ಬೆಳ್ತಂಗಡಿಯ ಸೋಮಾವತಿ ನದಿ ಸೇತುವೆ ಇನ್ನು ನೆನಪು ಮಾತ್ರ – ನಾಲ್ಕು ಅಶೋಕ ಸ್ತಂಭ ಹೊಂದಿದ್ದ ಈ ಸೇತುವೆ 70 ವರ್ಷವಾದರೂ ಶಿಥಿಲಗೊಂಡಿಲ್ಲ !

ಬೆಳ್ತಂಗಡಿ, ಮಾ. 24 : ಸೋಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 70 ವರ್ಷ ಹಳೆಯ ಬೆಳ್ತಂಗಡಿ ಸೇತುವೆ ಇತಿಹಾಸ ಪುಟ ಸೇರಿದೆ. ಸೇತುವೆ ತೆರವು ಕಾರ್ಯ ಭಾಗಶ: ಪೂರ್ಣಗೊಂಡು, ನೆನಪು ಮಾತ್ರವಾಗಿ ಉಳಿಯಲಿದೆ.

Advertisement

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿರುವ ಕಾರಣದಿಂದಾಗಿ, ಈ ಹಳೆಯ ಸೇತುವೆಯನ್ನು ಸಂಪೂರ್ಣವಾಗಿ ತೆರವು ಮಾಡಲಾಗುತ್ತಿದೆ. ಬೆಳ್ತಂಗಡಿಗೆ ಬೇರೆ ಬೇರೆ ಭಾಗಗಳನ್ನು ಬೆಸೆಯುವ ಕೊಂಡಿಯಾಗಿ ಈ ಸೇತುವೆ ಕಾರ್ಯನಿರ್ವಹಿಸುತ್ತಿತ್ತು. ಬೆಳ್ತಂಗಡಿ ತಾಲೂಕಿನ ಪ್ರಮುಖ ಸೇತುವೆಯಾಗಿದ್ದ ಈ ಸೇತುವೆ ಘಟ್ಟ ಪ್ರದೇಶದಿಂದ ಮಂಗಳೂರು ಭಾಗವನ್ನು ಬೆಸೆಯುತ್ತಿದ್ದ ಸೇತುವೆಯೂ ಹೌದು.

70 ವರ್ಷವಾದರೂ ಶಿಥಿಲವಾಗಿಲ್ಲ:

ಕಂಬದಲ್ಲಿರುವ ಮಾಹಿತಿ ಪ್ರಕಾರ 1957ರ ಜುಲೈ 8 ರಂದು ಮೈಸೂರು ರಾಜ್ಯದ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಕೆ.ವೀರಣ್ಣ ಗೌಡ ಸೇತುವೆ ಉದ್ಘಾಟಿಸಿದ್ದರು. ಈ ಹಳೆಯ ಸೇತುವೆಯ ನಾಲ್ಕು ಮೂಲೆಗಳಲ್ಲಿ ಕಂಬ ನಿರ್ಮಿಸಿ ಅದರ ಮೇಲೆ ಅಶೋಕ ಸ್ತಂಭವನ್ನು ಅಳವಡಿಸಲಾಗಿತ್ತು, ಇದು ಪ್ರಯಾಣಿಕರ ಆಕರ್ಷಣೀಯವೂ ಆಗಿತ್ತು. ಈ ಸೇತುವೆಯು ಮೇಲ್ಭಾಗದ ರಸ್ತೆಯಲ್ಲಿ ಕೆಲವು ಸಮಸ್ಯೆಗಳ ಹೊರತುಪಡಿಸಿ, ಇನ್ನೂ ಗಟ್ಟಿಯಾಗಿಯೇ ಇರುವುದು ವಿಶೇಷ. ಅಂದಿನ ಕಾಮಗಾರಿಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಂತಿತ್ತು ಈ ಸೇತುವೆ.

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ :

ಮುಖ್ಯಹೆದ್ದಾರಿ ಬದಿ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ, ಮತ್ತೊಂದು ಸೇತುವೆ ನಿರ್ಮಿಸುವುದಕ್ಕಾಗಿ ಈ ಹಳೇ ಸೇತುವೆ ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಮುಖ್ಯ ಸೇತುವೆ ಹಾಗೂ ಒಂದು ಬದಿಯ ಸರ್ವೀಸ್ ರಸ್ತೆಯ ಸೇತುವೆಯ ಕಾಮಗಾರಿ ಪೂರ್ಣಗೊಂಡಿದೆ. ಮತ್ತೊಂದು ಸರ್ವಿಸ್ ರಸ್ತೆಯ ಸೇತುವೆ ನಿರ್ಮಾಣಕ್ಕಾಗಿ ಈ ಸೇತುವೆಯನ್ನು ತೆರವುಗೊಳಿಸಲಾಗುತ್ತಿದೆ. ಬೆಳ್ತಂಗಡಿ ನಗರ ಹಾಗೂ ಲಾಯಿಲ ಎರಡೂ ಕಡೆಯಲ್ಲೂ ಹಳೇ ಸೇತುವೆ ಸಂಪರ್ಕ ರಸ್ತೆಗಳು ಇಳಿಜಾರಿನಿಂದ ಕೂಡಿದ್ದು, ಹೊಸ ಸೇತುವೆ ನಿರ್ಮಾಣದಿಂದ ಇಳಿಜಾರು ಸಮಸ್ಯೆ ಬಗೆಹರಿಯಲಿದೆ. ಪ್ರಸ್ತುತ ಬೆಳ್ತಂಗಡಿ ಭಾಗದಿಂದ ಲಾಯಿಲ ಕಡೆಗೆ ಹಾಗೂ ಬೆಳ್ತಂಗಡಿ ನಗರಕ್ಕೆ ಆಗಮಿಸುವ ವಾಹನಗಳು ಹೊಸ ಸೇತುವೆ ಮೂಲಕ ಸಂಚರಿಸುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಮುಖ್ಯ ಸೇತುವೆ ಹಾಗೂ ಎರಡು ಸರ್ವಿಸ್ ರಸ್ತೆಯ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಬಹುದು.

ಸದ್ಯ, ಜೂನ್‌ನೊಳಗೆ ಕಾಮಗಾರಿ ಮುಗಿಸುವ ಗುರಿಯೊಂದಿಗೆ ಭರದಿಂದ ಕಾಮಗಾರಿ ನಡೆಯುತ್ತಿದೆ. ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಜಂಕ್ಷನ್ ಪ್ರದೇಶಗಳಲ್ಲಿ ಕಾಮಗಾರಿ ಬಾಕಿ ಇವೆ. ಟೆಂಡರ್ ಅವಧಿಯ ಪ್ರಕಾರ 2026ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿದ್ದು, ಜೂನ್ ಬಳಿಕ ಮಳೆಯಿಂದ ಕಾಮಗಾರಿ ನಡೆಸುವುದು ಕಷ್ಟವಾದ್ದರಿಂದ ಬಹುತೇಕ ಕಾಮಗಾರಿಗಳನ್ನು ಜೂನ್ ಅಂತ್ಯದೊಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.