LPG ವಾಣಿಜ್ಯ ಸಿಲಿಂಡರ್‌ ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ – ರಾಜ್ಯಗಳಿಗೆ ಸೀಮೆಎಣ್ಣೆ ಕೂಡ ಹಂಚಿಕೆ

ಹೊಸದಿಲ್ಲಿ, ಮಾ.​ 14 : ಮಧ್ಯಪ್ರಾಚ್ಯ ಯುದ್ಧದ ಬಿಕ್ಕಟ್ಟಿನಿಂದಾಗಿ ವಿಶ್ವದಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗೆ ಹಾಹಾಕಾರ, ಸಿಲಿಂಡರ್‌ ಕೊರತೆಯಿಂದ ಹೋಟೆಲ್‌ಗಳ ಬಂದ್‌ ನಡುವೆಯೇ, ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಮತ್ತಷ್ಟು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ರಾಜ್ಯ ಸರಕಾರಗಳು ಫಲಾನುಭವಿಗಳನ್ನು ಗುರುತಿಸಿ ಅವುಗಳನ್ನು ವಿತರಿಸಲಿವೆ ಎಂದು ತಿಳಿಸಿದೆ.

Advertisement

ಇದೇ ವೇಳೆ, ಎಲ್‌ಪಿಜಿಗೆ ಪರ್ಯಾಯವಾಗಿ 40,000 ಕಿಲೋ ಲೀಟರ್‌ಗಳಷ್ಟು ಹೆಚ್ಚುವರಿ ಸೀಮೆಎಣ್ಣೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ದಿಲ್ಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, ”ವಾಣಿಜ್ಯ ಸಿಲಿಂಡರ್‌ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಆದ್ಯತೆ ಮೇರೆಗೆ ಅದನ್ನು ಪೂರೈಸಲಾಗುವುದು. ನಿತ್ಯ ಸುಮಾರು 50 ಲಕ್ಷ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ಜನರು ಗಾಬರಿಯಿಂದಾಗಿ ದುಪ್ಪಟ್ಟು ಖರೀದಿ, ಮುಂಚಿತ ಬುಕಿಂಗ್‌ಗೆ ಮುಂದಾಗಿದ್ದಾರೆ. ಇದು ಬಿಕ್ಕಟ್ಟು ಹೆಚ್ಚಲು ಕಾರಣವಾಗಿದೆ. ಸಾಕಷ್ಟು ದಾಸ್ತಾನು ಲಭ್ಯವಿರುವ ಕಾರಣ, ಜನರು ಆತಂಕದ ಖರೀದಿಯನ್ನು ನಿಲ್ಲಿಸಬೇಕು,” ಎಂದು ಹೇಳಿದ್ದಾರೆ.

”ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯ ಸರಕಾರಗಳಿಗೆ 1 ಲಕ್ಷ ಕಿಲೋ ಲೀಟರ್‌ ಸೀಮೆ ಎಣ್ಣೆ ಹಂಚಿಕೆ ಮಾಡುತ್ತದೆ. ಬಿಕ್ಕಟ್ಟಿನ ಹಿನ್ನೆಲೆಯಲ್ಲಿಇನ್ನೂ ಹೆಚ್ಚುವರಿ 48,000 ಕಿಲೋ ಲೀಟರ್‌ ಸೀಮೆ ಎಣ್ಣೆಯನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುವುದು,” ಎಂದು ಹೇಳಿದ್ದಾರೆ.

ಪೂರೈಕೆ ಕೊರತೆಯಿಲ್ಲವೆಂದ ಕೇಂದ್ರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ ಮತ್ತು ಎಲ್‌ಪಿಜಿ ದಾಸ್ತಾನು ಮತ್ತು ಪೂರೈಕೆ ಸಾಕಷ್ಟಿದ್ದು, ಆತಂಕಪಡುವ ಅಗತ್ಯವಿಲ್ಲಎಂದು ಸರಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂಸತ್ತಿನಲ್ಲಿ ಗುರುವಾರ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ, ”ಹರ್ಮುಜ್‌ ಜಲಸಂಧಿಯ ಮೂಲಕ ಸಾಗಣೆಗೆ ಅಡ್ಡಿ ಇದ್ದರೂ ಭಾರತದ ಕಚ್ಚಾ ತೈಲ ಪೂರೈಕೆಯ ಸ್ಥಿತಿ ಸುರಕ್ಷಿತವಾಗಿಯೇ. ಭಾರತ ಇತರೆ ಮೂಲಗಳಿಂದ ತೈಲ, ಅನಿಲಗಳ ಪೂರೈಕೆ ಪಡೆಯುತ್ತಿದೆ. ಹರ್ಮುಜ್‌ ಪ್ರದೇಶದ ಹೊರತಾದ ಪ್ರದೇಶದಿಂದ ಕಚ್ಚಾ ತೈಲದ ಆಮದು ಸರಿಸುಮಾರು 70%ಕ್ಕೆ ಏರಿದೆ. ಅಲ್ಲದೆ ದೇಶದಲ್ಲಿಸಾಕಷ್ಟು ದಾಸ್ತಾನು ಲಭ್ಯತೆಯಿದ್ದು, ಅನಿಲ ಉತ್ಪಾದನೆ 100% ಮಟ್ಟದಲ್ಲಿ ನಡೆಯುತ್ತಿದೆ,” ಎಂದು ಹೇಳಿದ್ದಾರೆ.

ಬೆಂಗಳೂರಿಗೆ ವಿದ್ಯುತ್‌ ಶಾಕ್‌?

ನೈಸರ್ಗಿಕ ಅನಿಲ ಕೊರತೆ ನೀಗಿಸಲು ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳಿಂದಾಗಿ ರಾಜ್ಯದ ವಿದ್ಯುತ್‌ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಬೆಂಗಳೂರು ಹೊರವಲಯದ ಯಲಹಂಕದಲ್ಲಿರುವ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ ಉತ್ಪಾದನಾ ಸ್ಥಾವರಕ್ಕೆ ‘ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ’ ಅನಿಲ ಪೂರೈಕೆಯನ್ನು ಗುರುವಾರದಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಬಿಕ್ಕಟ್ಟಿನ ಆರಂಭದಲ್ಲಿಶೇ.20ರಷ್ಟು ಅನಿಲ ಪೂರೈಕೆ ಕಡಿತಗೊಳಿಸಿತ್ತು, ಈಗ ಪೂರ್ಣ ಬಂದ್‌ ಮಾಡಲಾಗಿದೆ. ಇದರಿಂದಾಗಿ ರಾಜಧಾನಿಗೆ ವಿದ್ಯುತ್‌ ಪೂರೈಕೆ ಮೇಲೆ ತಕ್ಷಣ ಪರಿಣಾಮ ಬೀರದಿದ್ದರೂ, ಬೇಸಿಗೆಯಲ್ಲಿ ಹೆಚ್ಚಿದ ವಿದ್ಯುತ್‌ ಬೇಡಿಕೆಯನ್ನು ಸರಿದೂಗಿಸಲು ಸವಾಲಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಜಧಾನಿ ಬೆಂಗಳೂರಿಗೆ ವಿದ್ಯುತ್‌ ಪೂರೈಸಲು ಯಲಹಂಕದಲ್ಲಿ 370 ಮೆ.ವ್ಯಾ ಅನಿಲ ಆಧಾರಿತ ವಿದ್ಯುತ್‌ ಘಟಕವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಕಳೆದ ಡಿಸೆಂಬರ್‌ನಿಂದ ನಿರಂತರವಾಗಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿತ್ತು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.