ಲಾಯಿಲ, ಸೆ. 09 : ಗ್ರಾಮದ ಪ್ರಗತಿ ನಗರ ಎಂಬಲ್ಲಿನ ಕರಿಯ ಮೊಗೇರ ಎಂಬವರ ಮನೆಯಲ್ಲಿ ಮನೆಯ ಯಜಮಾನ ಸೇರಿದಂತೆ ನಾಲ್ವರು ಬೇರೆ ಬೇರೆ ಖಾಯಿಲೆ ಮತ್ತು ಸಮಸ್ಯೆಯಿಂದ ಬಳಲುತ್ತಿದ್ದು ಇಡೀ ಮನೆಯೇ ಸದ್ದಿಲ್ಲದೆ ಮಲಗಿಬಿಟ್ಟಂತೆ ಭಾಸವಾಗುತ್ತಿದೆ. ಚಿಕಿತ್ಸೆಗೆ ಮಾತ್ರವಲ್ಲ, ಒಪ್ಪೊತ್ತಿನ ಊಟಕ್ಕೆ ಸಂಕಷ್ಟ ಎದುರಿಸಬೇಕಾದ ಸ್ಥಿತಿ ಇರುವ ಈ ಮನೆಯ ಕಡೆಗೆ ಹೃದಯವಂತರ ಸಾಂತ್ವಾನದ ಆಸರೆ ಬೇಕಿದೆ.

ಕೂಲಿ ಮಾಡಿಕೊಂಡಿದ್ದ 70 ರ ಹರೆಯದ ಕರಿಯ ಮೊಗೇರ ಕೂಲಿಗೆ ಹೋದಲ್ಲಿ ಮೇಲ್ಚಾವಣಿಯಿಂದ ಬಿದ್ದಿದ್ದು ಕೆಲಸಕ್ಕೆ ಹೋಗದಂತಾಗಿ ವರ್ಷಗಳೇ ಕಳೆದಿದೆ. ಅಂದು ತಲೆಗೆ ಬಿದ್ದ ಪೆಟ್ಟಿನ ಪರಿಣಾಮ ಈಗಲೂ ಒಮ್ಮೊಮ್ಮೆ ಮತಿ ಭ್ರಮಣೆಯೂ ಆಗುತ್ತಿದೆ. ಕರಿಯ ಅವರ ಪತ್ನಿ ಗಿರಿಜಾ(60) ಗರ್ಭಕೋಶದ ಕ್ಯಾನ್ಸರ್ ಗೆ ತುತ್ತಾಗಿ ಸ್ವತಂತ್ರವಾಗಿ ಚಾಪೆಯಿಂದ ಮೇಲೇಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಹೊಟ್ಟೆಯಲ್ಲಿ ಸಣ್ಣ ಗಡ್ಡೆ ಇದೆ ಎಂದು ಶಸ್ತ್ರಚಿಕಿತ್ಸೆ ಪಡೆದ ಬಳಿಕ ಕೆಲಸಮದಯದ ನಂತರ ಅದು ಮಹಾಮಾರಿ ಎಂದು ಗೊತ್ತಾಗಿದೆ. ಲಕ್ಷಾಂತರ ರೂ. ಅದಕ್ಕೆ ಖರ್ಚು ಮಾಡಿದ್ದಾರೆ. ಈಗ ಹೊಟ್ಟೆಗೂ ತಿನ್ನಲಾಗದ ಅಸಹನೀಯ ಸ್ಥಿತಿ ಎದುರಿಸುತ್ತಿದ್ದಾರೆ.
ದಂಪತಿಯ ಮಗ ಹರೀಶ. ಮೊಗೇರ(40) ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮನೆ ತುಂಬಾ ಓಡಾಡುತ್ತಲೇ ಇರುತ್ತಾರೆ.ಅನೇಕಬಾರಿ ಮನೆಯಿಂದ ಹೊರಕ್ಕೆ ರಸ್ತೆ ಬದಿಗೂ ಬರುವುದಿದೆಯಂತೆ. ಅದೂ ಕೂಡ
ಒಮ್ಮೊಮ್ಮೆ ವಸ್ತ್ರಗಳನ್ನೂ ಕಳಚಿ. 7ನೇ ತರಗತಿವರೆಗೆ ಶಾಲೆಗೆ ಹೋಗಿರುವ ಹರೀಶ ಮೊಗೇರ ಅವರು ಇದೀಗ ಯಾವುದೂ ನೆನಪಿಲ್ಲದೆ, ಮನೆಯ ಸಂಕಷ್ಟದ ಪರಿವೆಯೂ ಇಲ್ಲದೆ ತನ್ನದೇ ಅಂಗಳದಲ್ಲಿ ಸುತ್ತುತ್ತಿದ್ದಾರೆ.
ಇನ್ನೋರ್ವ ಪುತ್ರ ಜಯಪ್ಪ ಆರೋಗ್ಯದಿಂದಿದ್ದು ಕೂಲಿ ಮಾಡುತ್ತಿದ್ದವರು ಕಳೆದ 2 ವರ್ಷಗಳಿಂದ ಎರಡೂ ಕಾಲಿನ ನರದ ಸಮಸ್ಯೆಗೆ ತುತ್ತಾಗಿ ತೀವ್ರ ನೋವಿನಿಂದ ಕೂಲಿ ಮಾಡಲೂ ಆಗದೆ ಮನೆಯಲ್ಲೇ ಉಳಿದಿದ್ದಾರೆ. ಅನೇಕ ಆಸ್ಪತ್ರೆಗಳಿಂದ ಔಷಧಿ ಪಡೆದಿದ್ದರೂ ಪರಿಣಾಮ ಶೂನ್ಯವಾಗಿದೆ. ಒಳ್ಳೆಯ ಚಿಕಿತ್ಸೆ ಪಡೆಯಬೇಕಾದರೆ ಮಾರ್ಗದರ್ಶಕರೂ ಇಲ್ಲ. ಹಣವೂ ಇಲ್ಲ. ಕರೆದುಕೊಂಡು ಹೋಗುವವರೂ ಇಲ್ಲ. ಗೊತ್ತೂ ಇಲ್ಲ ಎಂಬಂತಾಗಿದೆ. ಜಯಪ್ಪ ಅವರಿಗೆ ವಿವಾಹವಾಗಿ ಒಂದು ಮಗು ಇದೆ. ಇತ್ತೀಚಿಗಿನಿಂದ ಪತ್ನಿ ತವರು ಮನೆಯಲ್ಲಿದ್ದು ಮಧ್ಯೆ ಮಧ್ಯೆ ಬಂದು ಹೋಗುತ್ತಿದ್ದಾರೆ. ಇಲ್ಲಿನ ಸಂಕಷ್ಟಗಳೇ ಆಕೆಗೆ ನಿತ್ಯದರ್ಶನವಾಗಿದೆ.
ಮತ್ತೋರ್ವ ಮಗ ಕೃಷ್ಣಪ್ಪ ಕಿಡ್ನಿ ತೊಂದರೆಯಿಂದ, ಅವರ ಪತ್ನಿ ಕ್ಷಯ ರೋಗದಿಂದ ಈ ಹಿಂದೆಯೇ ಅಕಾಲಿಕವಾಗಿ ಮರಣಹೊಂದಿದ್ದಾರೆ. ಅವರ ಮೂರು ಮಂದಿ ಮಕ್ಕಳ ಪೈಕಿ ಇಬ್ಬರು ಗಂಡು ಮಕ್ಕಳು ಅವರ ತಾಯಿ ಮನೆಯಲ್ಲಿದ್ದು ಓರ್ವೆ ಪುತ್ರಿ ಮಾತ್ರ ಅಜ್ಜ ಅಜ್ಜಿಯ ಜೊತೆಗೆ ಪ್ರಗತಿ ನಗರದಲ್ಲಿದ್ದಾರೆ. ಸಣ್ಣ ವೇತನಕ್ಕೆ ಟೈಲಿರಿಂಗ್ ಮಾಡುವ ಆಕೆ ಈಮನೆಗೆ ಸಧ್ಯದ ಆಧಾರ ಸ್ಥಂಬವಾಗಿದ್ದಾರೆ. ಅಪ್ರಾಪ್ತ ವಯಸ್ಸು ದಾಟಿದ ಆಕೆ ತಂದೆ ತಾಯಿಯನ್ನೂ ಕಳೆದುಕೊಂಡವರರಾಗಿದ್ದರೂ ಅಜ್ಜನ ಮನೆಯ ಈ ಎಲ್ಲಾ ದಯನೀಯ ಸ್ಥಿತಿಗೆ ಅನಿವಾರ್ಯವಾಗಿ ಮಹಾತಾಯಿಯಂತೆ ಕೈ ಹಿಡಿದು ನಿಂತಿದ್ದಾರೆ.
ಮನೆಯ ಅಡಿ ಸೇರಿ 5 ಸೆಂಟ್ಸ್ ಜಾಗದ ದಾಖಲೆ ಇದೆ. ಮೇಲ್ಚಾವಣಿ ಬಿದ್ದ ಮನೆಯನ್ನು ಪಂಚಾಯತ್ ನೆರವಿನೊಂದಿಗೆ ಅಲ್ಪ ದುರಸ್ತಿ ಮಾಡಲಾಗಿದ್ದರಿಂದ ಮನೆ ಬೀಳದೆ ಉಳಿದಿದೆ. ಮನೆಯ ಹೊರಗೆ ಶೌಚಾಲಯ ಇದ್ದು ಅದರ ಸುಸ್ಥಿತಿಯ ಬಗ್ಗೆ ಮರುಕ ಬರುವಂತಿದೆ. ಚಾಪೆಯಿಂದ ಮೇಲೇಳಗಾದ ಅನಾರೋಗ್ಯ ಪೀಡಿತ ತಾಯಿಯನ್ನೂ ಕಷ್ಟಪಟ್ಟು ಕೈ ಹಿಡಿದು ದೇಹಬಾಧೆ ತೀರಿಸಲು ಅಲ್ಲಿವರೆಗೂ ಕರೆದುಕೊಂಡು ಹೋಗಬೇಕಾಗಿದೆ. ಒಟ್ಟಾರೆ ಈ ಮನೆಯ ಸ್ಥಿತಿ ದೇವರಿಗೇ ಪ್ರೀತಿ. ಸಹೃದಯರು ಈ ಕುಟುಂಬವನ್ನು ಕೈ ಹಿಡಿದು ಮೇಲೆತ್ತಬೇಕಾದ ಸ್ಥಿತಿ ಖಂಡಿತಾ ಇದೆ. ಕುಟುಂಬದ ಸ್ಥಿತಿಯ ಬಗ್ಗೆ ಜಿ.ಪಂ ಮಾಜಿ ಸದಸ್ಯೆ ಸಿ.ಕೆ ಚಂದ್ರಕಲಾ ಅವರು ಮಾಧ್ಯಮದ ಗಮನಕ್ಕೆ ತಂದು ಅವರ ಕಷ್ಟಕ್ಕೆ ಯಾರಾದ್ದಾದರೂ ನೆರವಾಗುವಂತೆ ಮಾಡಲು ಭಿನ್ನಬಿಸಿಕೊಂಡಿದ್ದಾರೆ. ಪೌಷ್ಟಿಕಾಹಾರ ಬಿಡಿ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ಇರುವ ಕರಿಯ ಮುಗೇರ ಅವರ ಕುಟುಂಬಕ್ಕೆ ದಾನಿಗಳು ನೆರವಾಗುವಂತೆ ಕೋರಿಕೆ.
ಸಹಾಯ ಮಾಡುವವರು, ಸಂಘ ಸಂಸ್ಥೆಗಳವರು ಪ್ರಗತಿನಗರದ ಅವರ ಮನೆಗೇ ನೇರ ಹೋಗಬಹುದು. ಮಾಹಿತಿಗಾಗಿ 9663952368 (ಸಿ.ಕೆ ಚಂದ್ರಕಲಾ) ಅವರನ್ನು ಸಂಪರ್ಕಿಸಬಹುದು.
ಬ್ಯಾಂಕ್ ಖಾತೆಗೆ ನೀಡುವುದಾದರೆ
71730100008924
IFSC CODE BARB0VJUJIR
ಬ್ಯಾಂಕ್ ಆಫ್ ಬರೋಡ ಉಜಿರೆ ಬ್ರಾಂಚ್
(ಪ್ರಣೀತ ಮೊಮ್ಮಗಳು) ಅವರಿಗೆ ಸಂದಾಯ ಮಾಡಬಹುದು.