ದುಬಾರೆ ಸಾಕಾನೆಗಳ ನಡುವಿನ ಭೀಕರ ಕಾದಾಟ – ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಸಾವು

ಕೊಡಗು, ಮೇ 19 : ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಮೇ 18ರ ಸೋಮವಾರದಂದು ನಡೆದ ಸಾಕಾನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ (35 ವರ್ಷ) ಆನೆಯು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದೆ.

Advertisement

ಮೇ 18 ರ ಸೋಮವಾರ ಮಧ್ಯಾಹ್ನ ಸುಮಾರು 11:15 ರಿಂದ 12 ಗಂಟೆಯ ಅವಧಿಯಲ್ಲಿ ಮಾವುತರು ಕಾವೇರಿ ನದಿ ತಟದಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ನೂರಾರು ಪ್ರವಾಸಿಗರು ಅಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ದಂತವಿಲ್ಲದ ಸೌಮ್ಯ ಸ್ವಭಾವದ ‘ಮಾರ್ತಾಂಡ’ ಆನೆಯ ಮೇಲೆ, ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಮತ್ತೊಂದು ಆನೆ ‘ಕಂಜನ್’ (28 ವರ್ಷ) ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಭೀಕರವಾಗಿ ದಾಳಿ ನಡೆಸಿತು.

ಕಾದಾಟದಲ್ಲಿ ‘ಮಾರ್ತಾಂಡ’ ಗಂಭೀರ ಗಾಯ

ಕಾದಾಟದ ವೇಳೆ ಕಂಜನ್ ಆನೆಯು ತನ್ನ ಚೂಪಾದ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾಗಿ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ದಾಳಿಯ ರಭಸಕ್ಕೆ ಮಾರ್ತಾಂಡ ನದಿಯಲ್ಲೇ ಕುಸಿದು ಬಿದ್ದಿದ್ದನು. ಇದರಿಂದಾಗಿ ಆನೆಗೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಆಂತರಿಕ ಗಾಯಗಳಾಗಿದ್ದವು. ಘಟನೆ ನಡೆದ ತಕ್ಷಣ ಅರಣ್ಯ ಇಲಾಖೆಯ ಪಶುವೈದ್ಯರಾದ ಡಾ. ಮುಜೀಬ್ ನೇತೃತ್ವದ ವೈದ್ಯಕೀಯ ತಂಡ ಇಡೀ ರಾತ್ರಿ ಮಾರ್ತಾಂಡನಿಗೆ ಗಿಡಮೂಲಿಕೆ ಹಾಗೂ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟಿತ್ತು. ಆದರೆ, ಗಾಯಗಳು ಅತ್ಯಂತ ಆಳವಾಗಿದ್ದರಿಂದ ಮತ್ತು ಆಂತರಿಕ ರಕ್ತಸ್ರಾವ ನಿಲ್ಲದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಮಾರ್ತಾಂಡನ ಸಾವಿನಿಂದ ಅವನನ್ನು ಸಾಕಿ ಸಲಹಿದ್ದ ಮಾವುತರು ಮತ್ತು ಶಿಬಿರದ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

ಇದೇ ಘಟನೆಯಲ್ಲಿ ಪ್ರವಾಸಿ ಮಹಿಳೆಯೂ ಸಾವು

ಸೋಮವಾರ ಈ ಎರಡು ಆನೆಗಳು ಕಾದಾಡುವಾಗ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದರು. ಈ ವೇಳೆ ಮಾರ್ತಾಂಡ ಆನೆಯ ಹತ್ತಿರವೇ ನಿಂತು ಸ್ನಾನ ಮಾಡಿಸುವುದನ್ನು ವೀಕ್ಷಿಸುತ್ತಿದ್ದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ನು (33 ವರ್ಷ) ಎಂಬವರು ಕಾದಾಟದ ರಭಸಕ್ಕೆ ಸಿಲುಕಿದ್ದರು. ಕಂಜನ್ ದಾಳಿ ಮಾಡಿದಾಗ ಮಾರ್ತಾಂಡ ನಿಯಂತ್ರಣ ತಪ್ಪಿ ಜಿನ್ನು ಅವರ ಮೇಲೆ ಬಿದ್ದಿದ್ದರಿಂದ, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಪತಿ ಜೋಯಲ್ ಹಾಗೂ ಅವರ ಸಣ್ಣ ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮೃತ ಮಹಿಳೆಯ ಕುಟುಂಬದವರು ಆಕೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ರವಾಸಿಗರಿಗೆ ನಿರ್ಬಂಧ

ಈ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದುಬಾರೆ ಆನೆ ಶಿಬಿರ ಮತ್ತು ಅಲ್ಲಿನ ಬೋಟಿಂಗ್ ಸೇವೆಗಳನ್ನು ಎರಡು ದಿನಗಳ ಕಾಲ (ಮಂಗಳವಾರ ಮತ್ತು ಬುಧವಾರ) ಪ್ರವಾಸಿಗರಿಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇನ್ಮುಂದೆ ಪ್ರವಾಸಿಗರು ಆನೆಗಳ ಸೊಂಡಿಲು ಮುಟ್ಟುವುದು, ಹತ್ತಿರ ನಿಂತು ಫೋಟೋ ತೆಗೆಸಿಕೊಳ್ಳುವುದು, ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಆಹಾರ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲು ಸೂಚಿಸಲಾಗಿದೆ. ಮೃತ ಪ್ರವಾಸಿ ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ₹20 ಲಕ್ಷ ಪರಿಹಾರ ಘೋಷಿಸಲಾಗಿದೆ.

ಸೌಮ್ಯ ಸ್ವಭಾವದಿಂದ ಪ್ರವಾಸಿಗರಿಗೆ ಮತ್ತು ಇಲಾಖೆಯ ಕಾರ್ಯಾಚರಣೆಗಳಿಗೆ ನೆರವಾಗುತ್ತಿದ್ದ ಮಾರ್ತಾಂಡ ಆನೆಯ ದಾರುಣ ಅಂತ್ಯ ದುಬಾರೆ ಶಿಬಿರದಲ್ಲಿ ಶೋಕದ ವಾತಾವರಣ ಮೂಡಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.