ಧರ್ಮಸ್ಥಳ : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ರಿಂದ ಮೇ 31ರಂದು “ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್” ಉದ್ಘಾಟನೆ

ಧರ್ಮಸ್ಥಳ, ಮೇ. 30 : ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನ ಸಮಾರಂಭ ಮೇ 31ರ ಭಾನುವಾರ ಪೂರ್ವಾಹ್ನ ಹತ್ತು ಗಂಟೆಗೆ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ತಿಳಿಸಿದ್ದಾರೆ. ಮಾನ್ಯ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟಿಸಲಿದ್ದಾರೆ.

Advertisement

ಕರ್ನಾಟಕದ ರಾಜ್ಯಪಾಲರಾದ ಮಾನ್ಯ ಥಾವರ್ಚಂದ್ ಗೆಹ್ಲೋಟ್ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವ ದಿನೇಶ್ ಗಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪಸಿಂಹ ನಾಯಕ್, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ರಾಜ್ಯಸಭೆ ಕಾರ್ಯದರ್ಶಿ ಕೆ.ಎಸ್. ಸೋಮಶೇಖರ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉಪರಾಷ್ಟ್ರಪತಿಗಳ ಕಾರ್ಯಕ್ರಮ :

ಉಪರಾಷ್ಟ್ರಪತಿಗಳಾದ ಮಾನ್ಯ ಸಿ.ಪಿ. ರಾಧಾಕೃಷ್ಣನ್ ಇಂದು ಶನಿವಾರ ಸಂಜೆ ಗಂಟೆ 4:25ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಬಂದು ಅಲ್ಲಿಂದ ಸಂಜೆ 05:00 ಗಂಟೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸುವರು. “ಶ್ರೀ ಸನ್ನಿಧಿ’ ಅತಿಥಿಗೃಹದಲ್ಲಿ ವಾಸ್ತವ್ಯ ಇರುವ ಅವರು ಭಾನುವಾರ ಬೆಳಿಗ್ಗೆ 08:00 ಗಂಟೆಗೆ ಧರ್ಮಸ್ಥಳ ಶ್ರೀ ಮಂಜುನಾಥ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುವರು.

ಪೂರ್ವಾಹ್ನ 10:00 ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅಪರಾಹ್ನ ಗಂಟೆ 02:25ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಗಂಟೆ 03:15ಕ್ಕೆ ಕೇರಳ ರಾಜ್ಯದ ಕಣ್ಣೂರಿಗೆ ಪ್ರಯಾಣಿಸುವರು ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

“ಸಿರಿ” ಗ್ರಾಮೋದ್ಯೋಗ ಸಂಸ್ಥೆ :

ಮಹಿಳಾ ಸಬಲೀಕರಣದ ಮೂಲಕ ಮಹಿಳೆಯರ ಆಶಾಕಿರಣ ೧೯೮೨ರಲ್ಲಿ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ನಡೆದ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಥಮ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಜನಮಂಗಳ ಕಾರ್ಯಕ್ರಮಗಳ ಅಂಗವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಎರಡು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದರು.

  1. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
  2. ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರ
    ಈ ಎರಡೂ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ಸ್ವಾವಲಂಬಿ ಜೀವನಕ್ಕೆ ಪ್ರೇರಕ ಶಕ್ತಿಯಾಗಿವೆ.

1982ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಈಗ ರಾಜ್ಯದೆಲ್ಲೆಡೆ ವಿಸ್ತರಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು ಕಂಡ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕಲ್ಪನೆ ಇಲ್ಲಿ ಸಾಕಾರಗೊಳ್ಳುತ್ತಿದೆ. ತಮ್ಮ ಸುತ್ತಲಿರುವ ನೆಲ-ಜಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಸದುಪಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಲು ನಿರಂತರ ಪ್ರೇರಣೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದೇ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಮಂತ್ರವಾಗಿದೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು “ಸಿರಿ ಗ್ರಾಮೋದ್ಯೋಗ ಸಂಸ್ಥೆ”. ಬೆಳ್ತಂಗಡಿ ತಾಲ್ಲೂಕಿನ ಲಾಲದಲ್ಲಿ 2004ರಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಹಿಂದುಳಿದವರ್ಗದವರು , ಅಲ್ಪಸಂಖ್ಯಾತರು , ದುರ್ಬಲ ಮಹಿಳೆಯರು, ಸ್ವ-ಉದ್ಯೋಗದೊಂದಿಗೆ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹಿಸುವುದೇ ಸಂಸ್ಥೆಯ ಗುರಿಯಾಗಿದೆ. ಯಾವುದೇ ರೀತಿಯ ವಿಶೇಷ ಅನುಭವ, ಪರಿಣತಿ ಇಲ್ಲದ ಗ್ರಾಮೀಣ ಮಹಿಳೆಯರಿಗೆ ವೇತನ ಸಹಿತವಾಗಿ ಕೌಶಲಾಭಿವೃದ್ಧಿ ತರಬೇತಿ ನೀಡಿ, ಅವರಿಂದ ಉತ್ತಮ ಗುಣಮಟ್ಟದ ಸಿದ್ಧ ಉಡುಪುಗಳು, ಫೀನಾಯಿಲ್, ಅಗರಬತ್ತಿ, ದೀಪದ ಎಣ್ಣೆ, ಕರಿದ ತಿಂಡಿಗಳು, ಉಪ್ಪಿನಕಾಯಿ, ಕೋಕಂ ಜ್ಯೂಸ್, ಹಪ್ಪಳ, ಇತ್ಯಾದಿ ತಯಾರಿಸಿ ಮಾರಾಟ ಮಾಡುವುದೇ ಸಂಸ್ಥೆಯ ಉದ್ದೇಶ. ಒಂದು ಸಾವಿರಕ್ಕೂ ಮಿಕ್ಕಿ ಗ್ರಾಮೀಣ ಮಹಿಳೆಯರಿಗೆ ಇಲ್ಲಿ ಉದ್ಯೋಗಾವಕಾಶ ನೀಡಲಾಗಿದೆ.

ಬೆಳ್ತಂಗಡಿಯಲ್ಲಿ ರೆಂಕೆದಗುತ್ತು ಬಳಿ ಏಳು ಎಕ್ರೆ ಜಾಗ ಖರೀದಿಸಿ, 71 ಕೋಟಿ ರೂ. ವೆಚ್ಚದಲ್ಲಿ ಒಂದೂವರೆ ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ “ಸಿರಿ” ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಿ ಅದನ್ನು ಇಂಡಸ್ಟ್ರಿಯಲ್ ಪಾರ್ಕ್ ಆಗಿ ರೂಪಿಸಲಾಗಿದೆ. “ಸಿರಿ”ಯ ಎಲ್ಲಾ ಉತ್ಪನ್ನಗಳ ಉತ್ಪಾದನಾ ಘಟಕಗಳನ್ನು ಇಲ್ಲಿ ಪ್ರಾರಂಭಿಸಿದ್ದು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. “ಸಿರಿ” ಸಂಸ್ಥೆಯು ತನ್ನದೇ ಆದ 14 ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಹಾಗೂ ಧರ್ಮಸ್ಥಳ, ಧಾರವಾಡ, ಹಾಸನ, ಮಂಗಳೂರು ಮೊದಲಾದ ಕಡೆ ಇರುವ ಎಸ್.ಡಿ.ಎಂ. ಆಸ್ಪತ್ರೆಗಳ ವಠಾರದಲ್ಲಿಯೂ “ಸಿರಿ” ಮಳಿಗೆಗಳಿವೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.