ಇಂದೋರ್ ನಲ್ಲೊಬ್ಬ 3 ಮನೆ, ಡಿಸೈರ್ ಕಾರು ಹೊಂದಿರುವ ಶ್ರೀಮಂತ ಭಿಕ್ಷುಕ ! ಭಿಕ್ಷೆಯ ಹಣ ಬಡ್ಡಿ ವ್ಯವಹಾರಕ್ಕೆ ಬಳಕೆ

ಇಂದೋರ್, ಜ. 20 : ಹರಿದ ಬಟ್ಟೆ, ಕಣ್ಣಲ್ಲಿ ದೈನೇಸಿ ಭಾವ, ಗಾಲಿಗಳಿರುವ ಕಬ್ಬಿಣದ ಗಾಡಿಯ ಮೇಲೆ ಕುಳಿತು ಭಿಕ್ಷೆ ಬೇಡುವ ವ್ಯಕ್ತಿಯನ್ನು ಕಂಡರೆ ಯಾರಿಗೇ ಆಗಲಿ ಮನ ಕರಗುತ್ತದೆ. ಆದರೆ, ಇಂದೋರ್‌ನ ಸರಫಾ ಬಜಾರ್‌ನಲ್ಲಿ ಇಷ್ಟು ದಿನ ಜನರ ಅನುಕಂಪವನ್ನೇ ಬಂಡವಾಳ ಮಾಡಿಕೊಂಡಿದ್ದ ಭಿಕ್ಷುಕನೊಬ್ಬನ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ. ಅಧಿಕಾರಿಗಳ ತಪಾಸಣೆ ವೇಳೆ ಈತ ಸಾಮಾನ್ಯ ಭಿಕ್ಷುಕನಲ್ಲ, ಬದಲಿಗೆ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಕುಬೇರ ಎಂಬುದು ಬಯಲಾಗಿದೆ.

Advertisement

ಇಂದೋರ್ ನಗರವನ್ನು ಭಿಕ್ಷುಕರ ಮುಕ್ತ ನಗರವನ್ನಾಗಿ ಮಾಡಲು ಮಧ್ಯ ಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಅಭಿಯಾನ ನಡೆಸುತ್ತಿದೆ. ಅದರಂತೆ, ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ, ಕುಷ್ಠರೋಗ ಪೀಡಿತನಾದ ಮಂಗಿಲಾಲ್ ಎಂಬ ವ್ಯಕ್ತಿ ಸರಫಾ ಬಜಾರ್‌ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಎಂಬ ಮಾಹಿತಿ ಬಂದಿತ್ತು. ಇದರ ಅನ್ವಯ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿತ್ತು. ಆತನನ್ನು ರಕ್ಷಿಸಿ ವಿಚಾರಣೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬೀಳುವಂತಹ ಸತ್ಯಗಳು ಹೊರಬಂದಿವೆ.

ಭಿಕ್ಷುಕನ ಆಸ್ತಿ ಕಂಡು ದಂಗಾದ ಅಧಿಕಾರಿಗಳು

ಇಂದೋರ್‌ನ ಪ್ರಮುಖ ಪ್ರದೇಶಗಳಲ್ಲಿ ಈತ ಬರೋಬ್ಬರಿ 3 ಮನೆಗಳನ್ನು ಹೊಂದಿದ್ದಾನೆ. ಇದರಲ್ಲಿ ಒಂದು ಮೂರು ಅಂತಸ್ತಿನ ಕಟ್ಟಡವಾಗಿದೆ. ವಿಚಿತ್ರವೆಂದರೆ, ಇಷ್ಟೆಲ್ಲಾ ಆಸ್ತಿ ಇದ್ದರೂ ತನ್ನ ಅಂಗವಿಕಲತೆಯ ಕೋಟಾದಲ್ಲಿ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ಯಡಿ (ಪಿಎಂಎವೈ) ಸರ್ಕಾರದಿಂದ 1 ಬಿಎಚ್‌ಕೆ ಮನೆಯನ್ನೂ ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲ, ಈತನ ಬಳಿ 3 ಆಟೋ ರಿಕ್ಷಾಗಳಿವೆ ಮತ್ತು ಒಂದು ಮಾರುತಿ ಸುಜುಕಿ ಡಿಸೈರ್ ಕಾರು ಇದೆ. ಇವೆಲ್ಲವನ್ನೂ ಆತ ಬಾಡಿಗೆಗೆ ನೀಡಿದ್ದು, ಅದರಿಂದಲೂ ಆದಾಯ ಗಳಿಸುತ್ತಿದ್ದ.

ಇನ್ನು, ವಿಚಾರಣೆ ವೇಳೆ ಮಂಗಿಲಾಲ್ ಬಾಯಿಬಿಟ್ಟ ಸತ್ಯಗಳನ್ನು ಕೇಳಿ ಅಧಿಕಾರಿಗಳ ತಲೆಸುತ್ತು ಬಂದು ಬೀಳುವುದೊಂದು ಬಾಕಿ. ಆತ ಭಿಕ್ಷೆಯಿಂದ ಬಂದ ಹಣವನ್ನು ಊಟಕ್ಕೆ ಬಳಸುತ್ತಿರಲಿಲ್ಲ. ಬದಲಿಗೆ ಅದನ್ನು ಸರಫಾ ಬಜಾರ್‌ನ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲವಾಗಿ ನೀಡುತ್ತಿದ್ದ. ದಿನಕ್ಕೆ ಭಿಕ್ಷೆಯಿಂದ ಆತನಿಗೆ 400 ರಿಂದ 500 ರೂ. ಸಿಗುತ್ತಿತ್ತು. ಆದರೆ ಬಡ್ಡಿ ಮತ್ತು ಬಾಡಿಗೆ ಹಣ ಸೇರಿ ಆತನ ದಿನದ ಗಳಿಕೆ 1,000 ದಿಂದ 2,000 ರೂಪಾಯಿಗಳಷ್ಟಿತ್ತು. ಸುಮಾರು 4 ರಿಂದ 5 ಲಕ್ಷ ರೂ.ಗಳನ್ನು ಆತ ಸಾಲವಾಗಿ ಮಾರುಕಟ್ಟೆಯಲ್ಲಿ ಹರಿಬಿಟ್ಟಿದ್ದಾನೆ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿ ದಿನೇಶ್ ಮಿಶ್ರಾ ಈ ಬಗ್ಗೆ ಮಾತನಾಡಿದ್ದು, “ಮಂಗಿಲಾಲ್ ಅನುಕಂಪ ಗಿಟ್ಟಿಸಿ ಹಣ ಸಂಪಾದಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಆತ ಭಿಕ್ಷೆಯ ಹಣವನ್ನು ತನಗಾಗಿ ಖರ್ಚು ಮಾಡದೆ, ಮರುಹೂಡಿಕೆ ಮಾಡುತ್ತಿದ್ದ. ಸದ್ಯ ಆತನನ್ನು ಉಜ್ಜಯಿನಿಯ ಸೇವಾಧಾಮ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ. ಆತನ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ಆತನಿಂದ ಸಾಲ ಪಡೆದ ವ್ಯಾಪಾರಿಗಳನ್ನೂ ಪ್ರಶ್ನಿಸಲಾಗುವುದು,” ಎಂದು ತಿಳಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಆಶ್ರಯದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದ ಪ್ರೌಢಶಾಲೆ ವಿಭಾಗದ ಬಾಲಕರ ಪಂದ್ಯಾಟ ಆರಂಭ

ಕರಾವಳಿ, ಟಾಪ್ ಸುದ್ದಿಗಳು

ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ – ಮನೆಯಿಂದ ಹೊರ ಬರುವ ಮುನ್ನ ಎಚ್ಚರ ! ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ರಾಹುಲ್ ಗಾಂಧಿ ಪೌರತ್ವಕ್ಕೆ ಕಂಟಕ ! ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ…

⚠️ Contents are protected on this website.