ಕರುಣೆಗಿಂತ ಕಾಗದವೇ ಮುಖ್ಯವಾದಾಗ “ತಂಗಿಯ ಅಸ್ಥಿಪಂಜರವನ್ನೇ ಹೊತ್ತು ತರಬೇಕಾಯಿತು” ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು !

ಭುವನೇಶ್ವರ, ಏ. 28 : ಇಲ್ಲೊಬ್ಬ ಬಡವ, ಓದು ಬರಹ ತಿಳಿಯದ ಅಣ್ಣನೋರ್ವ ತನ್ನ ತಂಗಿಯ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ಬ್ಯಾಂಕಿಗೆ ಹೂತಿಟ್ಟಿದ್ದ ತಂಗಿಯ ಅಸ್ಥಿಪಂಜರವನ್ನೇ ಹೊತ್ತು ತರಬೇಕಾದ ದುಸ್ಥಿತಿ ಎದುರಾಗಿದೆ. ಬಡವನ ಹಸಿವು ಮತ್ತು ಬ್ಯಾಂಕುಗಳ ಕಟ್ಟುನಿಟ್ಟಿನ ನಿಯಮಗಳ ನಡುವಿನ ಸಂಘರ್ಷ ಎಂತಹ ಭೀಕರ ರೂಪ ತಾಳಬಲ್ಲದು ಎಂಬುದಕ್ಕೆ ಒಡಿಶಾದ ಕೆಂಝರ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಈ ಘಟನೆಯು ಮಾನವೀಯ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ.

Advertisement

ತನ್ನ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ 19,300 ರೂಪಾಯಿ ಹಣವನ್ನು ಪಡೆಯಲು ದಾರಿಕಾಣದ ಅಣ್ಣನೊಬ್ಬ, ಹೂತಿಟ್ಟಿದ್ದ ತಂಗಿಯ ಅಸ್ಥಿಪಂಜರವನ್ನೇ ಅಗೆದು ತೆಗೆದು ಹೆಗಲ ಮೇಲೆ ಹೊತ್ತು ಬ್ಯಾಂಕಿಗೆ ಬಂದಿರುವ ಘಟನೆಯೊಂದು ನಡೆದಿದೆ. ಕೆಂಝರ್ ಜಿಲ್ಲೆಯ ದಿಯಾನಾಲಿ ಗ್ರಾಮದ ಜಿತು ಮುಂಡಾ ಎಂಬುವವರೇ ಈ ದುರ್ದೈವಿ. ಇವರ ತಂಗಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಕಾಕ್ರಾ ಅವರ ಪತಿ ಮತ್ತು ಏಕೈಕ ಮಗು ಮೊದಲೇ ತೀರಿಕೊಂಡಿದ್ದರಿಂದ ಜಿತು ಅವರೇ ಏಕೈಕ ವಾರಸುದಾರರಾಗಿದ್ದರು. ಒಡಿಶಾ ಗ್ರಾಮೀಣ ಬ್ಯಾಂಕಿನ ಮಲ್ಲಿಪಾಸಿ ಶಾಖೆಯಲ್ಲಿದ್ದ ತಂಗಿಯ ಹಣವನ್ನು ಪಡೆಯಲು ಜಿತು ಹಲವಾರು ಬಾರಿ ಬ್ಯಾಂಕಿಗೆ ಅಲೆದಿದ್ದರು. ಆದರೆ ಬ್ಯಾಂಕ್ ಮ್ಯಾನೇಜರ್ ಮಾತ್ರ, “ಹಣ ಬೇಕಿದ್ದರೆ ಖಾತೆದಾರರು ಖುದ್ದಾಗಿ ಬರಬೇಕು ಅಥವಾ ಅವರ ಸಾವಿನ ಪ್ರಮಾಣ ಪತ್ರ ಮತ್ತು ಕಾನೂನುಬದ್ಧ ವಾರಸುದಾರರ ದಾಖಲೆಗಳನ್ನು ನೀಡಬೇಕು” ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.

ವಿದ್ಯಾಭ್ಯಾಸವಿಲ್ಲದ ಬುಡಕಟ್ಟು ಸಮುದಾಯದ ಜಿತು ಅವರಿಗೆ ಈ ಕಾಗದ ಪತ್ರಗಳ ವ್ಯವಹಾರ ಕಿಂಚಿತ್ತೂ ತಿಳಿದಿರಲಿಲ್ಲ. ತಂಗಿಯ ಸಾವಿನ ಪ್ರಮಾಣ ಪತ್ರ ಕೂಡ ಅವರ ಬಳಿ ಇರಲಿಲ್ಲ. ಎಷ್ಟೇ ಬೇಡಿಕೊಂಡರೂ ಬ್ಯಾಂಕ್ ಅಧಿಕಾರಿಗಳು ಕರುಣೆ ತೋರಿಸದಿದ್ದಾಗ ಅಸಹಾಯಕ ಜಿತು ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದಿದ್ದು, ಸೋಮವಾರ ಸ್ಮಶಾನಕ್ಕೆ ಹೋಗಿ ಎರಡು ತಿಂಗಳ ಹಿಂದೆ ಹೂತಿಟ್ಟಿದ್ದ ತಂಗಿಯ ಶವದ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ. ಅದೇ ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿಕೊಂಡು, ಸುಡುವ ಬಿಸಿಲಿನಲ್ಲಿ ಮೂರು ಕಿಲೋಮೀಟರ್ ದೂರ ನಡೆದು ಬ್ಯಾಂಕಿನ ಮುಂದೆ ನಿಂತಿದ್ದಾರೆ.

ಹೆಗಲ ಮೇಲಿದ್ದ ಅಸ್ಥಿಪಂಜರವನ್ನು ಕಂಡು ಬ್ಯಾಂಕಿನಲ್ಲಿದ್ದ ಸಿಬ್ಬಂದಿ ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿದ ಜನರು ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, “ಒಬ್ಬ ಬಡವ ತನಗೆ ಸೇರಬೇಕಾದ ಹಣ ಪಡೆಯಲು ಇಷ್ಟೊಂದು ಕಷ್ಟಪಡಬೇಕೇ? ಬ್ಯಾಂಕ್ ಸಿಬ್ಬಂದಿ ಗ್ರಾಮ ಪಂಚಾಯತ್ ಮೂಲಕ ಅಥವಾ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಹಣ ನೀಡಬಹುದಿತ್ತು. ಆದರೆ ಅವರಿಗೆ ಕರುಣೆಗಿಂತ ಕಾಗದವೇ ಮುಖ್ಯವಾಯಿತು” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಜಿತು ಅವರನ್ನು ಸಮಾಧಾನಪಡಿಸಿದ ಪೊಲೀಸರು, ಶೀಘ್ರದಲ್ಲೇ ಹಣ ಸಿಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ವಿವರಣೆಯನ್ನು ಕೇಳಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.