ಕಲಬುರಗಿ, ಸೆ. 09 : ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಅಧಿಕಾರಿಗಳು ತನಿಖೆಯನ್ನು ಕಲಬುರಗಿಗೆ ವಿಸ್ತರಿಸಿದ್ದು, ಬುಧವಾರ ಕಲಬುರಗಿ ನಗರದಲ್ಲಿ ಬುಧವಾರ ಬೆಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ನಗರದ ರಾಮ ಮಂದಿರ ಹತ್ತಿರದ ನ್ಯೂ ಓಜಾ ಲೇಔಟ್‌ನಲ್ಲಿರುವ ಪಶುವೈದ್ಯಕೀಯ ನೇಮಕಾತಿ ಅಭ್ಯರ್ಥಿ ಮಮಿತಾ ಅವರ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಮಮಿತಾ ಅವರು ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಡೀಲ್ ಮಾಡಿಕೊಂಡು ನೇಮಕಾತಿ ಪಡೆದಿದ್ದಾರೆ ಎಂಬ ಆರೋಪ ಪ್ರಕರಣದ ತನಿಖೆಯಲ್ಲಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಮಿತಾ ಅವರ ಮನೆ ಸೇರಿದಂತೆ ಸಂಬಂಧಿತ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಸಿಐಡಿ ಡಿವೈಎಸ್‌ಪಿ ಹಾಗೂ ಕಲಬುರಗಿ ಡಿವೈಎಸ್‌ಪಿ ಅಸ್ಲಾಂ ಪಾಷಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸುಮಾರು 20ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆನೆಂದು ಮೂಲಗಳು ತಿಳಿಸಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಲಬುರಗಿ ಮೂಲದ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ನಾಪತ್ತೆಯಾಗಿ ಮೂರು ವಾರ ಕಳೆದರೂ ಇದುವರೆಗೂ ಪತ್ತೆಯಾಗಿಲ್ಲ.
ಕಳೆದ ಎರಡು ವಾರದ ಹಿಂದೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ಕಲಬುರಗಿ ನಗರದ ಮನೆಯಲ್ಲೂ ಸಿಐಡಿ ಅಧಿಕಾರಿಗಳ ತಂಡವು ದಾಳಿ ನಡೆಸಲಾಗಿ, ದಾಖಲೆ ಹಾಗೂ ಕೆಲವು ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಸಿಐಡಿ ತನಿಖೆ ತೀವ್ರಗೊಂಡಿರುವ ಹಿನ್ನೆಲೆ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಹಾಗೂ ನೇಮಕಾತಿ ಅಕ್ರಮದ ವಿವರಗಳು ಹೊರಬರುವ ಸಾಧ್ಯತೆ ಇದೆ.




