ಬೆಂಗಳೂರು, ಏ. 17 : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ. ವಿನಯ್ ಕುಲಕರ್ಣಿ 15 ನೇ ಅಪರಾಧಿ ಆಗಿದ್ದಾರೆ. ಒಟ್ಟು 16 ಮಂದಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕೊಲೆ ಮತ್ತು ಪಿತೂರಿ ಆರೋಪಕ್ಕೆ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಅಲ್ಲೆದೆ, ತಲಾ 30 ಸಾವಿರ ರೂಪಾಯಿ ದಂಡ ಪಾವತಿಸಲು ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ.
9 ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾದ ಬಳಿಕ ವಿನಯ್ ಕುಲಕರ್ಣಿ ಏನಂದ್ರು..?
ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ಅದೇಶದ ಬೆನ್ನಲ್ಲೇ ಸಿಬಿಐ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಈಗಾಗಲೇ ಅವರನ್ನು ಹಾಗೂ ಇತರ ಅಪರಾಧಿಗಳನ್ನು ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಈ ಮಹತ್ವದ ತೀರ್ಪು ನೀಡಿದ್ದರು.
ಬಟ್ಟೆ ಬದಲಾಯಿಸಲು ಅವಕಾಶ ಕೊಡಿ
ವಿನಯ್ ಕುಲಕರ್ಣಿ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಹಾಗಾಗಿ ಬಟ್ಟೆ ಬದಲಾಯಿಸಲು ಅನುಮತಿ ನೀಡಿ ಎಂದು ವಿನಯ್ ಪರ ವಕೀಲರು ಇದೇ ಸಂದರ್ಭದಲ್ಲಿ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.
ಕಠಿಣ ಕಾಯ್ದೆಗಳು
ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ಸಿಬಿಐಗೆ ನೀಡಿತ್ತು. ಸಿಬಿಐ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(ಬಿ) 302, 217, 201, 143, 147, 148 ಹಾಕಿತ್ತ. ಅಷ್ಟೇ ಅಲ್ಲದೆ, 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಮಾತ್ರವಲ್ಲದೆ, 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(2) ಹಾಕಲಾಗಿತ್ತು. ಇಷ್ಟೇ ಅಲ್ಲದೆ, 13(1)(ಡಿ) ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 21 ಆರೋಪಿಗಳ ಹೆಸರನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅದರೆ 17 ಮಂದಿ ಮೇಲೆ ಅಪರಾಧ ಸಾಭೀತಾಗಿದೆ.
16 ಲಕ್ಷ ರೂಪಾಯಿ ಪರಿಹಾರವಾಗಿ ನೀಡುವಂತೆ ಸೂಚನೆ
ಕೊಲೆಯಾದ ಯೋಗೇಶ್ ಗೌಡ ಕುಟುಂಬಕ್ಕೆ 16 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇನ್ನು 17 ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಪ್ರತಿ ಸೆಕ್ಷನ್‌ಗೂ ಪ್ರತ್ಯೇಕವಾಗಿ ದಂಡವನ್ನು ಕೋರ್ಟ್ ವಿಧಿಸಿದೆ. ಅಲ್ಲದೆ, ಎ 1 ಆರೋಪಿ ಮುತ್ತಗಿಗೆ ಮಾಫಿ ಸಾಕ್ಷಿ ಸ್ಥಾನವನ್ನು ಕೋರ್ಟ್ ಖಚಿತಪಡಿಸಿದೆ.
ಯಾವಾಗ ಕೊಲೆ ನಡೆದಿತ್ತು?
ವೈಯಕ್ತಿಕ ಹಾಗೂ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ 2016ರ ಜೂನ್‌ನಲ್ಲಿ ಯೋಗೇಶ್ ಗೌಡ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣ ಹುಬ್ಬಳ್ಳಿ ಧಾರವಾಡದಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಸುಮಾರು 10 ವರ್ಷಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗತ್ತು. ಬಿಜೆಪಿ ಮುಖಂಡ ಯೋಗೇಶ್ ಗೌಡ ಹಾಗೂ ಶಾಸಕ ವಿನಯ್ ಕುಲಕರ್ಣಿ ನಡುವೆ ಕೆಲವೊಂದು ವಿಚಾರವಾಗಿ ಆಂತರಿಕ ಭಿನ್ನಾಭಿಪ್ರಾಯಗಳು ಇದ್ದವು. ಯೋಗೇಶ್ ಗೌಡ ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯರಾಗಿದ್ದರು. ಜಲ್ಲಾ ಪಂಚಾಯತ್ ನಲ್ಲಿ ಕುಡಿಯೋ ನೀರಿನ ವಿಚಾರವಾಗಿ ಸಭೆಯಲ್ಲಿ ಯೋಗೇಶ್ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ಬಿಸಿ ಮಾತಿನ ವಿನಿಮಯ ಆಗಿತ್ತು. ಇದಾದ ಬಳಿಕ ಆಸ್ಪತ್ರೆಯಲ್ಲಿ ಗದ್ದಲಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿತ್ತು. ಇದರ ಹಿಂದೆ ಯೋಗೇಶ್ ಗೌಡ ಕೈವಾಡ ಇತ್ತು ಎಂಬ ಚರ್ಚೆಯೂ ನಡೆದಿತ್ತು. ಹೀಗೆ ಅನೇಕ ಕಾರಣಗಳಿಂದ ವೈರತ್ವ ಮೂಡಿತ್ತು ಎಂಬ ಆರೋಪ ಇತ್ತು.
ಬಸವರಾಜ ಕೊರವರ್ ಮನೆಗೆ ಭದ್ರತೆ
ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಆರ್ ಟಿ ಐ ಕಾರ್ಯಕರ್ತ ಬಸವರಾಜ ಕೊರವರ್ ಧಾರವಾಡದ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯೋಗೇಶ್ ಗೌಡ ಕೊಲೆ ಪ್ರಕರಣಲ್ಲಿ ಬಸವರಾಜ್ ಕೊರವರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗಾಗಿ 10 ಕ್ಕೂ ಅಧಿಕ ಪೊಲೀಸರಿಂದ ಭದ್ರತೆ ನೀಡಲಾಗಿದೆ.

