಅದಕ್ಕಿಂತಲೂ ಒಂದು ಪರ್ಸೆಂಟ್‌ ಕೂಡ ಹೆಚ್ಚು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ, ಅರ್ಜಿ ವಾಪಸು ಪಡೆಯುವುದು ಒಳಿತು. ಇಲ್ಲವೇ ವಜಾಗೊಳಿಸಲಾಗುವುದು ಎಂದು ಹೇಳಿತು. ಈ ಹಿನ್ನೆಲೆಯಲ್ಲಿಅರ್ಜಿದಾರರ ಪರ ವಕೀಲರು ಅರ್ಜಿ ವಾಪಸ್‌ ಪಡೆಯಲು ಸಮ್ಮತಿ ಸೂಚಿಸಿದರು. ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರಿಗೆ ಸೂಕ್ತ ಕಾನೂನಿನ ಆಧಾರದಡಿ ಮುಂದುವರಿಯಲು ಸ್ವಾತಂತ್ರ್ಯ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.