ಹೊಸದಿಲ್ಲಿ, ಮೇ. 13 : ದೇಶದ ವಿದೇಶಿ ವಿನಿಮಯ ಉಳಿಸಲು, ಆಮದಿನಿಂದಾಗುವ ನಷ್ಟ ತಪ್ಪಿಸಲು ಪೆಟ್ರೋಲ್-ಡೀಸೆಲ್ ಮಿತ ಬಳಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರಿಗೆ ಭಾನುವಾರ ಕರೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ರಾಷ್ಟ್ರನಾಯಕರಾಗಿ ತಾವೇ ಈ ಕ್ರಮ ಅಳವಡಿಸಿದ್ದಾರೆ. ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು 50% ಗೆ ಇಳಿಸುವಂತೆ ಹಾಗೂ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸುವಂತೆ ಸೂಚನೆ ನೀಡಿದ್ದಾರೆ. ಪ್ರಧಾನಿಯವರ ಈ ನಡೆ ಅನೇಕ ಬಿಜೆಪಿ ಮುಖ್ಯಮಂತ್ರಿಗಳಿಗೂ ಮಾದರಿಯಾಗಿದೆ.
ಅಮೆರಿಕ- ಇರಾನ್ ಸಂಘರ್ಷದಿಂದಾಗಿ ಮಧ್ಯಪ್ರಾಷ್ಯದ ಸ್ಥಿತಿ ಹದಗೆಟ್ಟಿದ್ದು, ದೇಶಕ್ಕೆ ಕಚ್ಚಾತೈಲ ಪೂರೈಕೆ ಸರಪಳಿಯಲ್ಲೂ ಅಡೆತಡೆಗಳಾಗಿವೆ. ಇದರಿಂದ ಕಚ್ಚಾತೈಲವನ್ನು ದುಬಾರಿ ದರ ಕೊಟ್ಟು ಖರೀದಿಸಬೇಕಾಗಿದೆ. ಹಣದುಬ್ಬರದ ಭೀತಿ, ರುಪಾಯಿ ಮೌಲ್ಯದ ಕುಸಿತವನ್ನು ರಕ್ಷಿಸಲು ದೇಶದ ಜನ ಸಹಕರಿಸಬೇಕು, ಕರ್ತವ್ಯವಾಗಿ ಪರಿಗಣಿಸಿ, ವಿದೇಶ ಓಡಾಟ, ಇವಿ ವಾಹನ, ಸಾರ್ವಜನಿಕ ವಾಹನಗಳ ಬಳಕೆ ಮಾಡಬೇಕು. ಪೆಟ್ರೋಲ್ ಡೀಸೆಲ್ ಮಿತಬಳಕೆಗೆ ವರ್ಕ್‌ಫ್ರಂ ಹೋಂ ಮಾಡಬೇಕು ಎಂದು ಕರೆಕೊಟ್ಟಿದ್ದರು.
ಇದೀಗ ಗುವಾಹಟಿ-ವಡೋದರಾ ಭೇಟಿ ಸಂದರ್ಭದಲ್ಲಿ ಪ್ರಧಾನಿಗಳು ಬೆಂಗಾವಲು ವಾಹನಗಳನ್ನು ಕಡಿತ ಮಾಡಿದ್ದಾರೆ. ಮೋದಿ ತಮ್ಮ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ವಿಶೇಷ ರಕ್ಷಣಾ ಪಡೆಗೆ (SPG) ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವಂತೆ ನಿರ್ದೇಶನ ನೀಡಿದ್ದಲ್ಲದೆ, ತಮ್ಮ ಭದ್ರತಾ ವ್ಯೂಹದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು (EVs) ಅಳವಡಿಸಿಕೊಳ್ಳುವಂತೆ , ಆದರೆ, ಈ ಉದ್ದೇಶಕ್ಕಾಗಿ ಯಾವುದೇ ಹೊಸ ವಾಹನಗಳನ್ನು ಖರೀದಿಸಬಾರದು ಎಂಬ ಷರತ್ತನ್ನೂ ಅವರು ವಿಧಿಸಿದ್ದಾರೆ.
ಎಸ್‌ಪಿಜಿ ಈಗಾಗಲೇ ಈ ಸೂಚನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಭದ್ರತೆಗೆ ಸಂಬಂಧಿಸಿದ ಕಡ್ಡಾಯ ಮಾರ್ಗಸೂಚಿಗಳಾದ ‘ಬ್ಲೂ ಬುಕ್ ನಿಯಮಗಳಿಗೆ ಯಾವುದೇ ಧಕ್ಕೆಯಾಗದಂತೆ ಈ ಬದಲಾವಣೆಗಳನ್ನು ಮಾಡುತ್ತಿದೆ.
ಬಿಜೆಪಿ ಮುಖ್ಯಮಂತ್ರಿಗಳಿಂದ ಪ್ರಧಾನಿಯ ಅನುಕರಣೆ
ಪ್ರಧಾನಿಯವರ ಈ ನಡೆಯನ್ನು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಆದರ್ಶವಾಗಿ ತೆಗೆದುಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕೂಡ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಆಡಳಿತಾತ್ಮಕ ವೆಚ್ಚಗಳನ್ನು ತಗ್ಗಿಸುವುದು ಮತ್ತು ರಾಷ್ಟ್ರೀಯ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಈ ನಡೆಯ ಹಿಂದಿನ ಉದ್ದೇಶವಾಗಿದೆ.

