ಕೋಲ್ಕತಾ, ಆ. 10 : ಪೊಲೀಸ್ ವಶದಲ್ಲಿ ಮೃತಪಟ್ಟ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿಯಾಗಲೆಂದು ತೆರಳಿದ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ, ಕೆಸರು, ಕಲ್ಲುಗಳನ್ನು ಎಸೆದಿರುವ ಘಟನೆ ಭಾನುವಾರ ನಡೆದಿದೆ. ಜೊತೆಗೆ, ‘ಕಳ್ಳಿ, ಡಕಾಯಿತಿ’ ಎಂದೂ ಘೋಷಣೆ ಕೂಗಲಾಗಿದೆ.
ಉತ್ತರ 24 ಪರಗಣ ಜಿಲ್ಲೆಯ ಹಲೀಸಹರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಇದು ಬಿಜೆಪಿ ಹಾಗೂ ಟಿಎಂಸಿ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ, ‘ಇದು ವ್ಯವಸ್ಥಿತ ಸಂಚು. ನಾನು ಇಲ್ಲಿಗೆ ಬರುವ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೂ, ಯಾವುದೇ ಭದ್ರತೆ ಕೈಗೊಂಡಿರಲಿಲ್ಲ. ದೊಡ್ಡ ಇಟ್ಟಿಗೆಗಳನ್ನೂ ನನ್ನ ಕಾರಿನ ಮೇಲೆ ಎಸೆಯಲಾಯಿತು. ನನ್ನ ತಲೆ ಒಡೆಯುತ್ತಿತ್ತು. ನಾನು ಸಾಯುತ್ತಿದ್ದೆ’ ಎಂದಿದ್ದಾರೆ. ಇನ್ನೊಂದೆಡೆ, ಮಮತಾ ಅವರು ಜನರನ್ನು ಪ್ರಚೋದಿಸಲೆಂದೇ ಇಲ್ಲಿಗೆ ಬಂದಿದ್ದರು. ಅದಕ್ಕೆ ಸ್ಥಳೀಯರೇ ಅವರ ವಿರುದ್ಧ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಹೇಳಿದೆ.




