ಮಂಗಳೂರು : ದೀರ್ಘ ಕಾಲದ ವೈರತ್ವ ಮರೆತು ಒಂದಾದ ಕರಾವಳಿ ಕಂಡ ಶ್ರೇಷ್ಠ ನಾಯಕರು !

Advertisement

ಮಂಗಳೂರು, ಫೆ. 02 : ದೀರ್ಘ ಕಾಲದಿಂದಲೂ ರಾಜಕೀಯ ದ್ವೇಷದಿಂದಾಗಿ ಸ್ನೇಹ ಮರೆತು ವೈರತ್ವ ಸಾಧಿಸಿದ್ದ ಕರಾವಳಿಯ ಶ್ರೇಷ್ಠ ನಾಯಕರು ಇದೀಗ ಮತ್ತೆ ಒಂದಾಗಿದ್ದಾರೆ. ಈ ಮೂಲಕ ರಾಜಕಾರಣದ ದ್ವೇಷ ಶಾಶ್ವತವಲ್ಲ ಎಂಬುದನ್ನು ಸಾರಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರ ಮನೆಗೆ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ರಾಜಕೀಯದ ಸಣ್ಣ ಪದಗಳೂ ಬರಲಿಲ್ಲ ಎಂಬುದು ವಿಶೇಷ.

Advertisement

ಫೆ.1ರಂದು ಕರಾವಳಿಗೆ ಆಗಮಿಸಿದ್ದ ವೀರಪ್ಪ ಮೊಯ್ಲಿ ಅವರು ಮಧ್ಯಾಹ್ನ ಬಂಟ್ವಾಳದಲ್ಲಿರುವ ಜನಾರ್ದನ ಪೂಜಾರಿ ನಿವಾಸಕ್ಕೆ ತೆರಳಿದರು. 4 ದಶಕಗಳಿಂದ ಅನಿವಾರ್ಯತೆಯನ್ನು ಹೊರತು ಪಡಿಸಿ ವೇದಿಕೆಯನ್ನೂ ಹಂಚಿಕೊಳ್ಳದ ಇಬ್ಬರ ಭೇಟಿ ಭಾವುಕವಾಗಿತ್ತು. ಪೂಜಾರಿ ಅವರನ್ನು ಭೇಟಿ ಮಾಡಲು ಬೆಂಗಳೂರಿನಿಂದ ಬರುತ್ತಿರುವುದಾಗಿ ವೀರಪ್ಪ ಮೊಯ್ಲಿ ಅವರು ಬೆಳಗ್ಗೆಯೇ ಕರೆ ಮಾಡಿ ಪೂಜಾರಿ ಮನೆಯವರಿಗೆ ತಿಳಿಸಿದ್ದರು. ಅದರಂತೆ ಬೆಳಗ್ಗೆ 10 ಗಂಟೆಯಿಂದಲೇ ಪೂಜಾರಿ ಮನೆಯವರು ಮೊಯ್ಲಿ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ಮೊಯ್ಲಿ ಅವರಿಗೆ ಮಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಹ್ವಾನ ಬಂದಿದ್ದರಿಂದ ಮಧ್ಯಾಹ್ನ ಈ ಭೇಟಿ ಸಾಕಾರವಾಯಿತು.

Advertisement

ಇಬ್ಬರು ನಾಯಕರು ಪರಸ್ಪರ ಆರೋಗ್ಯ ವಿಚಾರಿಸಿ, ವೈಯಕ್ತಿಕ ಮಾತುಕತೆ ನಡೆಸಿದರು. ಆರಂಭ ಕಾಲದಲ್ಲಿ ಅಣ್ಣ- ತಮ್ಮಂದಿರಂತೆ ಇದ್ದೆವು, ನಡುವೆ ಏನೋ ಕೆಟ್ಟ ಗಳಿಗೆ ಬಂದಿತ್ತು. ಇನ್ನು ಮುಂದೆ ಹೀಗೇ ಅಣ್ಣ- ತಮ್ಮಂದಿರಂತೆ ಇರೋಣ ಎಂದು ಹೇಳಿಕೊಂಡರು. ಹಿಂದೆ ಪೂಜಾರಿ ಕೇಂದ್ರ ಸಚಿವರಾಗಬೇಕೆಂದು ಮೊಯ್ಲಿ ಅವರ ಪತ್ನಿ ಹರಕೆ ಹೊತ್ತುಕೊಂಡದ್ದನ್ನು ಮೊಯ್ಲಿ ನೆನಪಿಸಿಕೊಂಡರು. ತಮ್ಮ ಬೆಂಗಳೂರಿನ ಮನೆಗೆ ಪೂಜಾರಿ ಅವರನ್ನು ಆಹ್ವಾನಿಸಿದರು. ಈ ಬಾಂಧವ್ಯ ಮುಂದುವರಿಸುವ ಆಶಯದೊಂದಿಗೆ ಉಭಯ ನಾಯಕರು ಸ್ನೇಹಪೂರ್ವಕವಾಗಿ ಬೀಳ್ಕೊಟ್ಟರು.

ವೀರಪ್ಪ ಮೊಯ್ಲಿ ಅವರು 1972ರಲ್ಲಿ ಕಾರ್ಕಳ ಶಾಸಕರಾಗುವ ಮೂಲಕ ರಾಜಕೀಯ ಅಧಿಕಾರಕ್ಕೆ ಬಂದವರು. ಜನಾರ್ದನ ಪೂಜಾರಿ 1977ರಲ್ಲಿ ಮೊದಲ ಬಾರಿ ಸಂಸದರಾದವರು. ವೀರಪ್ಪ ಮೊಯ್ಲಿ 6 ಬಾರಿ ಶಾಸಕ, 2 ಬಾರಿ ಎಂಪಿ, ಮುಖ್ಯಮಂತ್ರಿಯಾಗಿ, ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಜನಾರ್ದನ ಪೂಜಾರಿ ಅವರು 4 ಬಾರಿ ಎಂಪಿ, 2 ಬಾರಿ ರಾಜ್ಯಸಭಾ ಸದಸ್ಯ 2 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅಧಿಕಾರಕ್ಕೆ ಬರುವ ಮೊದಲೇ ಇವರಿಬ್ಬರ ಸ್ನೇಹ ರಾಜಕೀಯದಲ್ಲಿ ಮನೆ ಮಾತಾಗಿತ್ತು. ಆದರೆ ಒಂದು ಹಂತದಲ್ಲಿ ದಿಢೀರನೆ ಇಬ್ಬರ ನಡುವೆ ಗಾಢ ವೈರತ್ವ ಬೆಳೆದಿತ್ತು. 1985ರಿಂದಲೂ ಈ ವೈರತ್ವ ಇತ್ತು, ಕಾಲಕ್ರಮೇಣ ಬದ್ಧ ವೈರಿಗಳಾಗಿ ಬದಲಾಗಿದ್ದರು ಎನ್ನುವ ಮಾತಿದೆ.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ಕೆ, ಡಿ.ಕೆ. ಅಶೋಕ್, ಬೇಬಿ ಕುಂದರ್, ಬಾಲಕೃಷ್ಣ ಅಂಚನ್, ನವೀನ್ ಭಂಡಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ