ಬೆಂಗಳೂರು, ಏ. 25 : ವಿರಾಟ್ ಕೊಹ್ಲಿ ಅವರು ಚೇಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಕನ್ನಡಿಗ ದೇವದತ್ ಪಡಿಕ್ಕಲ್ ಆವರೊಂದಿಗೆ ಮಹತ್ವದ ಶತಕದ ಜೊತೆಯಾಟ ಆಡಿದ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮೂಲಕ ಆಡಿರುವ 7 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕ ಸಂಪಾದಿಸಿರುವ ರಜತ್ ಪಾಟೀದಾರ್ ಬಳಗ ಇದೀಗ ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ 7 ಎಸೆತಗಳು ಬಾಕಿ ಉಳಿದಿರುವಂತೆ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಗೆಲುವಿನ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಡಿಕ್ಕಲ್- ಕೊಹ್ಲಿ ಶತಕದ ಜೊತೆಯಾಟ
ಫಿಲ್ ಸಾಲ್ಟ್ ಗಾಯಾಳುವಾಗಿರುವ ಕಾರಣ ಈ ಸೀಸನ್ ನಲ್ಲಿ ಮೊದಲ ಬಾರಿ ಕಣಕ್ಕಿಳಿದ ಜೇಕಬ್ ಬೆಥೆಲ್ (10 ಎಸೆತದಲ್ಲಿ 14 ರನ್) ಅವರು ಬೇಗನೇ ಪೆವಿಲಿಯನ್ ಸೇರಿಕೊಂಡು ನಿರಾಸೆ ಮೂಡಿಸಿದರು. ಆದರೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಮಹತ್ವದ ಶತಕದ ಜೊತೆಯಾಟ ಪಂದ್ಯವನ್ನು ಸಂಪೂರ್ಣವಾಗಿ ಗುಜರಾತ್ ಟೈಟಾನ್ಸ್ ಕೈಯಿಂದ ಕಿತ್ತುಕೊಂಡಿತು. ಕೇವಲ 47 ಎಸೆತಗಳಲ್ಲಿ 100 ರನ್ ಗಳನ್ನು ಬಾಚಿದ ಇವರಿಬ್ಬರು ಎರಡನೇ ವಿಕೆಟ್ ಗೆ 115ರನ್ ಗಳ ಮಹತ್ವದ ಜೊತೆಯಾಟವಾಡಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದೇವದತ್ ಪಡಿಕ್ಕಲ್ ಅವರು ಔಟಾಗುವ ಮುನ್ನ 27 ಎಸೆತಗಳಲ್ಲಿ 55 ರನ್ ಚಚ್ಚಿದರು. ಅದರಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ ಅವರು ಔಟಾಗುವ ಮುನ್ನ 8 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡ 81 ರನ್ ಗಳಿಸಿದ್ದರು. 8ನೇ ಓವರ್ ನಲ್ಲಿ ರಶೀದ್ ಖಾನ್ ಅವರ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ ನಲ್ಲಿ 300 ಸಿಕ್ಸರ್ ಗಳ ಮೈಲಿಗಲ್ಲು ದಾಟಿದ 3ನೇ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು. ಇವರಿಬ್ಬರು ಔಟಾದ ಬಳಿಕ ರಜತ್ ಪಾಟೀದಾರ್(5 ಎಸೆತದಲ್ಲಿ 8 ರನ್), ಜಿತೇಶ್ ಶರ್ಮಾ(6 ಎಸೆತಗಳಲ್ಲಿ 10 ರನ್) ಅವರ ವಿಕೆಟ್ ಗಳನ್ನು ಲಗುಬಗನೆ ಕೀಳುವ ಮೂಲಕ ಗುಜರಾತ್ ತಂಡ ಆರ್ ಸಿಬಿ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಉಳಿದ ಕೆಲಸವನ್ನು ಕೃನಾಲ್ ಪಾಂಡ್ಯ(12 ಎಸೆತಗಳಲ್ಲಿ ಔಟಾಗದೆ 23 ರನ್) ಮತ್ತು ಟಿಮ್ ಡೇವಿಡ್ (9 ಎಸೆತಗಳಲ್ಲಿ ಔಟಾಗದೆ 10 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ಪರ ರಶೀದ್ ಖಾನ್ 2 ವಿಕೆಟ್ ಮತ್ತು ಸಿರಾಜ್, ಜೇಸನ್ ಹೋಲ್ಡರ್, ಮಾನವ್ ಸೂತರ್ ತಲಾ 1 ವಿಕೆಟ್ ಗಳಿಸಿದರು.
ಸಾಯಿ ಸುದರ್ಶನ್ ಆಕರ್ಷಕ ಶತಕ
ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ತಂಡ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್(58 ಎಸೆತದಲ್ಲಿ 100 ರನ್) ಅವರ ಏಕಾಂಗಿ ಸಾಹಸದಿಂದಾಗಿ ಉತ್ತಮ ಮೊತ್ತ ಕಲೆಹಾಕಿತು. ಅವರು ಮತ್ತು ನಾಯಕ ಶುಭಮನ್ ಗಿಲ್(24 ಎಸೆತದಲ್ಲಿ 32) ಅವರು ಮೊದಲ ವಿಕೆಟ್ ಗೆ 12.4 ಓವರ್ ಗಳಲ್ಲಿ 128 ರನ್ ಗಳ ಜೊತೆಯಾಟ ಆಡಿದರು. ಜೊತೆಗೆ ಜೋಸ್ ಬಟ್ಲರ್(16 ಎಸೆತದಲ್ಲಿ 25 ರನ್), ಜೇಸನ್ ಹೋಲ್ಡರ್ (10 ಎಸೆತದಲ್ಲಿ 23 ರನ್) ಅವರ ಉಪಯುಕ್ತ ಕೊಡುಗೆಯಿಂದಾಗಿ ತಂಡ 200ರ ಗಡಿ ದಾಟಿತು. ತವರು ಕ್ರೀಡಾಂಗಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ನಡೆದ ಉದ್ಘಾಟನಾ ಪಂದ್ಯವನ್ನು ಆರ್ ಸಿಬಿಯು ಜಯಿಸಿತ್ತು. ಇದೀಗ ಇಲ್ಲಿ ನಡೆದ ಸೀಸನ್ ನ ಗ್ರೂಪ್ ಹಂತದ ಕೊನೇ ಪಂದ್ಯವನ್ನು ಗೆದ್ದು ಬೀಗಿದೆ. ಆರ್ ಸಿಬಿಯ ಉಳಿದೆರಡು ತವರು ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿವೆ.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಟೈಟಾನ್ಸ್ 205/3, ಸಾಯಿ ಸುದರ್ಶನ್ 100(58), ಶುಭಮನ್ ಗಿಲ್ 32(24), ಜೋಸ್ ಬಟ್ಲರ್ 25(18), ಭುವನೇಶ್ವರ್ ಕುಮಾರ್ 31ಕ್ಕೆ 1, ಸುಯೇಶ್ ಶರ್ಮಾ 36ಕ್ಕೆ 1, ಜೋಶ್ ಹೇಜಲ್ವುಡ್ 31ಕ್ಕೆ 1.
ರಾಯಲ್ ಚಾಲೆಂಜರ್ಸ್ ಬೆಂಗಳೂರು 206/5, ವಿರಾಟ್ ಕೊಹ್ಲಿ 81(44), ದೇವದತ್ ಪಡಿಕ್ಕಲ್ 55(27), ಕೃನಾಲ್ ಪಾಂಡ್ಯ 23(12), ರಶೀದ್ ಖಾನ್ 49ಕ್ಕೆ 2, ಮಾನವ್ ಸೂಥರ್ 19ಕ್ಕೆ 1, ಸಿರಾಜ್ 25ಕ್ಕೆ 1.

