ಮಂಗಳೂರು, ಜು. 6 : ನಗರದಲ್ಲಿ ಹಳದಿ ಕಾಮಾಲೆ (ಜಾಂಡೀಸ್) ರೋಗವು ಹರಡುತ್ತಿರುವ ಬಗ್ಗೆ ವರದಿಯಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಒಂದು ವಾರದ ಅವಧಿಯಲ್ಲಿ ಮಂಗಳೂರಿನಲ್ಲಿ ಸುಮಾರು 15 ಮಂದಿಯಲ್ಲಿ ಈ ರೋಗ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ಬಂದರು ಭಾಗದಲ್ಲಿ ಆರಂಭದಲ್ಲಿ ಪತ್ತೆಯಾದ ಹಳದಿ ಕಾಮಾಲೆ ರೋಗವು ಇದೀಗ ಡೊಂಗರಕೇರಿ, ಕುದ್ರೋಳಿ ಕಡೆಗಳಲ್ಲೂ ಪ್ರಕರಣ ವರದಿಯಾಗುತ್ತಿದೆ. ಇಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ, ನಿಗಾ ವಹಿಸಿದ್ದಾರೆ.
ಅಧಿಕಾರಿಗಳು ಕಳುಹಿಸಿರುವ ಕೆಲವು ಮನೆಗಳ ನೀರಿನ ಮಾದರಿ ಬಂದಿದ್ದು, ಪಾಲಿಕೆಯಿಂದ ಸರಬರಾಜು ಆಗುತ್ತಿರುವ ನೀರು ಶುದ್ಧವಾಗಿದೆ ಎಂಬ ವರದಿ ಬಂದಿದೆ. ಆದರೆ ಕೆಲವು ಮನೆಯ ಸಂಪ್ ಸ್ವಚ್ಛವಿಲ್ಲದೆ, ಅಲ್ಲಿಂದ ಮನೆಗೆ ಸರಬರಾಜು ಅಗುವ ನೀರು ಕಲುಷಿತವಾಗಿದೆ ಎಂಬ ವರದಿ ದಾಖಲಾಗಿದೆ. ಇನ್ನು ಕೆಲವು ಮನೆಗಳಿಂದ ನೀರು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ. ಮಂಗಳೂರಿನ ಬಿಜೈ ನ್ಯೂ ರೋಡ್, ಬಟ್ಟಗುಡ್ಡೆ ಪ್ರದೇಶಗಳಲ್ಲಿ ಪಾಲಿಕೆ ಪೂರೈಸಿದ ನೀರು ಸೇವಿಸಿ ಜನ ಅಸ್ವಸ್ಥಗೊಂಡ ಘಟನೆ ಕೆಲವು ದಿನಗಳ ಹಿಂದೆಯಷ್ಟೇ ನಡೆದಿತ್ತು. ಇದೀಗ ನೀರಿನ ಮಾದರಿಯ ಸಂಪೂರ್ಣ ವರದಿ ಬಂದ ಬಳಿಕವಷ್ಟೇ ದೃಢಪಡಬೇಕಿದೆ.
ಕಾಮಾಲೆ ರೋಗದ ಲಕ್ಷಣಗಳು : ಕಾಮಾಲೆ ಕಾಣಿಸಿಕೊಂಡರೆ ಮುಖ್ಯವಾಗಿ ಕಣ್ಣುಗಳಲ್ಲಿ ಮತ್ತು ತ್ವಚೆಯ ಬಣ್ಣ ಹಳದಿ ಬಣ್ಣವಾಗುತ್ತದೆ. ಮೂತ್ರವು ಗಾಢ ಬಣ್ಣಕ್ಕೆ ತಿರುಗುವುದು, ಮಲದ ಬಣ್ಣದಲ್ಲಿ ಬದಲಾಗುವುದು, ಅತಿಯಾದ ಆಯಾಸ, ವಾಕರಿಕೆ ಮತ್ತು ಹೊಟ್ಟೆ ನೋವು ಹಾಗೂ ಇತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಜ್ವರ ಕಾಣಿಸಿಕೊಂಡರೂ ನಿರ್ಲಕ್ಷಿಸಬಾರದು. ಜ್ವರದ ಜತೆಗೆ ಹಸಿವಿಲ್ಲದಿರುವುದು, ಅತಿಯಾದ ಆಯಾಸ, ನಿಟ್ಟಿನಲ್ಲಿ ಸಾರ್ವಜನಿಕರು ಜಾಗರೂಕರಾಗಬೇಕು. ಇಂತಹ ರೋಗ ಲಕ್ಷಣ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು..
ಮುನ್ನೆಚ್ಚರಿಕೆ ವಹಿಸಿ : ಹಳದಿ ಕಾಮಾಲೆ (ಜಾಂಡೀಸ್) ರೋಗವು ಕಲುಷಿತ ನೀರು, ಆಹಾರದಿಂದ ಮುಖ್ಯವಾಗಿ ಹರಡುವುದಾಗಿರುವುದರಿಂದ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ. ಕುದಿಸಿ ಆರಿಸಿದ, ಬಿಸಿ ಮಾಡಿದ ಆಹಾರಗಳನ್ನೆ ಸೇವಿಸಬೇಕು. ರಸ್ತೆ ಬದಿ ಆಹಾರ ಅಥವಾ ತೆರೆದು ಇರಿಸಿದ ಖಾದ್ಯಗಳನ್ನು ಸೇವಿಸಬಾರದು. ಮನೆಯ ಹೊರಗಿನ ತಿಂಡಿ ತಿನಿಸುಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಉತ್ತಮ.


