ಕೊಲ್ಲಿ : ದೇವರ ಕಾಡಿನ ಬಾವಲಿಗಳ ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ! ಕಣ್ಣು ತೆರೆಯುವುದೇ ಪರಿಸರ ಇಲಾಖೆ ?

ಬೆಳ್ತಂಗಡಿ, ಮೇ 31 : ಐತಿಹಾಸಿಕ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನವು ಕ್ಷೇತ್ರದ ದೇವರ ಕಾಡಿನಲ್ಲಿ ನೆಲೆಸಿದ್ದ ಲಕ್ಷಾಂತರ ಬಾವಲಿಗಳಿಗೆ ಇಂದು ಸಂಕಷ್ಟ ಎದುರಾಗಿದೆ. ಬಾವಲಿಗಳ ಆವಾಸ ಸ್ಥಾನವಾಗಿರುವ ಕೊಲ್ಲಿ ದುರ್ಗೆಯ ದೇವರ ಕಾಡಿನ ಬಾವಲಿಗಳ ರಕ್ತ ಸಿಕ್ತ ಅಧ್ಯಾಯಕ್ಕೆ ವ್ಯಕ್ತಿಯೋರ್ವರು ಮುನ್ನುಡಿ ಬರೆದಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ದೇವಸ್ಥಾನದ ಎಡಬಾಗದಲ್ಲಿದ್ದ ದೇವಸ್ಥಾನಕ್ಕೆಂದು ಮೀಸಲಿಟ್ಟಿದ್ದ ಸುಮಾರು ಮೂರು ಎಕರೆ ಜಾಗವನ್ನು ಡಾ. ಲೋಕೇಶ್ ಎಂಬವರು ಖರೀದಿಸಿ, ಅದರಲ್ಲಿದ್ದ ಬೃಹತ್ ಮರವನ್ನು ಧರೆಗುರುಳಿಸುವ ಮೂಲಕ ದೇವರ ಕಾಡಿನಲ್ಲಿದ್ದ ಬಾವಲಿಗಳ ಮಾರಣಹೋಮವೇ ನಡೆಸಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಬಾವಲಿಗಳ ಆವಾಸ ತಾಣ ಅದು ದೇವಿಗೆ ಸಂಬಂಧಿಸಿದೆಂಬುದು ಸ್ಥಳೀಯರ ನಂಬಿಕೆ. ಹೀಗಾಗಿ ದೇವರ ಕಾಡನ್ನು ಎಷ್ಟು ಖರ್ಚಾದರೂ ಪರವಾಗಿಲ್ಲ ನಾವು ಉಳಿಸಿಕೊಳ್ಳಲು ಸಿದ್ದವೆಂದು ಪಣತೊಟ್ಟಿದ್ದಾರೆ.

ಈ ಬಗ್ಗೆ ಧ್ವನಿ ನ್ಯೂಸ್ ಜೊತೆ ಮಾತನಾಡಿದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ದಾಸಪ್ಪ ಗೌಡ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಲೋಕೇಶ್ ಎಂಬವರು ದೇವಸ್ಥಾನಕ್ಕೆ ಸಂಬಂಧಪಟ್ಟಿದ್ದ ಜಾಗವನ್ನು ಕ್ರಯಕ್ಕೆ ಪಡೆದು ಅದನ್ನು ಕ್ರಮೇಣ ದೇವಸ್ಥಾನಕ್ಕೆ ಒಪ್ಪಿಸುವುದಾಗಿ ತಿಳಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿಯವರೂ ಇದಕ್ಕೊಪ್ಪಿದ್ದರು. ಆ ಬಳಿಕ ಡಾ. ಲೋಕೇಶ್ ಅವರು, ಜಾಗವನ್ನು ದೇವಸ್ಥಾನಕ್ಕೆ ನೀಡದೆ ಸ್ವಂತಕ್ಕೆ ಬಳಸಿಕೊಂಡು ಅಲ್ಲಿದ್ದ ಬೃಹತ್ ಮರಗಳನ್ನೆಲ್ಲಾ ತೆರವುಗೊಳಿಸಿದ್ದಾರೆ. ಇದರಿಂದಾಗಿ ದೇವರ ಕಾಡಿನಲ್ಲಿದ್ದ ಲಕ್ಷಾಂತರ ಬಾವಲಿಗಳು ನಿರ್ನಾಮವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ದೇವರ ಕಾಡನ್ನು ದೇವಸ್ಥಾನಕ್ಕೆ ಒಪ್ಪಿಸುವುದಾದರೆ ಅದರ ಬೆಲೆಯನ್ನು ನೀಡಲು ನಾವು ಸಿದ್ಧರಿದ್ದೇವೆ. ಆ ಅರಣ್ಯವನ್ನು ಸಂರಕ್ಷಿಸಿಕೊಂಡು, ಬಾವಲಿಗಳ ಆವಾಸ ತಾಣವನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ಧೇಶ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು, ಗ್ರಾಮಸ್ಥರಾದ ಸುರೇಂದ್ರ ಬಂಗಾಡಿ ಅವರು ಮಾತನಾಡಿ, ಈ ಹಿಂದೆಯೂ ಕೂಡಾ ದೇವರ ಕಾಡನ್ನು ನಾಶಪಡಿಸಲು ಪ್ರಯತ್ನಿಸಲಾಗಿತ್ತು, ಆದರೆ ಅದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ದೇವರ ಕಾಡಿಗೆ ಸಂಕಷ್ಟ ಎದುರಾಗಿದ್ದು, ಬಾವಲಿಗಳ ನಿರ್ನಾಮವಾಗುತ್ತಿದೆ. ದೇವರ ಕಾಡನ್ನು ದೇವರ ಕಾಡಾಗಿಯೇ ಉಳಿಸಿಕೊಳ್ಳುವುದಕ್ಕೆ ನಾವು ಸಿದ್ಧರಿದ್ದೇವೆ. ಅದಕ್ಕೆ ವ್ಯಯಿಸಿರುವ ಹಣವನ್ನು ಜಾಗದ ಮಾಲಕರಿಗೆ ನೀಡಿ, ಆ ಜಾಗವನ್ನು ದೇವಸ್ಥಾನದ ಸುಪರ್ದಿಗೆ ನೀಡುವಂತೆ ವಿನಂತಿಸಿದರು. ಅಲ್ಲದೆ, ಅರಣ್ಯ ಇಲಾಖೆ, ಪರಿಸರ ಇಲಾಖೆಯೂ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಅಳಿವಿನಂಚಿನಲ್ಲಿರುವ ಬಾವಲಿಗಳ ಸಂರಕ್ಷಣೆಗೆ ಸರ್ಕಾರವೂ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.