ಹಾಸನ, ಜೂ. 15 : ಧರ್ಮಸ್ಥಳದ ತೀರ್ಥಯಾತ್ರೆ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುವಾಗ ಮಾರ್ಗಮಧ್ಯೆ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಈಜಾಡಲು ಹೋಗಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಹಾಸನ ತಾಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪ ಭಾನುವಾರ ಸಂಜೆ ದುರ್ಘಟನ ಸಂಭವಿಸಿದೆ. ಬೆಂಗಳೂರಿನ ಗಿರಿನಗರದ ಚರಣ (20), ಮಿಲನ್ (23) ಹಾಗೂ ಬ್ಯಾಟರಾಯನಪುರದ ಮಣಿಕಂಠ (20) ಮೃತ ದುರ್ವೈವಿಗಳು.
ಬೆಂಗಳೂರಿನ ವಿವಿಧ ಬಡಾವಣೆಗಳ 10 ಮಂದಿ ಸ್ನೇಹಿತರು ಟೆಂಪೋ ಟ್ರಾವೆರ್ಸ್ ನಲ್ಲಿ ಶನಿವಾರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥಸ್ವಾಮಿಯ ದರ್ಶನ ಪಡೆದು ಭಾನುವಾರ ವಾಪಸ್ ಬರುವಾಗ ಮಾರ್ಗಮಧ್ಯೆ ಹಾಸನದಿಂದ 14 ಕಿ.ಮೀ. ದೂರದ ಶೆಟ್ಟಿಹಳ್ಳಿ ಬಳಿ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿರುವ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಮಧ್ಯಾಹ್ನ 3 ಗಂಟೆಗೆ ತೆರಳಿದ್ದಾರೆ. ಚರ್ಚ್ ಸುತ್ತಲೂ ಆವರಿಸಿರುವ ಹಿನ್ನೀರಿನಲ್ಲಿ ಈಜಾಡಲು ನೀರಿಗಿಳಿದಿದ್ದಾರೆ. ನೀರಿನ ಆಳ ತಿಳಿಯದೆ, ಈಜಾಡುತ್ತಾ ಹೋದ ಮೂವರು ಯುವಕರು ಮುಳುಗಿದ್ದಾರೆ. ಅವರನ್ನು ಸ್ನೇಹಿತರು ರಕ್ಷಿಸಲು ಹರಸಾಹಸಪಟ್ಟರೂ ಸಾಧ್ಯವಾಗದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೂವರೂ ನೀರಿನಲ್ಲಿ ಕಣ್ಮರೆಯಾಗಿದ್ದರು.
ಮಾಹಿತಿ ಪಡೆದ ಗೊರೂರು ಠಾಣೆ ಪೊಲೀಸರು ಅಗ್ನಿ ಶಾಮಕ ದಳದೊಂದಿಗೆ ತೆರಳಿ ಸಂಜೆ 6 ಗಂಟೆ ವೇಳೆಗೆ ಮೂವರ ಮೃತದೇಹಗಳನ್ನೂ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.
ನೀರಿಗೆ ಇಳಿದಿದ್ದ ಮೃತ ಮೂವರು ಯುವಕರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನ ಆಳ, ಸುಳಿಯ ಅರಿವಿಲ್ಲದೆ ಅವರು ನದಿಯ ಆಳಕ್ಕೆ ಇಳಿದು ಮೃತಪಟ್ಟಿದ್ದಾರೆ. ಅಪರಿಚಿತ ಸ್ಥಳಗಳಲ್ಲಿ ಮಾಹಿತಿಯ ಕೊರತೆಯಿದ್ದಾಗ ನೀರಿಗೆ ಇಳಿಯುವುದು ಅಪಾಯಕಾರಿ.


