ಹೊಸದಿಲ್ಲಿ, 24 : ನೀಟ್ ಬಗ್ಗೆ ಧ್ವನಿ ಎತ್ತಿರುವ ರಾಹುಲ್ ಗಾಂಧಿ ತಮ್ಮದೇ ಸರ್ಕಾರವಿರುವ ಕರ್ನಾಟಕದ KPSC ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಅಡಗಿಸಿದ್ದಾರೆ ? ಇದೆಂಥ ದ್ವಿಮುಖ ನೀತಿ ? ಇಂಥಾ ಸೋಗು? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಪಕ್ಷ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ರಾಷ್ಟ್ರೀಯ ಪರೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ನೀಟ್ ವಿವಾದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ ಸತ್ಯಾಧಾರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರೂ ಸಮ್ಮತಿಸಿದ್ದಾರೆ. ಆದರೆ ಒಬ್ಬರ ಅಹಂಕಾರದಿಂದಾಗಿ ಚರ್ಚೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ವಿಪಕ್ಷಗಳು ರಾಜಕೀಯ ಬದಿಗೊತ್ತಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಪ್ರಲ್ಹಾದ ಜೋಶಿ ಕೋರಿದರು.
ಕರ್ನಾಟಕದ ಕೆಪಿಎಸ್ಸಿ ಹಗರಣದ ಬಗ್ಗೆ ಮೌನ !
ಕೇಂದ್ರದಲ್ಲಿ ಇಷ್ಟೊಂದು ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ KPSC ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಜೋಶಿ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ 2.7 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಕೆಪಿಎಸ್‌ಸಿ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲಿಯೂ ಪ್ರತಿಭಟನೆಗಿಳಿದ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಹಾಗಿದ್ದರೂ ರಾಹುಲ್ ಅದೇಕೆ ಮೌನ ವಹಿಸಿದ್ದರು. ಅಲ್ಲೇಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ಕೊಡಲಿಲ್ಲ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಜೋಶಿ, ಇದು ಇವರ ದ್ವಿಮುಖ ನೀತಿಯನ್ನೇ ಅನಾವರಣಗೊಳಿಸಿದೆ ಎಂದು ಹರಿಹಾಯ್ದರು.
ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು !
ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವತ್ತೂ ನೆಪ ಹೇಳಿ ಜಾರಿಕೊಂಡಿಲ್ಲ. ವ್ಯವಸ್ಥೆ ಸುಧಾರಿಸಲು ಪ್ರಥಮಾದ್ಯತೆ ನೀಡಿದೆ. ನೀಟ್ ಪ್ರಕರಣದಲ್ಲಿ ಈಗಾಗಲೇ 14 ಜನರನ್ನು ಬಂಧಿಸಲಾಗಿದೆ. ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು ಮತ್ತು ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿದೆ ಎಂದು ಕೇಂದ್ರದ ಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡರು.


