ಮುಂಬೈ, ಜು. 12 : ಐತಿಹಾಸಿಕ ಹಾಗೂ ಪ್ರಸಿದ್ಧ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಭಾನುವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ತಿಳಿದು ಬಂದಿದೆ. ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಇಡೀ ಹೋಟೆಲ್ ಆವರಣದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಬೆದರಿಕೆ ಕರೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಹೋಟೆಲ್‌ನ ಮೂಲೆ ಮೂಲೆಗಳಲ್ಲೂ ತಪಾಸಣೆ ನಡೆಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರಕಟಿಸಿದೆ.
ಪೊಲೀಸ್ ಇಲಾಖಾ ಮಾಹಿತಿ ಪ್ರಕಾರ, ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ನವಿ ಮುಂಬೈ ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು. ಮುಂಬೈನ ತಾಜ್ ಹೋಟೆಲ್ ಅನ್ನು ಬಾಂಬ್ ಇಟ್ಟು ಉಡಾಯಿಸುವುದಾಗಿ ಆತ ಬೆದರಿಕೆ ಹಾಕಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ನವಿ ಮುಂಬೈ ಪೊಲೀಸರು ಈ ಮಹತ್ವದ ಮಾಹಿತಿಯನ್ನು ಮುಂಬೈ ಪೊಲೀಸರಿಗೆ ರವಾನಿಸಿದರು. ತಕ್ಷಣವೇ ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದೊಂದಿಗೆ ಹೋಟೆಲ್‌ಗೆ ಧಾವಿಸಿದ ಭದ್ರತಾ ಸಿಬ್ಬಂದಿ, ಇಡೀ ಕಟ್ಟಡವನ್ನು ತಮ್ಮ ಸುಪರ್ದಿಗೆ ಪಡೆದು ವ್ಯಾಪಕ ಶೋಧ ಕಾರ್ಯ ಕೈಗೊಂಡರು. ಇದುವರೆಗೆ ನಡೆಸಿದ ತಪಾಸಣೆಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಪೋಟಕಗಳು ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರವಾಸಿಗರು ಮತ್ತು ಹೋಟೆಲ್ ಸಿಬ್ಬಂದಿಯ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ, ಬೆದರಿಕೆ ಕರೆ ಎಲ್ಲಿಂದ ಬಂತು ಮತ್ತು ಕರೆ ಮಾಡಿದ ಅನಾಮಧೇಯ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ಈಗಾಗಲೇ ತಾಂತ್ರಿಕ ತಂಡದ ನೆರವು ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ವಿಶೇಷವೆಂದರೆ, ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಗೆ ಶನಿವಾರವಷ್ಟೇ ಇಂತಹದ್ದೇ ಒಂದು ನಕಲಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದ್ದ ಆ ಕರೆಯ ವಿವರಗಳನ್ನು ತಕ್ಷಣವೇ ದೆಹಲಿ ಪೊಲೀಸರಿಗೆ ಹಂಚಿಕೊಳ್ಳಲಾಗಿತ್ತು. ತದನಂತರ ಕೆಂಪು ಕೋಟೆಯಲ್ಲಿ ದೆಹಲಿ ಪೊಲೀಸರು ಸುದೀರ್ಘ ಶೋಧ ನಡೆಸಿದಾಗ ಯಾವುದೇ ಸ್ಫೋಟಕ ಸಿಗದೆ, ಅದೊಂದು ಹುಸಿ ಬಾಂಬ್ ಕರೆ ಎಂಬುದು ಸಾಬೀತಾಗಿತ್ತು. ಇದೀಗ ತಾಜ್ ಹೋಟೆಲ್‌ಗೆ ಬಂದಿರುವ ಕರೆಯ ಹಿಂದೆಯೂ ಅದೇ ಕಿಡಿಗೇಡಿಗಳ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ.


