ಬೆಂಗಳೂರು, ಮೇ 19 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮೇ 20 ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಇಂದು ವಿಚಾರಣೆ ನಡೆಸಿದ ಹೈಕೋಟ್೯, ನಾಳೆ ಸಾರಿಗೆ ಮುಷ್ಕರ ಬಂದ್ ಮಾಡದಂತೆ ಸೂಚನೆ ನೀಡಿದೆ.
ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ಹೈಕೋಟ್೯ ನಿಬ೯ಂಧ ವಿಧಿಸಿದೆ. ಸಾರಿಗೆ ಸಂಘಟನೆಗಳ ಜೊತೆ ಮಾತುಕತೆ ನಡೆಸುವಂತೆ ಸಕಾ೯ರಕ್ಕೆ ಸೂಚನೆ ನೀಡಿದೆ. ನಾಳೆ ಸಾರಿಗೆ ಬಸ್ ಸಂಚಾರ ಎಂದಿನಂತೆ ಇರಲಿದೆ. ನ್ಯಾ. ಸೂರಜ್ ಗೋವಿಂದರಾಜು, ನ್ಯಾ. ಮನ್ಮದರಾವ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಅಂದ್ರೆ ಮೇ 21 ಕ್ಕೆ ಮುಂದೂಡಿದೆ.
ಇಂದು ಅಜಿ೯ ವಿಚಾರಣೆ
ಮನೆಕೆಲಸ ಮಾಡುತ್ತಿರುವ ಬೆಂಗಳೂರಿನ ಸಿ. ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ.ಶ್ರೀಧರ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ ಕೂಡಲೇ ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು. ಅಲ್ಲದೆ, ‘‘2023 ಮತ್ತು 2025 ರಲ್ಲಿ ಹೈಕೋರ್ಟ್ ಮಧ್ಯಪ್ರವೇಶದಿಂದ ಮುಷ್ಕರ ಹಿಂಪಡೆಯಲಾಗಿತ್ತು. 2025 ರಲ್ಲಿ ಹೈಕೋರ್ಟ್ ಆದೇಶದ ಹೊರತಾಗಿಯೂ ಸಾರ್ವಜನಿಕ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, 17,200 ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಬೇಕಿದೆ. 2025 ರ ಏ.1 ರಂದು ಸರಕಾರವು ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ.12.5 ರಷ್ಟು ಪರಿಷ್ಕರಿಸಿದ್ದು, 1,271.92 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಮೊದಲ ವಂತಿಗೆ ರೂಪದಲ್ಲಿ450 ಕೋಟಿ ರೂ. ಬಿಡುಗಡೆ ಮಾಡಿದೆ. ಸಂಧಾನ ಸಂಬಂಧಿತ ವಿಚಾರಣೆಯು ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ,’’ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಮುಷ್ಕರ ನಡೆಸದಂತೆ ನಿರ್ದೇಶಿಸಬೇಕು. ರಾಜ್ಯ ಸರಕಾರ ಮತ್ತು ನಿಗಮ ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
‘‘ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿ ದಿನ 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಈ ಪೈಕಿ ಶೇ. 60ರಷ್ಟು ಮಹಿಳೆಯರಾಗಿದ್ದಾರೆ. ರಾಜ್ಯ ಸರಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಮೇ 20 ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ. ದಿನಗೂಲಿ ನೌಕರರು, ರೋಗಿಗಳು, ವಯಸ್ಸಾದವರು ಕೂಡ ಸಾರ್ವಜನಿಕ ಬಸ್ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ,’’ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

