ಕ್ರಾಂತಿವೀರ ಉಬಾರ್ ಮಂಜ ಬೈದ್ಯರ ಸಂಸ್ಮರಣಾ ಸಮಿತಿ ರಚನೆ – ಸ್ಮಾರಕ, ಪುತ್ಥಳಿ ಸ್ಥಾಪನೆಗೆ ಸಂಪತ್ ಬಿ. ಸುವರ್ಣ ಆಗ್ರಹ

ಬೆಳ್ತಂಗಡಿ, ಮೇ 20 : ಅಪ್ರತಿಮ ದೇಶ ಭಕ್ತ, ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯರ “ಕ್ರಾಂತಿವೀರ ಮಂಜ ಬೈದ್ಯ ಸಂಸ್ಕರಣಾ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ” ರಚಿಸಲಾಗಿದ್ದು, ಈ ಮೂಲಕ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟವನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕ್ರಾಂತಿವೀರ ಮಂಜ ಬೈದ್ಯ ಸಂಸ್ಕರಣಾ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣರವರು ತಿಳಿಸಿದ್ದಾರೆ.

Advertisement

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರು. ಕ್ರಾಂತಿಕಾರಿ ರೈತ ನಾಯಕರೂ, ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯೂ ಆಗಿದ್ದ ಮಂಜಯ್ಯ ಬೈದ್ಯರ ಕ್ರಾಂತಿಯ ಹೋರಾಟದ ವಿಚಾರಗಳನ್ನು ಜನರಿಗೆ ಇನ್ನಷ್ಟು ತಿಳಿಸುವ ಉದ್ದೇಶದಿಂದ ಅವರ ವಂಶಸ್ಥರನ್ನು ಒಳಗೊಂಡ ಕ್ರಾಂತಿಕಾರಿ ಮಂಜಯ್ಯ ಬೈದ್ಯ ಸಂಸ್ಮರಣಾ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಮುದಾಯದವರನ್ನು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಸಮಿತಿ ರಚಿಸಲಾಗುವುದು. ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ಅಮರರಾದ ಮಂಜ ಬೈದ್ಯರ ಜೀವನ, ಹೋರಾಟ ಹಾಗೂ ವಿಚಾರಧಾರೆಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಸಮಿತಿಯ ನೇತೃತ್ವದಲ್ಲಿ ಪ್ರಚಾರ ಅಭಿಯಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಮನವಿಯನ್ನೂ ಸಲ್ಲಿಸಲಾಗುವುದು ಎಂದ ಅವರು, ಉಬಾರ್ ಮಂಜ ಬೈದ್ಯರ ಇತಿಹಾಸವನ್ನು ಮೆಲುಕು ಹಾಕಿದರು.

ಕ್ರಾಂತಿವೀರ ಸ್ವಾತಂತ್ರ್ಯ ಸೇನಾನಿ ಉಬಾರ್ ಮಂಜ ಬೈದ್ಯರ ಸಂಸ್ಮರಣಾ ಸಮಿತಿಯ ಬೇಡಿಕೆಗಳು :

  • ಮಂಜಯ್ಯ ಬೈದ್ಯ ಅವರ ಸ್ಮಾರಕವನ್ನು ಹಾಗೂ ಕಂಚಿನ ಪುತ್ಥಳಿಯನ್ನು ಉಪ್ಪಿನಂಗಡಿಯಲ್ಲಿ ನಿರ್ಮಾಣ ಮಾಡಬೇಕು.
  • ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಥವಾ ನಗರದ ಪ್ರಮುಖ ಜಾಗದಲ್ಲಿ ಮಂಜ ಬೈದ್ಯರ ಪ್ರತಿಮೆ ಸ್ಥಾಪಿಸಬೇಕು.
  • ಸರಕಾರಿ ಉದ್ಯೋಗಿಯಾಗಿದ್ದ ಮಂಜ ಬೈದ್ಯರ ನೆನಪಿಗೆ ಅವಿಭಜಿತ ಪುತ್ತೂರು ತಾಲೂಕಿನ(ಬೆಳ್ತಂಗಡಿ, ಬಂಟ್ವಾಳ, ಸುಳ್ಳ, ಪುತ್ತೂರು) ಯಾವುದಾದರೂ ಮಿನಿ ವಿಧಾನ ಸೌಧಕ್ಕೆ, ಸರಕಾರಿ ಕಾಲೇಜಿಗೆ ಮಂಜ ಬೈದ್ಯರ ಹೆಸರನ್ನು ಇಡಬೇಕು.
  • ಉಪ್ಪಿನಂಗಡಿ-ಗುರುವಾಯನಕೆರೆ ಮುಖ್ಯ ರಸ್ತೆಗೆ ಉಪ್ಪಿನಂಗಡಿ ಮಂಜ ಬೈದ್ಯರ ಹೆಸರು ಇಡಬೇಕು.
  • ಬೆಳ್ತಂಗಡಿ ಉಪ್ಪಿನಂಗಡಿ ಮಧ್ಯ ಭಾಗ ಕಲ್ಲೇರಿಯಲ್ಲಿ ಮಂಜ ಬೈದ್ಯರ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕು.
  • ಶಾಲಾ ಪಠ್ಯ ಪುಸ್ತಕಗಳಲ್ಲಿ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟದ ವಿಚಾರ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಕರಾವಳಿಯ ಯೋಧರ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು.
  • ಸರಕಾರಿ ಆಚರಣೆಗಳಲ್ಲಿ ಮಂಜ ಬೈದ್ಯರ ಹುಟ್ಟು ಹಬ್ಬವನ್ನೂ,ವೀರ ಹುತಾತ್ಮ ದಿನವನ್ನು ಆಚರಿಸಬೇಕು.
  • ಮಂಜ ಬೈದ್ಯರನ್ನು ಗಲ್ಲಿಗೇರಿಸಿದ ಮಂಗಳೂರಿನ ಬಿಕರ್ನಕಟ್ಟೆಯ ಬಳಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು.
    ಮುಂತಾದ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಮಿತಿಯ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಗುವುದು.

ಕ್ರಾಂತಿವೀರ ಮಂಜ ಬೈದ್ಯರ ದಂಗೆಯ ಇತಿಹಾಸ :

ತುಳುನಾಡಿನ ರೈತ ದಂಗೆಯ ನಾಯಕರಾದ ಕಲ್ಯಾಣಪ್ಪ, ರಾಮೇಗೌಡ ಮತ್ತು ನಂಜಯ್ಯರ ನೇತೃತ್ವದಲ್ಲಿ ಸುಳ್ಯದಿಂದ ಬಂದಿದ್ದ ದಂಡಾಳುಗಳಿಗೆಲ್ಲ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಊಟ, ಉಪಹಾರಾದಿಗಳ ತಯಾರಿಗಾಗಿ ಗದ್ದೆಯಲ್ಲಿ ಚಪ್ಪರ ಹಾಕಿ ಅಡುಗೆಯ ಭಟ್ಟರುಗಳನ್ನು ನೇಮಕ ಮಾಡಲಾಗಿತ್ತು. ದಂಡಿನವರೆಲ್ಲ ಅಲ್ಲಿ ಹೋಗಿ ವಿಶ್ರಮಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು. ವ್ಯಾಪಾರಸ್ಥರ ಕೇಳಿಕೆಯಂತೆ ದಂಡಿನವರೆಲ್ಲ ದೇವಸ್ಥಾನದ ಎದುರಿನ ಮಜಲು ಗದ್ದೆಗೆ ತೆರಳಿದರು. ರಾತ್ರಿ ಊಟ ಮಾಡಿ ಮಲಗಿ ಸುಖವಾಗಿ ನಿದ್ರಿಸಿದರು.

ಆ ದಿನ ಎಪ್ರಿಲ್ ತಿಂಗಳ ಮೊದಲ ದಿನ ಮುಂಜಾನೆ ಎದ್ದು ಎಲ್ಲರೂ ಹತ್ತಿರದ ಕೆರೆ, ಬಾವಿಗಳನ್ನರಸಿ ಕೊಂಡು ಹೋಗಿ ಸ್ನಾನಾದಿಗಳನ್ನು ಮುಗಿಸಿ ಶುಚಿರ್ಭೂತರಾಗಿ ಬಂದರು. ಕಲ್ಯಾಣಪ್ಪನ ಜೊತೆಗೂಡಿ ಹೋಗಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು. ಆಗ ಅಲ್ಲಿ ನಟ್ಟೋಜ ಮನೆತನದವರು ಇದ್ದರು. ಅವರಲ್ಲಿ ಹೇಳಿ ಎಳನೀರು ತರಿಸಿ ದೇವರಿಗೆ ಅಭಿಷೇಕ ಮಾಡಿಸಲಾಯಿತು. ಪ್ರಸಾದ ವಿತರಣೆ ಮಾಡಿದ ಬಳಿಕ ನಟ್ಟೋಜರು ತಮ್ಮ ಮನೆಯಿಂದ ಎಳನೀರು ತರಿಸಿ ದಂಡಿನಲ್ಲಿದ್ದ ಗಣ್ಯರಿಗೆಲ್ಲ ಕುಡಿಯಲು ಕೊಟ್ಟು ಶುಭಹಾರೈಸಿದರು. ದೇವಾಲಯದಿಂದ ಹೊರ ಬಂದಾಗ ಉಪ್ಪಿನಂಗಡಿ ಕಡೆಯಿಂದ ಒಂದು ಯುವಕರ ಪಡೆ, ಕಲ್ಯಾಣಪ್ಪನ ದಂಡಿನಲ್ಲಿ ಸೇರಿಕೊಳ್ಳಲು ಬರುತ್ತಿರುವುದು ಕಂಡಿತು. ಉಪ್ಪಿನಂಗಡಿಯಿಂದ ಬಂದ ಯುವಕರ ಪಡೆಯ ನಾಯಕ ಮಂಜ ಬೈದ್ಯರಾಗಿದ್ದರು. ಮಂಜ ಬೈದ್ಯ ಉಪ್ಪಿನಂಗಡಿಯ ಒಬ್ಬ ರೈತರಾಗಿದ್ದರು. ಆತ ಇಂಗ್ಲಿಷ್ ಓದು ಬರಹ ಕಲಿತವನಾದ ಕಾರಣ ಆತನನ್ನು ಉಪ್ಪಿನಂಗಡಿಯ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಬ್ರಿಟಿಷರು ನೇಮಿಸಿಕೊಂಡಿದ್ದರು. ಆಗ ಉಪ್ಪಿನಂಗಡಿಯಲ್ಲಿ ಅವಿಭಜಿತ ಪುತ್ತೂರು ತಾಲೂಕು ಕಚೇರಿ ಇತ್ತು. ಮಂಜ ವೈದ್ಯ ಬ್ರಿಟಿಷರಿಂದ ಸಂಬಳ ಪಡೆಯುತ್ತಿದ್ದರೂ ಬ್ರಿಟಿಷರ ಅನುಯಾಯಿಯಾಗಿರಲಿಲ್ಲ. ಬ್ರಿಟಿಷರ ವಿರೋಧಿಯಾಗಿದ್ದರು. ಬ್ರಿಟಿಷರನ್ನು ಈ ಊರಿಂದ ಓಡಿಸುವ ಕಾಲ ಯಾವಾಗ ಬರುತ್ತದೆ ಎಂದು ಕಾದುಕೊಂಡಿದ್ದರು.

ಕಲ್ಯಾಣಪ್ಪನ ದಂಡು ಪುತ್ತೂರಲ್ಲಿ ಬಂದು ತಂಗಿದೆ ಎಂಬ ಸುದ್ದಿ ತಿಳಿದೊಡನೆ ಆತ ತನ್ನ ಗೆಳೆಯರು,ಬಂಧು- ಬಾಂಧವರೊಡಗೂಡಿ ಕಚೇರಿಯಲ್ಲಿದ್ದ ಬ್ರಿಟಿಷ ಅಧಿಕಾರಿಗಳನ್ನೆಲ್ಲಾ ಬಂಧಿಸಿ ಖಜಾನೆಯ ಬೀಗ ಒಡೆದು ಅಲ್ಲಿದ್ದ ಅಪಾರ ಹಣವನ್ನು ಚೀಲದಲ್ಲಿ ತುಂಬಿಸಿ ಕುದುರೆಯ ಮೇಲೆ ಹೇರಿಕೊಂಡು ಹತ್ತಾರು ದೇಶಭಕ್ತ ಯುವಕರನ್ನು ಸೇರಿಕೊಂಡು ಪುತ್ತೂರಿಗೆ ಬಂದಿದ್ದರು. ಮಂಜ ಬೈದ ಕುದುರೆಯಿಂದಿಳಿದು ಬಂದು ರಾಮಗೌಡ, ಕಲ್ಯಾಣಪ್ಪ ಮತ್ತು ನಂಜಯ್ಯನವರೊಂದಿಗೆ ಮಾತನಾಡಿದರು. ತಾನು ತಂದ ಕಾಣಿಕೆಯನ್ನು ಕಲ್ಯಾಣಸ್ವಾಮಿಗೊಪ್ಪಿಸಿದರು. ತನ್ನೊಂದಿಗೆ ಬಂದ ನೂರಾರು ದಂಡಾಳುಗಳ ಜೊತೆಯಲ್ಲಿ ತಾನು ಕೂಡ ದಂಡಿನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಅಷ್ಟರವರೆಗೆ ದಂಡಾಳುಗಳ ಯೋಗಕ್ಷೇಮವನ್ನೆಲ್ಲ ಕೆದಂಬಾಡಿ ರಾಮೇ ಗೌಡರೇ ನೋಡಿಕೊಳ್ಳುತ್ತಿದ್ದರು. ಈಗ ಅವರಿಗೆ ಇನ್ನೊಬ್ಬ ದಂಡನಾಯಕ ಲಭಿಸಿದಂತಾಯಿತು. ಮಂಜ ಬೈದ್ಯರು ಆಂಗ್ಲ ಭಾಷೆ ಬಲ್ಲವರಾದುದು ಇನ್ನಷ್ಟು ಸಹಕಾರಿಯಾಯಿತು. ಮಂಜ ಬೈದರು ದಂಡಿಗೆ ಸೇರಿದುದರಿಂದ ದಂಡಿನಬಲ ಇಮ್ಮಡಿಗೊಂಡಂತಾಯಿತು.

ಪುತ್ತೂರಿನಲ್ಲಿ ನಾವು ನಮ್ಮದಂಡಿನ ಬಲ ಪ್ರದರ್ಶನಗೊಳಿಸಿಲ್ಲ. ಅದನ್ನು ತೋರ್ಪಡಿಸಿ, ಪುತ್ತೂರಿನಲ್ಲೊಂದು ದರ್ಬಾರು ನಡೆಸಿ, ನಾವು ಮಂಗಳೂರಿನತ್ತ ಮುಂದುವರಿಯೋಣ ಎಂದು ಮಂಜ ಬೈದ್ಯರು ಹೇಳಿದರು. ಎಲ್ಲರೂ ಸಂತೋಷದಿಂದ ಅದಕ್ಕೊಪ್ಪಿದರು. ಧರ್ಮಸ್ಥಳದ ಆಗಿನ ಧರ್ಮಾಧಿಕಾರಿಗಳಾಗಿದ್ದ ಶ್ರೀ ಮಂಜಯ್ಯ ಹೆಗ್ಗಡೆಯವರು ಫಿರಂಗಿಗಳನ್ನು ಕಳಿಸಿದರು ಬಳಿಕ ದಂಡಾಳುಗಳೆಲ್ಲ ಮೆರವಣಿಗೆಗೆ ಸಜ್ಜಾದರು. ರಾಜನ ಪೋಷಾಕಿನಲ್ಲಿದ್ದ ಕಲ್ಯಾಣಪ್ಪ, ದಂಡನಾಯಕರ ಪೋಷಾಕಿನಲ್ಲಿದ್ದ ರಾಮೇಗೌಡ ಮತ್ತು ಮಂಜ ಬೈದ್ಯ ದಿವಾನನ ವೇಷದಲ್ಲಿದ್ದ ನಂಜಯ್ಯ ಕುದುರೆ ಏರಿ ಮುಂದೆ ಇದ್ದರು. ಅವರ ಹಿಂದಿನಿಂದ ಉಳಿದ ಅಶ್ವಾರೋಹಿಗಳಿದ್ದರು. ಪದಾತಿಗಳಿದ್ದರು. ದಂಡಾಳುಗಳನ್ನು ಎರಡು ವಿಭಾಗ ಮಾಡಿ ಒಂದು ವಿಭಾಗವನ್ನು ಕಲ್ಯಾಣಪ್ಪನಿಗಿಂತ ಮುಂದೆ ನಿಲ್ಲಿಸಲಾಯಿತು. ರಾಮೇಗೌಡರು ಆ ತಂಡಕ್ಕೆ ನಾಯಕನಾಗಿ ನಿಂತರು. ಉಳಿದೊಂದು ಪಡೆ ಹಿಂದಿನಿಂದ ಇತ್ತು. ಅದಕ್ಕೆ ಮಂಜ ಬೈದರು ನಾಯಕರಾಗಿದ್ದರು. ಕಲ್ಯಾಣಪ್ಪನ ಪಡೆ ದೇವಾಲಯದ ಮುಂಭಾಗದ ಮಜಲು ಗದ್ದೆಯಿಂದ ಹೊರಟು ದರ್ಬೆಯ ಗೇಟಿನವರೆಗೆ ಹೋಯಿತು. ಅಲ್ಲಿಂದ ಹಿಂತಿರುಗಿ ಕಲ್ಲೇಗಕ್ಕೆ ಮುಂದುವರಿಯಿತು. ದಂಡಾಳುಗಳು ಜೈಕಾರ ಹಾಕುತ್ತಿದ್ದರು. ರಸ್ತೆಯ ಇಕ್ಕಡೆಗಳಲ್ಲಿ ನಿಂತ ಜನರು ಜಯ ಘೋಷಣೆಯನ್ನು ಅವರಿಗೆ ಮಾಡುತ್ತಿದ್ದರು. ಕಲ್ಲೇಗದವರೆಗೆ ಹೋದ ದಂಡಾಳುಗಳು ಹಿಂತಿರುಗಿ ಬಂದು ಪುತ್ತೂರಿನ ಉಪಕಲೆಕ್ಟರನ ಕಚೇರಿ ಎದುರು ಜಮೆಗೊಂಡರು.

ಊರವರು ಕೂಡ ಅಲ್ಲಿ ಬಹಳಷ್ಟು ಸಂಖ್ಯೆಯಿಂದ ಒಟ್ಟಾಗಿ ಸೇರಿದ್ದರು. ರಾಮೇಗೌಡರು ಕಲ್ಯಾಣ ಸ್ವಾಮಿಯನ್ನು ಕಲೆಕ್ಟರನ ಆಸನದಲ್ಲಿ ಕುಳಿತುಕೊಳ್ಳಿಸಿದರು. ಉಳಿದವರು ಅವರ ಹಿಂದೆ ನಿಂತರು. ರಾಮೇಗೌಡರು ಸುಳ್ಯ-ಪುತ್ತೂರು ಸ್ವತಂತ್ರ್ಯವಾಗಿದೆ. ಬ್ರಿಟಿಷರನ್ನು ಇಲ್ಲಿಂದ ಹೊಡೆದೋಡಿಸಲಾಗಿದೆ. ಕಲ್ಯಾಣ ಸ್ವಾಮಿಯನ್ನು ನಾವು ನಮ್ಮ ಮಹಾರಾಜನನ್ನಾಗಿ ಸ್ವೀಕರಿಸಿದ್ದೇವೆ. ಇನ್ನು ಬ್ರಿಟಿಷರಿಗೆ ಯಾರೂ ತೆರಿಗೆ ತೆರಬೇಕಾಗಿಲ್ಲ. ನಮ್ಮ ದಂಡಯಾತ್ರೆಗೆ ನೀವೆಲ್ಲ ತನು-ಮನ-ಧನದಿಂದ ಸಹಕರಿಸಬೇಕು. ಮಂಗಳೂರಿನವರೆಗೆ ತೆರಳಿ ತುಳು ರಾಜ್ಯವನ್ನು ವಶಪಡಿಸಿಕೊಳ್ಳಲು ನೀವು ಆಶೀರ್ವದಿಸಬೇಕು ಎಂದು ಹೇಳಿ ಕಲ್ಯಾಣ ಸ್ವಾಮಿಗೆ ಜಯಘೋಷ ಹಾಕಿದರು. ನಂತರ ಮಂಗಳೂರಿಗೆ ತೆರಳಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದರು.

ಹೀಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಎಷ್ಟೋ ಸಮಯಕ್ಕೆ ಮುಂಚೆಯೇ ತುಳುನಾಡನ್ನು ಸ್ವತಂತ್ರ ಗೊಳಿಸಿದ ಹಿರಿಮೆ ಕೆದಂಬಾಡಿ ರಾಮೇಗೌಡರು ಮತ್ತು ಉಪ್ಪಿನಂಗಡಿ ಮಂಜ ಬೈದ್ಯ ಹಾಗೂ ತಂಡದವರದ್ದಾಗಿತ್ತು. ಆ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕದೆ ಇರುತ್ತಿದ್ದಲ್ಲಿ ತುಳುನಾಡಿನ ರೈತರ ಹೋರಾಟದ ಕಿಚ್ಚು ದೇಶವ್ಯಾಪಿಯಾಗುತ್ತಿತ್ತೇನೋ ಬಲ್ಲವರಾರು ? ಇದೀಗ ಮಂಜ ಬೈದ್ಯರಿಲ್ಲ, ಅವರ ದೇಶಪ್ರೇಮ, ಹೋರಾಟದ ಕಿಚ್ಚು, ಸಂಘಟನಾ ಚಾತುರ್ಯ, ನಾಯಕತ್ವದ ಮಾದರಿ ನಮಗೆ ಆದರ್ಶವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಬೇಕಾದುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಮಂಗಲ ಪಾಂಡೆ ನೇತೃತ್ವದಲ್ಲಿ ನಡೆದ ಸಿಪಾಯಿ ದಂಗೆ ಎಂದು ಕರೆಯಲ್ಪಟ್ಟ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 20 ವರ್ಷಗಳ ಮೊದಲೇ ಅಂದರೆ 1837ರಲ್ಲಿ ನಡೆದ ಕಲ್ಯಾಣಪ್ಪನ ಕಾಟುಕಾಯಿ ಹೋರಾಟ ಅಥವಾ ಅಮರಸುಳ್ಯದ ಸ್ವಾತಂತ್ರ್ಯ ದಂಗೆಯಲ್ಲಿ ಮಂಜ ಬೈದ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರೈತನಾಯಕ ಕೆದಂಬಾಡಿ ರಾಮೇಗೌಡರ ಜೊತೆಗೆ ಅವರಿಗೆ ಹೆಗಲೆಣೆಯಾಗಿ ಹೋರಾಡಿದವರು ಆಜಾನುಬಾಹು, ಏಳು ಕಾಲು ಅಡಿ ಎತ್ತರದ ಉಪ್ಪಿನಂಗಡಿ ಮಂಜ ಬೈದ್ಯರು. ಬ್ರಿಟಿಷರು ರೈತರ ಮೇಲೆ ಹೇರಿದ್ದ ಅನ್ಯಾಯದ ನಗದು ಕಂದಾಯ ನೀತಿಯ ವಿರುದ್ಧ ಸ್ವತಃ ಬ್ರಿಟಿಷ್ ಸರಕಾರದ ಉದ್ಯೋಗಿಯಾಗಿ ಮಂಜ ಬೈದ್ಯ ಅವರು ದಂಗೆ ಎದ್ದರು.
ಬ್ರಿಟಿಷ್ ಆಡಳಿತದ, ಅಂದಿನ ತಾಲೂಕು ಕೇಂದ್ರ ಉಪ್ಪಿನಂಗಡಿಯ-ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದರು ಮಂಜ ಬೈದರು. ಸ್ವಾತಂತ್ರ್ಯ ಹೋರಾಟದ ವಿಷಯ ತಿಳಿಯುತ್ತಲೇ ಸಿದ್ಧತೆ ಮಾಡಿಕೊಂಡು ಹತ್ತಾರು ಹೋರಾಟಗಾರರೊಂದಿಗೆ ತಾನು ಕುದುರೆಯನ್ನೇರಿ, ಬಂದೂಕು ಧರಿಸಿ ವೀರ ಪೋಷಾಕಿನಲ್ಲಿ ಆ ತಂಡವನ್ನು ಸೇರಿಕೊಂಡರು. ಇಂಗ್ಲಿಷ್ ಭಾಷೆ ಬಲ್ಲ ಏಕೈಕ ವ್ಯಕ್ತಿ ಮಂಜ ಬೈದ್ಯರು, ರೈತ ಹೋರಾಟಗಾರರೇ ತುಂಬಿದ್ದ ಆ ಗುಂಪನ್ನು ತಂಡದ ಸಮೇತ ಬಂದು ಸೇರಿದ್ದು ಹೋರಾಟಗಾರರ ತಂಡಕ್ಕೆ ಭೀಮ ಬಲ ತಂದು ಕೊಟ್ಟಿತ್ತು. ಉಪ್ಪಿನಂಗಡಿ ಮಂಜ ಬೈದ್ಯರು ಮತ್ತು ಇವರೊಂದಿಗಿನ ಕ್ರಾಂತಿಕಾರಿ ಪಡೆ 1837 ಏಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡದಲ್ಲಿದ್ದ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ಕನ್ನಡಿಗರಾದ ಹಾಲೇರಿ ರಾಜವಂಶದ ಧ್ವಜವನ್ನು ಹಾರಿಸಿದ್ದರು. ಈ ಐತಿಹಾಸಿಕ ಘಟನೆ ಯಿಂದಾಗಿಯೇ ಆ ಸ್ಥಳಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ. ಈ ಮೂಲಕ ಸುಮಾರು 13 ದಿನಗಳ ಕಾಲ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ್ದರು. ಅನಂತರ ಬ್ರಿಟಿಷ್ ಸೈನ್ಯ, ಕ್ರಾಂತಿಯನ್ನು ಹತ್ತಿಕ್ಕಿದಾಗ ಮಂಜ ಬೈದ್ಯರನ್ನು ಬಂಧಿಸಲಾಯಿತು. 1837 ಮೇ 27 ರಂದು ಅವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬ್ರಿಟಿಷರು ಬಹಿರಂಗವಾಗಿ ಗಲ್ಲಿಗೇರಿಸಿದರು. ಜನರಲ್ಲಿ ಭಯ ಹುಟ್ಟಿಸಲು ಬ್ರಿಟಿಷರು ಇವರ ಮೃತದೇಹವನ್ನು ತಿಂಗಳುಗಟ್ಟಲೆ ಗಲ್ಲುಗಂಬದಿಂದ ಕೆಳಗಿಳಿಸದೆ ರಣಹದ್ದುಗಳು ತಿನ್ನುವಂತೆ ಹಾಗೆಯೇ ಬಿಡುವ ಕ್ರೂರ ಆದೇಶವನ್ನು ನೀಡಿದ್ದರು.

1837ರ ಮೇ 27 ರಂದು ಮಂಗಳೂರಿನಲ್ಲಿ ಬ್ರಿಟಿಷರು ಮಂಜ ಬೈದ್ಯರನ್ನು ಗಲ್ಲಿಗೇರಿಸಿದರು. ಬ್ರಿಟಿಷರು ಕ್ರೌರ್ಯದ ಪರಮಾವಧಿಯಾಗಿ, ಜನರಲ್ಲಿ ಭಯ ಹುಟ್ಟಿಸಲು ಮಂಜ ಬೈದ್ಯರ ಶವವನ್ನು ಬಿಕರ್ನಕಟ್ಟೆಯ ಬಯಲಿನಲ್ಲಿ ಕಾಗೆ, ಹದ್ದುಗಳು ತಿನ್ನುವಂತೆ ಹಾಗೆಯೇ ನೇತುಹಾಕಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ಭೀಕರ ಮರಣದ ಸಾಕ್ಷಿಯಾದ ಸ್ಥಳವಾಗಿದ್ದರಿಂದಲೇ ಈ ಜಾಗಕ್ಕೆ ಮುಂದೆ ‘ಭೀಕರ ಮರಣದ ಕಟ್ಟೆ’ – ‘ಬಿಕರ್ನಕಟ್ಟೆ’ (Bikarnakatte) ಎಂಬ ಹೆಸರು ಬಂದಿತು ಎಂಬ ಜನ ಪ್ರತೀತಿ ಇದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ತಂಡ ಕಟ್ಟಿ, ಆರ್ಥಿಕ ಬಲ ತುಂಬಿ, ಹೋರಾಡಿ, ಒಂದೊಮ್ಮೆ ಸ್ವಾತಂತ್ಯವನ್ನು ಕೂಡಾ ಪಡೆದ ಹಿರಿಮೆಯೊಂದಿಗೆ ದೇಶಕ್ಕಾಗಿ ಬಲಿದಾನವಾಗಿ ಹೋದವರು ಉಪ್ಪಿನಂಗಡಿ ಮಂಜ ಬೈದ್ಯರು. ಇಂಥ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಹಿರಿಮೆ ಗರಿಮೆ, ಬಲಿದಾನ ಇಂದಿನ ಹಾಗೂ ಮುಂದಿನ ತಲೆಮಾರಿಗೆ ತಿಳಿಯುವಂತಾಗಲು ಪ್ರಸ್ತುತ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಸಂಪತ್ ಬಿ ಸುವರ್ಣರವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ, ಹಿರಿಯ ಮುತ್ಸದ್ದಿ ಕ್ರಾಂತಿವೀರ ಮಂಜ ವೈದ್ಯ ಸಂಸ್ಕರಣಾ ಸಮಿತಿಯ ಗೌರವ ಸಲಹೆಗಾರರಾದ ಭುಜಬಲಿ ಧರ್ಮಸ್ಥಳ, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು, ಸಮಿತಿ ಸಂಚಾಲಕರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಉದಯ್ ಬಂದಾರು, ಮಂಜಯ್ಯ ಬೈದ್ಯ ವಂಶಸ್ಥ ವೆಂಕಪ್ಪ ಪೂಜಾರಿ ಕುಕ್ಕಾಜೆ, ಜನಾರ್ಧನ ಪೂಜಾರಿ, ವಿಜಯ ಗೌಡ ವೇಣೂರು, ರಾಘವ ಕಲ್ಮಂಜ, ಉಪ್ಪಿನಂಗಡಿಯ ರಾಮಚಂದ್ರ ಪೂಜಾರಿ, ವಸಂತ ಕುಕ್ಕಾಜೆ, ನಿತ್ಯಾನಂದ ನಾವುರ, ಹರ್ಷ ಸಂಪಿಗೆತ್ತಾಯ ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.