ಕೋಲ್ಕತ್ತಾ, ಮೇ. 04 : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2026ರ ಫಲಿತಾಂಶ ಇಂದು (ಮೇ 4-ಸೋಮವಾರ) ಪ್ರಕಟವಾಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಅಂಚೆ ಮತಗಳ ಎಣಿಕೆ ಆರಂಭವಾಗಿದೆ. ಆರಂಭಿಕ ಹಂತದಲ್ಲಿ ಪ್ರತಿಪಕ್ಷ ಬಿಜೆಪಿ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಆಡಳಿತಾರೂಢ ಟಿಎಂಸಿಯನ್ನು ಅಚ್ಚರಿಗೆ ದೂಡಿದೆ.
ಹೌದು, ಅಂಚೆ ಮತಗಳ ೆಣಿಕೆಯಲ್ಲಿ ಬಿಜೆಪಿ ಇದುವರೆಗೂ 70 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅದೇ ರೀತಿ ಟಿಎಂಸಿ ಕೇವಲ 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಎಡಪಕ್ಷಗಳು ಖಾತೆ ತೆರೆಯುವಲ್ಲಿ ವಿಫಲವಾಗಿವೆ.
ಕಳೆದ 2021ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಬಿಜೆಪಿ ಇಲ್ಲಿಯವರೆಗೆ ಒಟ್ಟು 30 ಅಧಿಕ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆಯನ್ನು ಸಾಧಿಸಿದೆ. ಆದರೆ ಟಿಎಂಸಿ 32 ಸ್ಥಾನಗಳಲ್ಲಿ ಹಿನ್ನಡೆ ಸಾಧಿಸಿದೆ. ಇದೇ ಅಂತರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡರೆ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಈಗಾಗಲೇ ಜಯದ ಭರವಸೆ ವ್ಯಕ್ತಪಡಿಸುತ್ತಿದ್ದು, ಪಕ್ಷ ಸರಳ ಬಹುಮತದ ಗಡಿಯನ್ನು ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಈ ಮುನ್ನಡೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ.
ಬಹುತೇಕ ಪಶ್ಚಿಮ ಬಂಗಾಳ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಜೆಪಿಗೆ ಜಯ ದೊರೆಯಲಿದೆ ಎಂಬ ನಿರೀಕ್ಷೆ ಇದೆ. ಸದ್ಯದ ಫಲಿತಾಂಶ ಕೂಡ ಅದೇ ಮಾರ್ಗದಲ್ಲಿ ಸಾಗುತ್ತಿದೆ. ಆದರೆ ಮಧ್ಯಾಹ್ನದ ಬಳಿಕ ಅಂತಿಮ ಚಿತ್ರಣ ದೊರೆಯುವ ಸಾಧ್ಯತೆ ಇದೆ.

