ಹೊಸದಿಲ್ಲಿ, ಮಾ. 27 : ಇರಾನ್ ಅಮೆರಿಕ ಸೇರಿದಂತೆ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ತೈಲ ಬೆಲೆಗಳಲ್ಲಿ ಭಾರಿ ಏರಿಳಿತ ಉಂಟಾಗಿದೆ. ಭಾರತಕ್ಕೆ ಬರುವ ಆಮದಿನ ಮೇಲೂ ಭಾರಿ ಪರಿಣಾಮ ಬಿದ್ದಿದೆ. ಈ ಮಧ್ಯೆ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್, ಡೀಸೆಲ್ ನ ಪ್ರತೀ ಲೀಟರ್ ಗೆ 10 ರೂಪಾಯಿ ಕಡಿತಗೊಳಿಸಿದ್ದು, ಇದರಿಂದ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ ಹಾಕುವ ತೆರಿಗೆ 3 ರೂಪಾಯಿಗೆ ಇಳಿದಿದ್ದು, ಡೀಸೆಲ್ ಗೆ ಕೇಂದ್ರದ ತೆರಿಗೆ ಈಗ ಶೂನ್ಯವಾಗಿದೆ.
ಗ್ರಾಹಕರಿಗೆ ಸಿಗುತ್ತಾ ಲಾಭ?
ಆದರೆ ಕೇಂದ್ರದ ತೆರಿಗೆ ಇಳಿಕೆಯ ಲಾಭ ಜನಸಾಮಾನ್ಯರಿಗೆ ಸಿಗುವುದು ಅನುಮಾನ ಎಂದು ಅಂದಾಜಿಸಲಾಗಿದೆ. ಈಗಾಗಲೇ ದೇಶದ ತೈಲ ಮಾರಾಟ ಕಂಪನಿಗಳು ನಷ್ಟ ಎದುರಿಸುತ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಏರಿಕೆಯಿಂದಾಗಿ, ಆ ಹೆಚ್ಚಳದ ನಷ್ಟವನ್ನು ಕಂಪನಿಗಳೇ ಭರಿಸಿಕೊಂಡು ಹೋಗುತ್ತಿವೆ.
ಈ ನಷ್ಟ ಎಷ್ಟಿದೆಯೆಂದರೆ ತೈಲ ಕಂಪನಿಗಳು ಮಾರಾಟ ಮಾಡುವ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 48.8 ರೂನಷ್ಟು ನಷ್ಟ ಅನುಭವಿಸುತ್ತಿವೆ. ಹೀಗಾಗಿ ಸರ್ಕಾರ ನೀಡಿದ ಈ ಸುಂಕ ಕಡಿತವನ್ನು ಕಂಪನಿಗಳು ತಮ್ಮ ನಷ್ಟ ಸರಿದೂಗಿಸಲು ಬಳಸಿಕೊಳ್ಳಲಿವೆಯೇ ಹೊರತು ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭ ಕೊಡುವುದು ಅನುಮಾನ ಎನ್ನಲಾಗಿದೆ.
ಜನಸಾಮಾನ್ಯರಿಗೆ ಹೊರೆಯಾಗದಿರಲು ತಡರಾತ್ರಿ ಮೋದಿ ತುರ್ತು ಸಭೆ
ಇಂಧನಗಳ ಬೆಲೆ ಏರಿಕೆ ಜನರಿಗೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಬೆಲೆ ನಿಯಂತ್ರಣದ ಬಗ್ಗೆ ತಡರಾತ್ರಿ ತುರ್ತು ಸಭೆ ಕರೆದ ಪ್ರಧಾನಿ ಮೋದಿ, ತೆರಿಗೆ ಕಡಿತಕ್ಕೆ ನಿರ್ಧರಿಸಿದ್ದಾರೆ. ಪ್ರಧಾನಿ ಸೂಚನೆ ಮೇರೆಗೆ ಹಣಕಾಸು ಇಲಾಖೆ ಈ ಕ್ರಮ ಕೈಗೊಂಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಇಂಧನ ಕೊರತೆಯಿದೆ ಅಥವಾ ಲಾಕ್ ಡೌನ್ ಹೇರಲಾಗುವುದು ಎಂಬ ವದಂತಿ ತಳ್ಳಿಹಾಕಿದರು. ಇನ್ನು ತೈಲ ಲಭ್ಯತೆಗೆ ಆದ್ಯತೆ ಕೊಡಲು, ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಸುಂಕ ಹೆಚ್ಚಿಸಲಾಗಿದೆ.
ಕೇಂದ್ರ ಸಚಿವರು ಹೇಳೋದೇನು?
ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಕಳೆದ ಒಂದು ತಿಂಗಳಲ್ಲಿ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ನಿಂದ ಸುಮಾರು 122 ಡಾಲರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಪ್ರಪಂಚದಾದ್ಯಂತ ಇಂಧನ ಬೆಲೆಗಳು ಶೇ. 20 ರಿಂದ ಶೇ. 50 ರಷ್ಟು ಹೆಚ್ಚಾಗಿವೆ,” ಎಂದಿದ್ದಾರೆ.
“ಮೋದಿ ಸರ್ಕಾರದ ಮುಂದೆ ಎರಡು ದಾರಿಗಳಿದ್ದವು – ಇತರ ದೇಶಗಳಂತೆ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸುವುದು ಅಥವಾ ತನ್ನ ಬೊಕ್ಕಸಕ್ಕೆ ಹೊರೆಯಾದರೂ ಭಾರತೀಯ ಪ್ರಜೆಗಳನ್ನು ಈ ಏರಿಳಿತದಿಂದ ರಕ್ಷಿಸುವುದು. ಸರ್ಕಾರವು ಎರಡನೇ ದಾರಿಯನ್ನು ಆರಿಸಿಕೊಂಡಿದೆ,” ಎಂದು ಸಚಿವರು ಹೇಳಿದ್ದಾರೆ. ಅಂದರೆ ಬೆಲೆ ಏರಿಕೆಯ ಬಿಸಿಯನ್ನು ಜನರಿಗೆ ತಟ್ಟದಂತೆ ಮಾಡಲು ಕೇಂದ್ರ ಸರಕಾರ ಶುಲ್ಕ ಇಳಿಕೆ ಮಾಡಿದೆ.
ಕೇಮದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ , “ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ ₹10ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ.
ಇದರ ಜತೆಗೆ ದೇಶೀಯ ತೈಲದ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸರ್ಕಾರವು ಡೀಸೆಲ್ ಮೇಲೆ ಲೀಟರ್‌ಗೆ ₹21.5 ಮತ್ತು ವಿಮಾನಯಾನ ಇಂಧನದ ಮೇಲೆ ಲೀಟರ್‌ಗೆ ₹29.5 ರಫ್ತು ಸುಂಕವನ್ನು ವಿಧಿಸಿದೆ. ಈ ವ್ಯೂಹಾತ್ಮಕ ನಿರ್ಣಯಗಳು ಅಂತಾರಾಷ್ಟ್ರೀಯ ಬೆಲೆ ಏರಿಳಿತದಿಂದ ರಾಷ್ಟ್ರದ ನಾಗರಿಕರನ್ನು ರಕ್ಷಿಸುವುದು, ಹಣದುಬ್ಬರದ ಒತ್ತಡಗಳನ್ನು ಕಡಿಮೆ ಮಾಡುವುದು ಸೇರಿದಂತೆ ವಿಶಾಲ ದೃಷ್ಟಿಕೋನದಲ್ಲಿ ಆರ್ಥಿಕತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿವೆ.” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಖಾಸಗಿ ತೈಲ ಕಂಪನಿಗಳಿಂದ ಬೆಲೆ ಹೆಚ್ಚಳ
ಸರ್ಕಾರ ಈ ಸುಂಕ ಕಡಿತ ಘೋಷಿಸುವ ಒಂದು ದಿನ ಮೊದಲು, ದೇಶದ ಅತಿದೊಡ್ಡ ಖಾಸಗಿ ಇಂಧನ ಮಾರಾಟ ಕಂಪನಿಯಾದ ‘ನಯಾರಾ ಎನರ್ಜಿ’ ಪೆಟ್ರೋಲ್ ಬೆಲೆಯನ್ನು 5.3 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 3ರೂಪಾಯಿನಷ್ಟು ಹೆಚ್ಚಿಸಿತ್ತು. ರಷ್ಯಾದ ರೋಸ್‌ನೆಫ್ಟ್ ಬೆಂಬಲಿತ ಈ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಶೇ. 8.4 ರಷ್ಟು ಪಾಲನ್ನು ಹೊಂದಿದೆ.

