ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರೀ ಏರಿಕೆ !

ನವದೆಹಲಿ, ಮೇ. 15 : ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಬೆಳಗ್ಗೆ ಪರಿಷ್ಕೃತ ದರಗಳನ್ನು ಪ್ರಕಟಿಸಿದ್ದು, ತಕ್ಷಣದಿಂದಲೇ ಹೊಸ ದರ ಜಾರಿಗೆ ಬಂದಿದೆ. ಪ್ರತಿ ಲೀಟರ್‌ಗೆ ಸುಮಾರು ರೂ. 3ರಷ್ಟು ಹೆಚ್ಚಳವಾಗಿದ್ದು, ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಶಾಕ್ ಎದುರಾಗಿದೆ.

Advertisement

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ರೂ.94.77ರಿಂದ ರೂ.97.77ಕ್ಕೆ ಏರಿಕೆಯಾಗಿದೆ. ಡೀಸೆಲ್ ದರವೂ ರೂ.87.67 ರಿಂದ ರೂ.90.67ಕ್ಕೆ ಹೆಚ್ಚಳವಾಗಿದೆ. ರಾಜ್ಯಾವಾರು ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ವಿವಿಧ ನಗರಗಳಲ್ಲಿ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತಿದೆ. ಬೆಂಗಳೂರು ನಗರದಲ್ಲಿಯೂ ಇಂಧನ ದರ ಭಾರೀ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್‌ಗೆ ರೂ.3.27 ಹೆಚ್ಚಳವಾಗಿ ರೂ.106.17ಕ್ಕೆ ತಲುಪಿದ್ದು, ಡೀಸೆಲ್ ದರ ರೂ.3.12 ಏರಿಕೆಯಾಗಿ ರೂ.94.10 ಆಗಿದೆ. ಇದರಿಂದ ವಾಹನ ಸವಾರರು ಮತ್ತು ಸಾರಿಗೆ ಕ್ಷೇತ್ರದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.

ಇನ್ನು ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ರೂ.108.74ಕ್ಕೆ ಹಾಗೂ ಡೀಸೆಲ್ ರೂ.95.13ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ರೂ.106.68 ಮತ್ತು ಡೀಸೆಲ್ ರೂ.93.14ಕ್ಕೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ ರೂ.103.67 ಹಾಗೂ ಡೀಸೆಲ್ ರೂ.95.25 ಆಗಿದೆ.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಇಂಧನ ಸಾಗಣೆ ಮಾರ್ಗಗಳಲ್ಲಿನ ಅಡಚಣೆಗಳಿಂದ ತೈಲ ಕಂಪನಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಇದುವರೆಗೆ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ತೆರಿಗೆ ಹೊಂದಾಣಿಕೆ ಹಾಗೂ ಪೂರೈಕೆ ನಿರ್ವಹಣೆಯ ಮೂಲಕ ಬೆಲೆ ಏರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದವು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಚಿಲ್ಲರೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರವು 2026ರ ಮಾರ್ಚ್ 27ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ.10ರಷ್ಟು ಕಡಿತ ಮಾಡಿತ್ತು. ಇದರೊಂದಿಗೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರೂ.3ಕ್ಕೆ ಮತ್ತು ಡೀಸೆಲ್ ಮೇಲಿನ ಸುಂಕ ಶೂನ್ಯಕ್ಕೆ ಇಳಿಸಲಾಗಿತ್ತು. ಆದರೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ದರ ಇಳಿಕೆಯ ಲಾಭ ದೊರಕಿರಲಿಲ್ಲ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇತ್ತೀಚೆಗೆ ಮಾತನಾಡಿ, ಕಚ್ಚಾ ತೈಲದ ಬೆಲೆಗಳು ಇದೇ ರೀತಿ ಮುಂದುವರಿದರೆ ಸರ್ಕಾರಿ ತೈಲ ಕಂಪನಿಗಳು ಭಾರೀ ನಷ್ಟ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದರು. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಇಂಧನ ಬಳಕೆಯನ್ನು ಮಿತಿಗೊಳಿಸುವಂತೆ ಮನವಿ ಮಾಡಿದ್ದರು. ಇದೀಗ ಬೆಲೆ ಏರಿಕೆಯ ನಂತರ ಜನಸಾಮಾನ್ಯರ ಆತಂಕ ಮತ್ತಷ್ಟು ಹೆಚ್ಚಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.