ಮುಂಡಾಜೆ, ಜೂ. 09 : ಚಾರ್ಮಾಡಿ-ಪುಂಜಾಲಕಟ್ಟೆ ಹೆದ್ದಾರಿಯ ಮುಂಡಾಜೆ ಸೀಟುಕಾಡು ಸಮೀಪ ರಸ್ತೆ ಬದಿಯಲ್ಲಿದ್ದ ಮರಗಳು ಏಕಾಏಕಿ ಧರಾಶಾಹಿಯಾಗಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಘಟನೆ ನಡೆದ ತಕ್ಷಣ ಸಮಾಜಸೇವಕರಾದ ಸಚಿನ್ ಭಿಡೆ ಹಾಗೂ ಗಣೇಶ್ ಬಂಗೇರ ಅವರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಬಳಸಿ ಮರಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.
ಅಪಘಾತ ಸಂಭವಿಸಿ ಜೀವಹಾನಿಯಾದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿಯಾಗಲಿದೆ ಎಂಬುದು ಸಾರ್ವಜನಿಕ ಆಕ್ರೋಶ. ಹೀಗಾಗಿ ಅಪಾಯದ ಮುಂಚೆಯೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


