ಹೊಸದಿಲ್ಲಿ, ಆ. 08 : ನೀಟ್-ಯುಜಿ 2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಜುಲೈ 28ರಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಪಟ್ಟಿಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗಿವೆ.
ಪರೀಕ್ಷೆಗೆ ಮೂರು ದಿನಗಳಿಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಅವುಗಳನ್ನು ವಾಟ್ಸ್‌ಆ್ಯಪ್, ಟೆಲಿಗ್ರಾಂ ಹಾಗೂ ಆಫ್‌ಲೈನ್ ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಅದರಲ್ಲೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ವಿಷಯ ತಜ್ಞರು, ಕೋಚಿಂಗ್ ಸೆಂಟರ್‌ಗಳ ನಿವಾರ್ಹಕರು ಹಾಗೂ ಮಧ್ಯವರ್ತಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಎನ್‌ಟಿಎ ಮೂವರು ವಿಷಯ ತಜ್ಞರಾದ ರಸಾಯನಶಾಸ್ತ್ರದ ಪಿ.ವಿ. ಕುಲಕರ್ಣಿ, ಭೌತಶಾಸ್ತ್ರದ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ತಜ್ಞೆ ಮನೀಷಾ ಗುರುನಾಥ್ ಮಂಧಾರೆ ಅವರೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಸಿಬಿಐ ದೋಷಾರೋಪ ಹೊರಿಸಿದೆ.
94 ಪುಟದ ಚಾರ್ಜ್‌ಶೀಟ್ ನಲ್ಲಿ ಒಟ್ಟು 13 ಆರೋಪಿಗಳ ವಿರುದ್ಧ ಗುರುತರ ಆರೋಪಗಳನ್ನು ಹೊರಿಸಲಾಗಿದೆ. ”ಈ ಮೂವರು ತಜ್ಞರಿಗೆ ಅನುವಾದ ಮತ್ತು ಮರು ಅನುವಾದದ ಸಂದರ್ಭದಲ್ಲಿ ಕರಡು ಕೆಲಸಕ್ಕಾಗಿ ಗೌಪ್ಯ ವಿಭಾಗದೊಳಗೆ ಖಾಲಿ ಹಾಳೆಗಳನ್ನು ನೀಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಪಿ.ವಿ. ಕುಲಕರ್ಣಿ ಈ ಹಾಳೆಗಳನ್ನು ಬಳಸಿ ರಸಾಯನಶಾಸ್ತ್ರದ ಎಲ್ಲಾ135 ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಹಾಗೂ ಅವುಗಳ ಉತ್ತರದ ಆಯ್ಕೆಗಳೊಂದಿಗೆ ಸಣ್ಣ ಚೀಟಿಗಳಲ್ಲಿ ಬರೆದುಕೊಂಡು, ಅವುಗಳನ್ನು ಯಾರಿಗೂ ತಿಳಿಯದಂತೆ ಹೊರಗೆ ತೆಗೆದುಕೊಂಡು ಹೋಗಿದ್ದರು,” ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪ್ರಶ್ನೆ ಪತ್ರಿಕೆಯನ್ನು 25 ಸಾವಿರಕ್ಕೆ ಮಾರಾಟ
ಬ್ಯೂಟಿಷಿಯನ್ ಆಗಿದ್ದ ಮನೀಷಾ ಸಂಜಯ್ ವಾಘಮರೆ ಎಂಬಾಕೆಯು ವಿದ್ಯಾರ್ಥಿಗಳು ಹಾಗೂ ವಿಷಯ ತಜ್ಞರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದಳು. ‘ಎಪಿ ಬ್ರೋಕರ್’ ಎಂಬ ಕೋಡ್‌ನೇಮ್‌ನೊಂದಿಗೆ ಕೆಲಸ ಮಾಡುತ್ತಿದ್ದ ಖೈರ್‌ನಾಥ್ ಎಂಬಾತ ಧನಂಜಯ್ ಲೋಖಾಂಡೆ ಎಂಬುವರಿಗೆ 25 ಸಾವಿರ ರೂ.ಗೆ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ.
”ಸಸ್ಯಶಾಸ್ತ್ರದ ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಮರಾಠಿಗೆ ಅನುವಾದಿಸುತ್ತಿದ್ದ ಹಾಗೂ ಪ್ರಾಣಿಶಾಸ್ತ್ರದ ಮರು ಅನುವಾದಕಿಯಾಗಿದ್ದ ಮನೀಷಾ ಮಂಧಾರೆ, ದಿನದ ಕೆಲಸ ಮುಗಿಸಿ ಹೋಟೆಲ್ ಕೊಠಡಿಗೆ ಮರಳಿದ ಬಳಿಕ ಪಠ್ಯಪುಸ್ತಕಗಳಲ್ಲಿನ ಸಂಬಂಧಿತ ಪ್ಯಾರಾಗಳನ್ನು ಗುರುತಿಸುತ್ತಿದ್ದರು,” ಎಂದು ಆರೋಪಿಸಲಾಗಿದೆ. ಬ್ಯೂಟಿಷಿಯನ್ ಆಗಿದ್ದ ಮನೀಷಾ ಸಂಜಯ್ ವಾಘಮರೆ ಮಧ್ಯವರ್ತಿಗಳ ಮೂಲಕ ರಾಜಸ್ಥಾನ ಮತ್ತು ಹರಿಯಾಣದಲ್ಲಿ ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಹಂಚಿದ್ದಳು ಎಂದು ಆಪಾದಿಸಲಾಗಿದೆ.
ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳ ಫೊರೆನ್ಸಿಕ್ ತಪಾಸಣೆಯಿಂದ ಸೋರಿಕೆಯಾದ ನೀಟ್ ಪ್ರಶ್ನೆಗಳ ಪಿಡಿಎಫ್ ಮತ್ತು ಇಮೇಜ್ ಫೈಲ್‌ಗಳು ಪತ್ತೆಯಾಗಿವೆ. ಈ ಫೈಲ್‌ಗಳನ್ನು ಪರೀಕ್ಷೆಗೂ ಕೆಲವು ದಿನಗಳ ಮೊದಲು ಟೆಲಿಗ್ರಾಮ್, ವಾಟ್ಸ್‌ಆ್ಯಪ್ ಮತ್ತು ಇತರ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಪಿ.ವಿ. ಕುಲಕರ್ಣಿ ನಡೆಸುತ್ತಿದ್ದ ವಿಶೇಷ ತರಬೇತಿ ತರಗತಿಗಳಿಗೆ ಬಂದಿದ್ದ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಸೇರಿದಂತೆ ಕುಲಕರ್ಣಿ ಅವರು ವಾಸಿಸುತ್ತಿದ್ದ ಪುಣೆ ಅಪಾರ್ಟ್‌ಮೆಂಟ್ ಸಮುಚ್ಚಯದ ಆ್ಯಪ್‌ನಿಂದ ಸಂಗ್ರಹಿಸಲಾದ ದಾಖಲೆಗಳನ್ನು ತನಿಖಾ ಸಂಸ್ಥೆ ಉಲ್ಲೇಖಿಸಿದೆ.
ಪ್ರಶ್ನೆಗಳನ್ನು ಕಂಠಪಾಠ ಮಾಡಿದ್ದ ವಿಷಯ ತಜ್ಞರು!
ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನಿಯೋಜಿಸಲಾಗಿದ್ದ ಎನ್‌ಟಿಎ ವಿಷಯ ತಜ್ಞರು, ಯಾವುದೇ ಡಿಜಿಟಲ್ ಸಾಕ್ಷ್ಯಗಳು ಸಿಗದಂತೆ ತಪ್ಪಿಸಲು ಮತ್ತು ಗೌಪ್ಯತಾ ವಲಯದಿಂದ ಹೊರಹೋಗುವಾಗ ತಪಾಸಣೆ ವೇಳೆ ಸಿಕ್ಕಿಬೀಳದಂತೆ ತಡೆಯಲು ಕಂಠಪಾಠದ ಉಪಾಯ ಹೂಡಿದ್ದರು. ಕೆಲವೊಂದು ಸರಣ ಪ್ರಶ್ನೆಗಳನ್ನು ಕಂಠಪಾಠ ಮಾಡಿಕೊಂಡು, ದಿನದ ಕೊನೆಗೆ ಹೋಟೆಲ್‌ಗೆ ಮರಳಿದ ಬಳಿಕ ಅವುಗಳನ್ನು ಪೇಪರ್ ಮೇಲೆ ಬರೆದು, ಆರೋಪಿಗಳ ಜಾಲದಲ್ಲಿವಿತರಣೆಗಾಗಿ ಕಳುಹಿಸಿದ್ದರು ಎಂಬ ಮಾಹಿತಿ ತನಿಖೆಯ ವೇಳೆ ಬಯಲಾಗಿದೆ.




