ಹೊಸದಿಲ್ಲಿ, ಏ. 01 : ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಆಗಿದ್ದು, ಇದರ ಪ್ರಭಾವ ಎಲ್ ಪಿಜಿ ಮೇಲೂ ತಟ್ಟಿದೆ. ಏಪ್ರಿಲ್ 1 , ಅಂದರೆ ಇಂದಿನಿಂದ ಜಾರಿಯಾಗುವಂತೆ ವಾಣಿಜ್ಯ ಸಿಲಿಂಡರ್ ಬೆಲೆ 195.50 ರೂಪಾಯಿ ಹೆಚ್ಚಳವಾಗಿದೆ. ಕಳೆದ ಮಾರ್ಚ್ 1 ರಂದು 114.5 ರೂಪಾಯಿ ಹೆಚ್ಚಳವಾಗಿತ್ತು. ಈ ಬೆಲೆ ಏರಿಕೆ 19 ಕೆಜಿ ಸಿಲಿಂಡರ್ ಗೆ ಸಂಬಂಧಿಸಿದೆ. ಹೀಗಾಗಿ ವಾಣಿಜ್ಯ ಎಲ್ ಪಿಜಿಯ ಹೊಸ ದರ 2,078.50 ರೂಪಾಯಿಗೆ ತಲುಪಿದೆ.
ಗೃಹಬಳಕೆ ಸಿಲಿಂಡರ್ ದರವನ್ನು 14.2 ಕೆಜಿಯ ಸಿಲಿಂಡರ್ ಗೆ ಕಳೆದ ಮಾರ್ಚ್ 7ಕ್ಕೆ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಗ್ಯಾಸ್ ಬೆಲೆ 913 ರೂ.ಆಗಿತ್ತು. ಇದೀಗ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ಅಂತರಾಷ್ಟ್ರೀಯ ಬೆಂಚ್ ಮಾರ್ಕ್ ಹಾಗೂ ವಿನಿಮಯ ವೆಚ್ಚಕ್ಕೆ ಆಧರಿಸಿ, ದೇಶದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಎಲ್ ಪಿಜಿ ಬೆಲೆಯನ್ನು ಪ್ರತೀ ತಿಂಗಳ ಒಂದನೇ ತಾರೀಕಿನಂದು ಪರಿಷ್ಕರಿಸುತ್ತವೆ
ಮಧ್ಯಪ್ರಾಚ್ಯ ಯುದ್ಧದ ಬಳಿಕ, ಅಂತರಾಷ್ಟ್ರೀಯ ತೈಲ ಬೆಲೆಗಳು 50% ಹೆಚ್ಚಳ ಆಗಿವೆ. ಇಂಧನದ ಹಾಗೂ ತೈಲಗಳ ಸಾಗಾಣಿಕೆ ಮೇಲೆ ತೀವ್ರ ಹೊಡೆತ ಬಿದ್ದಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಸದ್ಯ ಪೆಟ್ರೋಲ್ , ಡೀಸೆಲ್ ಬೆಲೆ ಮಾತ್ರ ಕಳೆದ ಮಾರ್ಚ್ ನಿಂದ ತಟಸ್ಥವಾಗಿದ್ದು, ಕಳೆದ ವರ್ಷದ ಮಾರ್ಚ್ ನಲ್ಲಿ ಲೀಟರ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಆದರೆ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 94.72 ರೂ ಹಾಗೂ ಡೀಸೆಲ್ ಬೆಲೆ 87 62 ರೂ ಇದೆ. ಆದರೆ ನಯಾರಾ ಹಾಗೂ ಶೆಲ್ ಸಂಸ್ಥೆಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯುದ್ಧದ ಬಳಿಕ ಎರಡು ಸರಿ ಹೆಚ್ಚಳ ಕಂಡಿದೆ.
ಯುದ್ಧದ ಪರಿಸ್ಥಿತಿ ಫೆಬ್ರವರಿ 28 ರಿಂದ ಆರಂಭ ಆಗಿದ್ಉದ, ನಂತರ ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಪೂರೈಕೆ ನಿಲ್ಲಿಸಲಾಗಿತ್ತು. ಅಲ್ಲದೆ ತೈಲ ಉತ್ಪನ್ನಗಳ ರಫ್ತು ಕಡಿತಗೊಳಿಸಲಾಗಿತ್ತು. ದೇಶೀಯವಾಗಿ ಎಲ್‌ಪಿಜಿ ತಯಾರಿಗೆ ಉತ್ತೇಜನ ನೀಡಿ ಈಗ ಕೆಲವೇ ಪ್ರಮಾಣದಲ್ಲಿ ಸಿಲಿಂಡರ್ ಲಭ್ಯವಾಗುತ್ತಿದೆ. ಈ ಮಧ್ಯೆ ಯುದ್ಧದ ಸ್ಥಿತಿ ಇನ್ನೂ ಸರಿಹೋಗದಿರುವ ಕಾರಣ ತೈಲ ಕಂಪನಿಗಳು ಎಲ್‌ಪಿಜಿ ಬೆಲೆ ಏರಿಕೆ ಮಾಡಿವೆ.

