ಬೆಂಗಳೂರು, ಆ. 26 : ಕದ್ದ ಹಣದಲ್ಲೇ ಬಡವರಿಗೆ ನೆರವಾಗಿ, ಸ್ನೇಹಿತರಿಗೆ ಪಾರ್ಟಿ ನೀಡುತ್ತಿದ್ದ ಮನೆಗಳ್ಳನ್ನೊಬ್ಬನನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನ ಶಿವರಸನ್ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯ ಬಂಧನದಿಂದ 8 ಮನೆಗಳ್ಳತನ ಪ್ರಕರಣ ಪತ್ತೆಯಾಗಿದ್ದು, ಬಂಧಿತನಿಂದ 196 ಗ್ರಾಂ ಚಿನ್ನಾಭರಣ, 4 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 36 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕುಖ್ಯಾತ ಕಳ್ಳನಾದ ರಾಬಿನ್‌ಹುಡ್ ಶ್ರೀಮಂತರ ಮನೆಗಳಲ್ಲಿ ಲೂಟಿ ಮಾಡಿ ಬಡವರಿಗೆ ಸಹಾಯ ಮಾಡುತ್ತಿದ್ದ. ಆರೋಪಿ ಶಿವರಸನ್ ಕೂಡ ಇದೇ ರೀತಿ ಕಳ್ಳತನ ಮಾಡಿ ಬಡವರಿಗೆ ನೆರವಾಗುತ್ತಿದ್ದ ಎಂದು ತಿಳಿದು ಬಂದಿದೆ.
ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ಈತ, ಮುಂಜಾನೆ ಬೈಕ್‌ನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ನಂತರ ಮನೆಯ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣವನ್ನು ಕ್ಷಣ ಮಾತ್ರದಲ್ಲಿ ಕದಿಯುತ್ತಿದ್ದ. ಕಲಾವಿದನಾಗಿ ದುಡಿಯುತ್ತಿದ್ದ ಶಿವರಸನ್, ತನ್ನ ದುಂದು ವೆಚ್ಚದ ಶೋಕಿ ಜೀವನಕ್ಕಾಗಿ ಕಳ್ಳತನದ ಮಾರ್ಗ ಹಿಡಿದಿದ್ದ ಎಂದು ತಿಳಿದು ಬಂದಿದೆ.
ಇನ್ನು ಕದ್ದ ಚಿನ್ನಾಭರಣದ ಮಾರಾಟದಿಂದ ಬಂದ ಹಣದಲ್ಲಿ ಸ್ವಲ್ಪ ಪಾಲನ್ನು ಆಟೋ ಚಾಲಕರು ಹಾಗೂ ಬಡ ಜನರಿಗೆ ಸಹಾಯ ಮಾಡುತ್ತಿದ್ದ. ಇದಲ್ಲದೇ, ಅವರಿಂದಲೇ ಬೀಗ ಹಾಕಿದ ಮನೆಗಳ ಮಾಹಿತಿ ಪಡೆಯುತ್ತಿದ್ದ. ಆರೋಪಿ ಶಿವರಸನ್ ವಿರುದ್ಧ ಈಗಾಗಲೇ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೈಕೋಲೇಔಟ್‌ನ ನಿವಾಸಿಯೊಬ್ಬರು ಸಂಬಂಧಿಕರ ಮದುವೆ ನಿಮಿತ್ತ ಏ.22ರಂದು ಪ್ರಯಾಗ್ ರಾಜ್‌ಗೆ ತೆರಳಿದ್ದರು. ಇವರ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ್ದ ಆರೋಪಿಯು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿದ್ದ.
ಸಂಬಂಧಿಕರ ವಿವಾಹ ಸಮಾರಂಭ ಮುಗಿಸಿ ಬಂದಾಗ ಪ್ರಕರಣ ಗೊತ್ತಾಗಿದೆ. ಇತ್ತ ಮನೆ ಮಾಲಿಕರು ಬೇಗೂರು ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.




