ಬೆಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ಅವಕಾಶ ರಾಜ್ಯ ಸರಕಾರಕ್ಕಿದೆ ! ರಾಜ್ಯದಲ್ಲಿ ಪೆಟ್ರೋಲ್ ಮೇಲೆ ಸುಮಾರು 29.84% ತೆರಿಗೆ !

ಬೆಂಗಳೂರು, ಮೇ. 15 : ತಕ್ಷಣದಿಂದಲೇ (ಮೇ. 15) ಜಾರಿಗೆ ಬರುವಂತೆ, ದೇಶದಲ್ಲಿ ತೈಲಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು CNG ಬೆಲೆಗಳು ಏರಿಕೆಯಾಗಿದೆ. ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ 3.26 ರೂಪಾಯಿ ಮತ್ತು ಡೀಸೆಲ್ ಬೆಲೆ 3.12 ರೂಪಾಯಿ ಹೆಚ್ಚಳ ಆಗಿದೆ. ಬೆಂಗಳೂರಿನಲ್ಲಿ ಪರಿಷ್ಕೃತ ಪೆಟ್ರೋಲ್ ದರ 106.17 (ಲೀ.) ರೂಪಾಯಿ ಮತ್ತು ಡೀಸೆಲ್ ಬೆಲೆ 94.10 (ಲೀ) ರೂಪಾಯಿ ಆಗಿದೆ. ದೇಶಾದ್ಯಂತ ತೈಲ ಬೆಲೆಯಲ್ಲಿ ಏರಿಕೆಯಾದರೂ, ಕರ್ನಾಟಕದಲ್ಲಿ ಬೆಲೆಯನ್ನು ಕಡಿಮೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕಿದೆ.

Advertisement

ಭಾರತದ ತೈಲ ಕಂಪೆನಿಗಳು ಬಹುದಿನದಿಂದ ತೈಲ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದವು. ನಾನಾ ಕಾರಣಗಳಿಂದ, ಮೋದಿ ಸರ್ಕಾರ, ಬೆಲೆ ಏರಿಕೆಯ ಗೋಜಿಗೆ ಹೋಗಿರಲಿಲ್ಲ. ಈಗ, ಲೀಟರ್’ಒಂದಕ್ಕೆ ಸುಮಾರು ಮೂರು ರೂಪಾಯಿಯನ್ನು ಏರಿಸಿದೆ. ಆಮೂಲಕ, ಭಾರೀ ಪ್ರಮಾಣದಲ್ಲಿ ದರ ಏರಿಕೆಯಾಗಬಹುದು ಎನ್ನುವು ಗುಸುಗುಸು ಸುದ್ದಿಗೆ ಬ್ರೇಕ್ ಬಿದ್ದಿದೆ. ಕೆಲವು ದಿನಗಳ ಹಿಂದೆ, ಪ್ರಧಾನಿ ಮೋದಿ ಮಿತವ್ಯಯ ಮತ್ತು ಚಿನ್ನ ಖರೀದಿ ಬ್ರೇಕ್’ಬಗ್ಗೆ ದೇಶದ ಜನತೆಯಲ್ಲಿ ಮನವಿಯನ್ನು ಮಾಡಿದ್ದರು.

ಕರ್ನಾಟಕದಲ್ಲಿ ತೈಲ ಉತ್ಪನ್ನಗಳ ಮೇಲೆ ಟ್ಯಾಕ್ಸ್

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ, ವ್ಯಾಟ್ ಮತ್ತು ಸೇಲ್ಸ್ ಟ್ಯಾಕ್ಸ್ ವಿಧಿಸುತ್ತಿದೆ. ಪ್ರಸ್ತುತ, ಪೆಟ್ರೋಲ್ ಮೇಲೆ ಸುಮಾರು 29.84% ಮತ್ತು ಡೀಸೆಲ್ ಮೇಲೆ ಸುಮಾರು 18.44% ತೆರಿಗೆ ವಿಧಿಸುತ್ತಿದೆ. 2024 ಜೂನ್‌ನಲ್ಲಿ ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿತ್ತು. ಅದರ ಪರಿಣಾಮವಾಗಿ ಲೀಟರ್‌ಗೆ ಸುಮಾರು 3 ರೂಪಾಯಿಯಷ್ಟು ಬೆಲೆ ಏರಿಕೆಯಾಗಿತ್ತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ರಾಜ್ಯದ ಪಾಲಿನ ತೆರಿಗೆಯನ್ನು ಕಡಿಮೆ ಮಾಡುವ ಅವಕಾಶವಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತೈಲ ಅಭಾವ

ರಾಜ್ಯದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ತೈಲಬೆಲೆಯನ್ನು ಮೂರು ಹೆಚ್ಚಿಸಿದ್ದರಿಂದ, ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತದೆ. ಸದ್ಯ, ಜಾಗತಿಕ ಮಟ್ಟದಲ್ಲಿ ಹಾರ್ಮಜ್ ಜಲಸಂಧಿ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದ ಕಚ್ಚಾ ತೈಲದ ಬೆಲೆ ಹೆಚ್ಚಾದಾಗ, ರಾಜ್ಯಗಳು ತೆರಿಗೆ ಕಡಿತ ಮಾಡಿದರೆ ಸಾರ್ವಜನಿಕರಿಗೆ ಹಾಗೂ ಸಾರಿಗೆ ಕ್ಷೇತ್ರಕ್ಕೆ ತಾತ್ಕಾಲಿಕ ನಿರಾಳತೆ ಸಿಗಬಹುದು ಎನ್ನುವುದು ಜನಸಾಮಾನ್ಯರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ವಾರ್ಷಿಕ ಬೊಕ್ಕಸಕ್ಕೆ ಸುಮಾರು 2,500 ಕೋಟಿ ರೂಪಾಯಿ

ಜೂನ್ 15, 2024ರಂದು ಸಿದ್ದರಾಮಯ್ಯ ಸರ್ಕಾರ ತೆರಿಗೆ ಪ್ರಮಾಣವನ್ನು ಶೇ. 25.92 ರಿಂದ ಶೇ.29.84ಕ್ಕೆ ಏರಿಕೆಯನ್ನು ಮಾಡಿತ್ತು. ಇದರಿಂದ, ಗ್ರಾಹಕರಿಗೆ ಹೆಚ್ಚುವರಿ ಮೂರು ರೂಪಾಯಿ ಹೇರಿಕೆಯಾಗಿತ್ತು. ಅದೇ ರೀತಿ, ಡೀಸೆಲ್ ಮೇಲೆ ಶೇ. 14.34 ರಿಂದ ಶೇ.18.44 ತೆರಿಗೆ ಹೆಚ್ಚಳವಾಗಿತ್ತು, ಇದರಿಂದ ಲೀಟರ್ ಒಂದಕ್ಕೆ 3.50 ರೂಪಾಯಿ ಏರಿಕೆಯಾಗಿತ್ತು. ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡರೆ, ಇದರ ಎಫೆಕ್ಟ್ ಇತರ ಉತ್ಪನ್ನಗಳ ಮೇಲೂ ಇರುತ್ತದೆ. ಸಿದ್ದರಾಮಯ್ಯ ಸರ್ಕಾರದ ಈ ತೆರಿಗೆ ಹೆಚ್ಚಳದಿಂದ ವಾರ್ಷಿಕ ಸುಮಾರು 2,500 ಕೋಟಿ ಆದಾಯ ಬೊಕ್ಕಸಕ್ಕೆ ಬರುತ್ತಿದೆ.

ಮೂರು ರೂಪಾಯಿ ಏರಿಕೆಯನ್ನು ಸಿದ್ದರಾಮಯ್ಯ ಸರ್ಕಾರ ಹಿಂದಕ್ಕೆ ಪಡೆಯುತ್ತಾ?

ಅಂದು ಬೆಲೆ ಏರಿಕೆಯಾಗಿದ್ದ ಸಮಯದಲ್ಲಿ, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಿಗಿಂತ ನಮ್ಮಲ್ಲೇ ಕಡಿಮೆ ಎಂದು ಸಿದ್ದರಾಮಯ್ಯ ಸರ್ಕಾರದ ಸಚಿವರು, ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಸದ್ಯದ ತೈಲ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ರೂಪಾಯಿ ಬೆಲೆ ಏರಿಕೆ ಮಾಡಿರುವ ಸಮಯದಲ್ಲೇ, ಸಿದ್ದರಾಮಯ್ಯನವರ ಸರ್ಕಾರ, ಎರಡು ವರ್ಷದ ಹಿಂದೆ ಹೆಚ್ಚಿಸಿರುವ ತೆರಿಗೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ತೈಲ ಬೆಲೆಯಲ್ಲಿ ಏರಿಕೆಯಾದರೂ, ಜೂನ್ 2024ರಲ್ಲಿ ನಿಗದಿ ಪಡಿಸಲಾಗಿರುವ ಮೂಲ ಮಾರಾಟ ತೆರಿಗೆಯ ರಚನೆಯಿಂದಾಗಿ, ಪೆಟ್ರೋಲಿಯಂ ಉತ್ಪನ್ನಗಳಿಂದ ರಾಜ್ಯ ಸರ್ಕಾರಕ್ಕೆ ಬರುವ ಆದಾಯದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ, ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುವ ಆರೋಪಗಳ ನಡುವೆ, ಸಿದ್ದರಾಮಯ್ಯನವರ ಸರ್ಕಾರ, ಎರಡು ವರ್ಷಗಳ ಹಿಂದೆ, ಏರಿಸಿರುವ ಮೂರು ರೂಪಾಯಿಯನ್ನು ಹಿಂದಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆಯಾ ಎನ್ನುವುದು ಪ್ರಶ್ನೆಯಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.