ಹೊಸದಿಲ್ಲಿ, ಮಾ. 10 : ಇರಾನ್‌ನಲ್ಲಿ ಯುದ್ಧದ ಪರಿಣಾಮ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮರುಪೂರಣ (ರೀಫಿಲ್) ಪಡೆಯುವ ಕನಿಷ್ಠ ಅವಧಿ 25 ದಿನಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿಸಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಹಾಗೂ ಅನಗತ್ಯ ಸಂಗ್ರಹ ತಡೆಗೆ ಈ ಕ್ರಮಕೈಗೊಳ್ಳಲಾಗಿದೆ.
ಅಮೆರಿಕ ಇಸ್ರೇಲ್ ಇರಾನ್‌ನಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಅಭಾವ ಉಂಟಾಗಬಹುದೆಂಬ ಭೀತಿಯಿಂದ ದೇಶಾದ್ಯಂತ ಗ್ರಾಹಕರು ಸಿಲಿಂಡರ್ ಖರೀದಿಗೆ ಮುಗಿಬಿದ್ದಿದ್ದಾರೆ. ಹೀಗಾಗಿ ದುಪ್ಪಟ್ಟು ಖರೀದಿ ಮತ್ತು ಸಂಗ್ರಹ ತಪ್ಪಿಸಲು ಸರಕಾರ ಸಿಲಿಂಡರ್ ಬುಕಿಂಗ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿದೆ.
25 ದಿನದ ಬಳಿಕವೇ ಮತ್ತೊಂದು ಸಿಲಿಂಡರ್
ಒಂದು ಸಿಲಿಂಡರ್ ಬುಕಿಂಗ್ ಮಾಡಿದ 25 ದಿನಗಳ ನಂತರವಷ್ಟೇ ಮತ್ತೊಂದು ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಬಿಕ್ಕಟ್ಟಿಗೆ ಮುನ್ನ ಸಿಲಿಂಡರ್ ಬುಕಿಂಗ್ ಅಂತರ 15 ದಿನಗಳಷ್ಟಿತ್ತು. 2 ದಿನಗಳ ಹಿಂದೆ ಇದನ್ನು 21 ದಿನಗಳಿಗೆ ಹೆಚ್ಚಿಸಲಾಗಿತ್ತು. ಈಗ ಮತ್ತಷ್ಟು ದಿನ ಹೆಚ್ಚು ಕಾಯಬೇಕಿದೆ.
ದಾಖಲೆಮಟ್ಟಕ್ಕೆ ಕಚ್ಚಾತೈಲ
ಮಧ್ಯಪ್ರಾಚ್ಯ ಸಂಘರ್ಷವು ಭಾರತಕ್ಕೆ ಇಬ್ಬಗೆಯ ಸಂಕಟ ತಂದೊಡ್ಡಿದೆ. ಒಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿಕಚ್ಚಾತೈಲ ಬೆಲೆ 2022ರ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮಟ್ಟಕ್ಕೆ ಜಿಗಿದಿದೆ. ಸೋಮವಾರ ಬ್ಯಾರಲ್‌ಗೆ 120 ಡಾಲರ್‌ವರೆಗೂ ಜಿಗಿದಿದ್ದ ಕಚ್ಚಾತೈಲ ದರ ಬಳಿಕ 106 ಡಾಲರ್ ತಲುಪಿದೆ. ಆದರೂ 14% ಏರಿಕೆ ಕಂಡಿದೆ. ಇದು ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಒತ್ತಡ ಸೃಷ್ಟಿಸಿದೆ. ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುವುದಿಲ್ಲಎಂದು ಸರಕಾರ ಸ್ಪಷ್ಟಪಡಿಸಿದ್ದರೂ, ಅಡುಗೆ ಅನಿಲದ ಬಿಸಿ ಈಗಾಗಲೇ ಗ್ರಾಹಕರಿಗೆ ತಟ್ಟಿದೆ. ಬಿಕ್ಕಟ್ಟು ಹೆಚ್ಚಲು ಕೊಲ್ಲಿದೇಶಗಳ ತೈಲ ಘಟಕಗಳ ಮೇಲೆ ದಾಳಿಯಿಂದ ಉತ್ಪಾದನೆ ಸ್ಥಗಿತಗೊಂಡಿರುವುದು ಒಂದು ಕಾರಣವಾದರೆ, ಇರಾನ್ ನಿಯಂತ್ರಣದಲ್ಲಿರುವ ಹರ್ಮುಜ್ ಜಲಸಂಧಿಯಲ್ಲಿಕಚ್ಚಾತೈಲ ಮತ್ತು ಎಲ್‌ಪಿಜಿ ತುಂಬಿದ ಹಡಗುಗಳ ಪೂರೈಕೆ ಬಂದ್ ಆಗಿರುವುದು ಮತ್ತೊಂದು ಕಾರಣವಾಗಿದೆ.
ಪುಣೆ ಚಿತಾಗಾರಗಳು ಬಂದ್
ಎಲ್‌ಪಿಜಿ ಬಳಸುವ ಶವಸಂಸ್ಕಾರ ಘಟಕಗಳನ್ನು ಸ್ವಲ್ಪ ದಿನಗಳ ಕಾಲ ನಿಲ್ಲಿಸಲು ಪುಣೆ ಮಹಾನಗರ ಪಾಲಿಕೆ ನಿರ್ಧರಿಸಿದೆ. ಮನೆಗಳಿಗೆ ಅಡುಗೆ ಅನಿಲದ (ಎಲ್‌ಪಿಜಿ) ಪೂರೈಕೆಯಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಅನಿಲ ಚಿತಾಗಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ‘‘ಕೇಂದ್ರ ಸರಕಾರದ ಸೂಚನೆಯಂತೆ ಸಿಲಿಂಡರ್ ತಯಾರಿಸಲು ಬಳಸುವ ಅನಿಲವನ್ನು ಮೊದಲು ಮನೆಗಳ ಅಡುಗೆ ಬಳಕೆಗೆ ನೀಡಬೇಕಿದೆ. ಆದ್ದರಿಂದ, ಸ್ಮಶಾನಗಳಿಗೆ ನೀಡುತ್ತಿದ್ದ ಗ್ಯಾಸ್ ಪೂರೈಕೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ,’’ ಪಾಲಿಕೆ ಆಯುಕ್ತರಾದ ನವಲ್ ಕಿಶೋರ್ ರಾಮ್ ತಿಳಿಸಿದ್ದಾರೆ. ‘‘ನಗರದಲ್ಲಿಒಟ್ಟು 27 ಸ್ಮಶಾನಗಳಿವೆ. ಇವುಗಳಲ್ಲಿ18 ಸ್ಮಶಾನಗಳಲ್ಲಿ ಗ್ಯಾಸ್ ಬಳಸಲಾಗುತ್ತಿತ್ತು. ಈಗ ಅಲ್ಲಿ ಗ್ಯಾಸ್ ಬದಲು ಕಟ್ಟಿಗೆ ಅಥವಾ ವಿದ್ಯುತ್ ಬಳಕೆಗೆ ಸೂಚನೆ ನೀಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ,’’ ಎಂದು ಅವರು ತಿಳಿಸಿದ್ದಾರೆ.

