ಬೆಂಗಳೂರು, ಮಾ. 19 : ರೀಲ್ಸ್ ಹುಚ್ಚಿನಿಂದ ಕುಟುಂಬವೊಂದು ಮನೆಯ ಸದಸ್ಯನನ್ನೇ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಬಂದು ಕೊರಿಯರ್ ಮಾಡಲೆತ್ನಿಸಿ ಸಿಕ್ಕಿಬಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಲ್ಲೇಶ್ವರದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ರೀಲ್ಸ್ ಹುಚ್ಚಿನಿಂದ ಇಡೀ ಕುಟುಂಬ ಪೇಚಿಗೆ ಸಿಲುಕಿ ಕ್ಷಮೆಯಾಚಿಸಿದೆ. ಮಲ್ಲೇಶ್ವರದ ಟೆಂಪಲ್ ಸ್ಟ್ರೀಟ್‌ನ ಕೋಕಿಲಾ ಮತ್ತು ಕುಟುಂಬ ಸದಸ್ಯರು, ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಲು ಹೋಗಿ ಪೇಚಿಗೆ ಸಿಲುಕಿದ್ದಾರೆ.
ಕೋಕಿಲಾ, ಕುಟುಂಬದ ಇತರೆ ಸದಸ್ಯರ ಜತೆ ಸೇರಿ ತಮ್ಮ ವಯೋವೃದ್ಧ ತಂದೆ ಯೋಗೇಶ್ ಅವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಮಲ್ಲೇಶ್ವರದ ಕೊರಿಯರ್ ಕಚೇರಿಗೆ ಹೋಗಿ ಹೊರ ರಾಜ್ಯಕ್ಕೆ ಪಾರ್ಸೆಲ್ ಕೊರಿಯರ್ ಮಾಡಬೇಕೆಂದು ಕೇಳಿದ್ದಾರೆ. ದೊಡ್ಡ ಚೀಲ ನೋಡಿದ ಕೊರಿಯರ್ ಸಿಬ್ಬಂದಿ, ಚೀಲದೊಳಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕೋಕಿಲಾ ಮತ್ತು ಕುಟುಂಬ ಸದಸ್ಯರಿಂದ ಯಾವುದೇ ಉತ್ತ ಬಂದಿಲ್ಲ. ಅನುಮಾನಗೊಂಡ ಸಿಬ್ಬಂದಿ ಚೀಲ ತೆರೆದು ನೋಡಿದಾಗ ಅದರೊಳಗೆ ವ್ಯಕ್ತಿಯೊಬ್ಬರು ಇರುವುದು ಗೊತ್ತಾಗಿದೆ.
ಬಳಿಕ ಕೊರಿಯರ್ ಕಚೇರಿ ಸಿಬ್ಬಂದಿ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ಕೋಕಿಲಾ ಮತ್ತು ಕುಟುಂಬ ಸದಸ್ಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಕೊರಿಯರ್ ಕಚೇರಿಗೆ ಬಂದ ಪೊಲೀಸರು, ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಕೋಕಿಲಾ ಮತ್ತು ಕುಟುಂಬ ಸದಸ್ಯರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಕ್ಷಮೆಯಾಚನೆ:
ರಂಜಾನ್ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಪ್ರಯಾಣ ದರ ಹೆಚ್ಚಾಗಿದ್ದು, ಟಿಕೆಟ್ ಕೂಡ ಸಿಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಸಂದೇಶ ರವಾನಿಸಲು ರೀಲ್ಸ್ ಮಾಡಿದ್ದಾಗಿ ಕೋಕಿಲಾ ಮತ್ತು ಕುಟುಂಬ ಸದಸ್ಯರು ಹೇಳಿದ್ದಾರೆ. ಈ ರೀತಿ ಮಾಡುವುದು ತಪ್ಪು ಎಂದು ಅವರಿಗೆ ಎಚ್ಚರಿಕೆ ಕೊಟ್ಟು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
”ಕುಟುಂಬದ ಸದಸ್ಯರ ಜತೆ ಸೇರಿ ತಂದೆಯನ್ನು ಚೀಲದಲ್ಲಿ ಹಾಕಿಕೊಂಡು ಕೊರಿಯರ್ ಕಚೇರಿಗೆ ಹೋಗಿದ್ದೆವು. ಯುಗಾದಿ ಹಾಗೂ ರಂಜಾನ್ ಹಬ್ಬದ ಕಾರಣಕ್ಕೆ ಎಲ್ಲಾ ಬಸ್‌ಗಳ ಪ್ರಯಾಣ ದರ ಹೆಚ್ಚಾಗಿದ್ದು, ಟಿಕೆಟ್ ಸಿಗುತ್ತಿಲ್ಲ ಎಂಬ ಸಂದೇಶವನ್ನು ಪ್ರಾಂಕ್ ಮೂಲಕ ತಿಳಿಸುವ ಉದ್ದೇಶಕ್ಕೆ ಹೀಗೆ ಮಾಡಿದೆವು. ಈ ರೀತಿ ಮಾಡುವುದು ತಪ್ಪು ಎಂದು ನಮಗೆ ಮೊದಲು ಗೊತ್ತಾಗಿರಲಿಲ್ಲ. ಈಗ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಿದ್ದೇವೆ. ಯಾರೂ ಈ ರೀತಿ ಮಾಡದಿರಿ. ನಾವು ಮುಂದೆ ಇಂತಹ ತಪ್ಪು ಮಾಡುವುದಿಲ್ಲ,” ಎಂದು ಕೋಕಿಲಾ ವಿಡಿಯೊ ಮೂಲಕ ಕ್ಷಮೆ ಕೋರಿದ್ದಾರೆ.


