ಇಂಫಾಲ, ಜ. 22 : ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಇದು ರಾಜ್ಯದಲ್ಲಿ ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ.
ಮಯಾಂಗಲಂಬಮ್ ರಿಷಿಕಾಂತ ಸಿಂಗ್ ಅವರನ್ನು ಬುಧವಾರ ತುಯಿಬಾಂಗ್ ಪ್ರದೇಶದ ನಿವಾಸದಿಂದ ಅಪಹರಿಸಿ, ನಟಜಂಗ್ ಗ್ರಾಮದ ಸಮೀಪದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕಾರರು ಕಾರ್ಯಾಚರಣೆಗಳ ಅಮಾನತು (SOO) ಒಪ್ಪಂದಕ್ಕೆ ಸಹಿ ಹಾಕದ ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆ (UNKA) ಸದಸ್ಯರಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದೆಲ್ಲೆಡೆ ಪೊಲೀಸ್ ಮತ್ತು ಸೇನಾ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದೆ.


