ಬೆಂಗಳೂರು, ಜು. 29 : ಕಾಲೇಜಿಗೆ ನುಗ್ಗಿ ತಂದೆಯೇ ಮಗಳಿಗೆ ಭೀಕರವಾಗಿ ಚಾಕು ಇರಿದು, ಪರಾರಿಯಾದ ಘಟನೆ ರಾಜಾನುಕುಂಟೆಯಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ದುರ್ಗ ಚಾಕು ಇರಿತಕ್ಕೊಳಗಾದ ಯುವತಿ. ಆಕೆಯ ತಂದೆ ನಾಗೇಂದ್ರ ಚಾಕು ಇರಿದ ಆರೋಪಿಯಾಗಿದ್ದಾನೆ. ಜು.25ರ ಮಧ್ಯಾಹ್ನ 3:00 ಗಂಟೆ ವೇಳೆಗೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲೇ ಕೃತ್ಯ ನಡೆದಿದೆ.
ಆರೋಪಿ ಕಾಲೇಜಿಗೆ ಬಂದು ಮಗಳನ್ನು ನೋಡಬೇಕು ಎಂದಿದ್ದ. ಬಳಿಕ ಕ್ಯಾಬಿನ್‌ಗೆ ನುಗ್ಗಿ ಮಗಳ ಹೊಟ್ಟೆ, ಎದೆ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಕು ಇರಿತಕ್ಕೆ ಕಾರಣ ಏನೆಂದು ಇನ್ನೂ ಸ್ಪಷ್ಟಗೊಂಡಿಲ್ಲ, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.




