ಬೆಂಗಳೂರು : ಪಠ್ಯ ಆರಂಭಕ್ಕೂ ಮುನ್ನ ಪಠ್ಯ ಪುಸ್ತಕ ಸಿಗಬಹುದು – ನೋಟ್ ಪುಸ್ತಕ ಡೌಟ್ !

ಬೆಂಗಳೂರು, ಮೇ. 06 : ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳ ಜತೆಗೆ ನೋಟ್ ಪುಸ್ತಕಗಳನ್ನು ಕೂಡ ಉಚಿತವಾಗಿ ವಿತರಿಸುವುದಾಗಿ ಸರ್ಕಾರ ಅತ್ಯುತ್ಸಾಹದಿಂದ ಘೋಷಿಸಿದ್ದರೂ ಅದರ ಅನುಷ್ಠಾನದ ವಿಷಯದಲ್ಲಿ ತೂಕಡಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಪೂರಕ ಆದೇಶವನ್ನು ಇನ್ನೂ ಹೊರಡಿಸದೆ ಇರುವುದರಿಂದ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ನೋಟ್ ಬುಕ್ ಸಿಗುವುದು ಅಸಾಧ್ಯದ ಮಾತಾಗಿದೆ.

Advertisement

ಪೂರಕ ಆದೇಶ ಹೊರಡಿಸಿದ ಅನಂತರ ಟೆಂಡರ್ ಪ್ರಕ್ರಿಯೆ ನಡೆಸಿ, ಮುದ್ರಣ ಮಾಡಿ, ಪೂರೈಕೆ ಮಾಡಲು ಸಮಯಾವಕಾಶ ಬೇಕು. ಹೀಗಾಗಿ ಆರಂಭದಲ್ಲಿಯೇ ನೋಟ್‌ಬುಕ್ ಹಂಚಿಕೆ ಅನುಮಾನ. ಆದರೆ ಶಾಲಾರಂಭದ ವೇಳೆಗೆ ಪಠ್ಯಪುಸ್ತಕ ಸಿಗುವುದು ಬಹುತೇಕ ಖಚಿತ. ಪಠ್ಯಪುಸ್ತಕ ಮುದ್ರಣಕ್ಕೆ ಸಂಬಂಧಿಸಿ 2026ರ ಜನವರಿಯಲ್ಲೇ ಆದೇಶ ನೀಡಲಾಗಿದ್ದು, ಅವುಗಳ ಮುದ್ರಣ ಪ್ರಕ್ರಿಯು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಚುರುಕಾಗಿ ನಡೆಯುತ್ತಿದೆ.

ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪುಸ್ತಕ

2026-27ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕಗಳನ್ನು ಸರ್ಕಾರವೇ ಪೂರೈಕೆ ಮಾಡಲಿದೆ. ಇದುವರೆಗೆ ಎಸ್ಸೆಸ್ಸೆಲ್ಸಿ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಸೀಮಿತವಾಗಿದ್ದರೆ, ಈಗ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗಾಗಿ ಸುಮಾರು 27,22,336 ಪಠ್ಯಪುಸ್ತಕಗಳನ್ನು 9.42 ಕೋಟಿ ರೂ. ವೆಚ್ಚದಲ್ಲಿ ಮುದ್ರಿಸಲಾಗುತ್ತಿದೆ. ಇದು ಕೂಡ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳ ಕೈ ಸೇರಲಿದೆ. ಶಾಲಾ ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಬಲಪಡಿಸಲು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಅಂಶಗಳನ್ನು ಒಳಗೊಂಡ ಮೌಲ್ಯಶಿಕ್ಷಣ ಪಠ್ಯಪುಸ್ತಕಗಳನ್ನು ಮುದ್ರಿಸಿ ನೀಡಲು ಸರ್ಕಾರ ಮುಂದಾಗಿದ್ದು, ಅದರಂತೆ ಅಗತ್ಯ ಪಠ್ಯಪುಸ್ತಕದ ಮುದ್ರಣ ಕಾರ್ಯವೂ ನಡೆಯುತ್ತಿದೆ.

ವಿದ್ಯಾವಿಕಾಸ : ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಮತ್ತು ಅಭ್ಯಾಸ ಪುಸ್ತಕಗಳನ್ನು ಪೂರೈಕೆ ಮಾಡಲಾಗುತ್ತದೆ. ಜತೆಗೆ 1ರಿಂದ 12ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೊಂದಿಗೆ ದಿನಚರಿ ಪುಸ್ತಕವೂ ದೊರೆಯಲಿದೆ. 4ರಿಂದ 9ನೇ ತರಗತಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಭ್ಯಾಸ ಪುಸ್ತಕಗಳನ್ನು ಒದಗಿಸಲಾಗುತ್ತದೆ.

264 ಕೋ.ರೂ. ವೆಚ್ಚ

ಶಾಲೆ ಹಾಗೂ ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ದಿನಚರಿ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳನ್ನು ಒದಗಿಸಲು ಸರ್ಕಾರ ಒಟ್ಟು 264.62 ಕೋಟಿ ರೂ. ವೆಚ್ಚ ಮಾಡಲಿದೆ. ಇದರಡಿ 6,74,58,588 ಪಠ್ಯಪುಸ್ತಕಗಳು, 38,34,650 ಮೌಲ್ಯಶಿಕ್ಷಣ ಪುಸ್ತಕಗಳು, ಪೂರ್ವ ಪ್ರಾಥಮಿಕ ಮಕ್ಕಳಿಗೆ 7,78,140 ಪುಸ್ತಕಗಳು ಹಾಗೂ 1,96,785 ದಿನಚರಿಗಳ ಮುದ್ರಣ ನಡೆಯಲಿದೆ.

ವಿದ್ಯಾರ್ಥಿಗಳ ಸಂಖ್ಯೆ

ಸರ್ಕಾರದಿಂದ ಉಚಿತ ಪಠ್ಯಪುಸ್ತಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಅರ್ಧ ಕೋಟಿಗೂ ಹೆಚ್ಚಿದೆ. 1ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 61 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಕನ್ನಡ ಮಾಧ್ಯಮದ 20.28 ಲಕ್ಷ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, 41.26 ಲಕ್ಷ ವಿದ್ಯಾರ್ಥಿಗಳಿಗೆ ದಿನಚರಿ, ಹಾಗೂ ಸರ್ಕಾರಿ ಪಿಯು ಕಾಲೇಜಿನ ಸುಮಾರು 2.77 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಪೂರೈಕೆ ಆಗಲಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.