ಸುಳ್ಯ, ಆ. 16 : ಕಾಡಾನೆ ಓಡಿಸಲು ಅರಣ್ಯ ಇಲಾಖೆ ಸಿಬಂದಿ ಗಾಳಿಯಲ್ಲಿ ಹಾರಿಸಿದ ಗುಂಡಿನ ಚಿಲ್ಲು (ಚೂರು) ಸ್ಕೂಟರ್ ಸವಾರನ ಕಾಲಿಗೆ ತಾಗಿ ಗಾಯಗೊಂಡಿರುವ ಘಟನೆ ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ಆ. 12ರಂದು ರಾತ್ರಿ ಸಂಭವಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪೆರುವಾಜೆ ಗ್ರಾಮದ ಏನಡ್ಕ ನಿವಾಸಿ ಎ. ರಾಘವ ಪ್ರಭು ಸುಳ್ಯದ ಆಸ್ಪತ್ರೆಗೆ ದಾಖಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ವೆಚ್ಚ ಭರಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ರಾಘವ ಪ್ರಭು, ಬ್ಯಾಂಕ್ ಕೆಲಸ ಮುಗಿಸಿ ಆ. 12 ರಂದು ರಾತ್ರಿ 7.30ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ ಬೇಂಗಮಲೆಯಲ್ಲಿ ಕಾಡಾನೆ ರಸ್ತೆ ದಾಟುತ್ತಿರುವುದು ಕಂಡಿತು. ತತ್‌ಕ್ಷಣ ಸ್ಕೂಟರ್ ಅನ್ನು ಸುಳ್ಯದತ್ತ ತಿರುಗಿಸಿದೆ. ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬಂದಿ ಕಾಡಾನೆ ಓಡಿಸಲು ಹಾರಿಸಿದ ಗುಂಡಿನ ಚಿಲ್ಲು ನನ್ನ ಕಾಲಿಗೆ ತಾಗಿತು. ಗಾಯವನ್ನು ಅವರಿಗೆ ತೋರಿಸಿದ್ದರೂ ಏನೂ ಆಗುವುದಿಲ್ಲ, ಹೋಗಿ ಎಂದರು. ಮರುದಿನ ನೋವು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕಾಲಿನಲ್ಲಿದ್ದ ಗುಂಡಿನ ಚಿಲ್ಲನ್ನು ತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
ಕಾಡಾನೆ ಓಡಿಸಲು ಗುಂಡು ಹಾರಿಸುವ ಸಂದರ್ಭ ಅರಣ್ಯ ಇಲಾಖೆ ಸಿಬಂದಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕಿತ್ತು. ರಸ್ತೆಯ ಎರಡೂ ಬದಿಯ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ ಎಂದು ಅವರು ವಿಷಾದಿಸಿದ್ದಾರೆ.




