ಉಪ್ಪಿನಂಗಡಿ, ಮೇ 20 : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಿರುವುದು ಮತ್ತು ಸರಣಿ ಕಳವು ನಡೆಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಪೇಟೆಯಲ್ಲಿ ಅಲ್ಲಲ್ಲಿ ಸಿ.ಸಿ. ಕೆಮರಾ ಅಳವಡಿಕೆಗೆ ಮುಂದಾಗಿದೆ.
ಬಸ್ ನಿಲ್ದಾಣದ ವೃತ್ತ ಮತ್ತು ದ.ಕ. ಜಿಲ್ಲಾ ಗಡಿ ಗುಂಡ್ಯ ಸೇರಿದಂತೆ ಎರಡು ಕಡೆ ಒಟ್ಟು ಆರು ಸಿ.ಸಿ ಕೆಮರಾ ಅಳವಡಿಸಿ ಕಳ್ಳತನ ಮತ್ತು ಇತರೇ ಕಾನೂನುಬಾಹಿರ ಕೃತ್ಯಗಳನ್ನು ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮುಂಜದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಓರ್ವರ ಮನೆಯಿಂದ ಕಳ್ಳತನ, ಇದರ ಬೆನ್ನಿಗೇ ಉಪ್ಪಿನಂಗಡಿ ಪೇಟೆಯಲ್ಲಿ ಒಂದೇ ದಿನ ರಾತ್ರಿ ನಾಲ್ಕು ಕಡೆ ಕಳವು ಆಗಿರುವ ಹಿನ್ನೆಲೆ ಮತ್ತು ಕಳೆದ 15 ದಿನಗಳಿಂದ ಪೇಟೆಯಲ್ಲಿ ವಾಹನ ಸಂಚಾರದಲ್ಲಿ ಉಂಟಾಗುವ ಅವ್ಯವಸ್ಥೆ, ಟ್ರಾಫಿಕ್ ಜಾಮ್, ಇತರೇ ಅಪರಾಧ ಘಟನಾವಳಿಗಳನ್ನು ನಿಯಂತ್ರಿಸುವ ಸಲುವಾಗಿ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಸಿ.ಸಿ. ಕೆಮರಾ ಅಳವಡಿಕೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದೆ.
ಉಪ್ಪಿನಂಗಡಿ ಹೃದಯ ಭಾಗವಾದ ವೃತ್ತದಲ್ಲಿ ನಾಲ್ಕು ಕೆಮರಾಗಳನ್ನು ಮತ್ತು ದ.ಕ. ಜಿಲ್ಲಾ ಗಡಿ ಗ್ರಾಮ ಶಿರಾಡಿ ಗ್ರಾಮದ ಗುಂಡ್ಯ ಜಂಕ್ಷನ್‌ನಲ್ಲಿ ಎರಡು ಕೆಮರಾಗಳನ್ನು ಅಳವಡಿಸಿದೆ. ಈ ಯೋಜನೆ ದ.ಕ. ಜಿಲ್ಲೆಯಾದ್ಯಂತ ಅನುಷ್ಠಾನ ಆಗಲಿದ್ದು, ತಾಲೂಕು ಕೇಂದ್ರ, ಜನನಿಬಿಡ ಪೇಟೆ, ಪಟ್ಟಣಗಳಲ್ಲಿ ಈ ರೀತಿಯಾಗಿ ಕೆಮರಾ ಅಳವಡಿಕೆಗೆ ಪೊಲೀಸ್ ಇಲಾಖೆ ಕಾರ್ಯ ಯೋಜನೆ ರೂಪಿಸಿದೆ.
ನಿಯಂತ್ರಣ ಕೊಠಡಿ ಸಂಪರ್ಕ
ಅತ್ಯಂತ ಆಧುನಿಕತೆಯ ಕೆಮರಾ ಇದಾಗಿದ್ದು ಕೆಮರಾಗಳ ಮುಂದೆ ವಾಹನ ಹೋಗುತ್ತಿದ್ದಂತೆ ವಾಹನದ ನಂಬರ್‌ಸಹಿತ ವ್ಯಕ್ತಿಯ ಚಿತ್ರ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ದಾಖಲಾಗುತ್ತದೆ. ಪೊಲೀಸ್ ಠಾಣೆ ಮತ್ತು ದ.ಕ. ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಇದರ ನಿಯಂತ್ರಣ ಇರುತ್ತದೆ. ಯಾವುದೇ ಸಂದರ್ಭದಲ್ಲಿಯೂ ವಾಹನ ಚಾಲಕರು ನಿಯಮ ಉಲ್ಲಂ ಸಿದರೆ ಇದರ ಮೂಲಕ ತಿಳಿಯಬಹುದಾಗಿದೆ, ಹೀಗಾಗಿ ಇದು ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಪತ್ತೆಗೆ ಸಹಕಾರಿ ಆಗಲಿದೆ ಎಂದು ಉಪ್ಪಿನಂಗಡಿ ಸಬ್ ಇನ್‌ಸ್ಪೆಕ್ಟರ್‌ಸುತೇಶ್ ತಿಳಿಸಿದ್ದಾರೆ.
10 ಕೆಮರಾ ಅಳವಡಿಸಲಾಗಿತ್ತು
ಹತ್ತು ವರ್ಷಗಳ ಹಿಂದೆ ಉಪ್ಪಿನಂಗಡಿ ಪೇಟೆಯಲ್ಲಿ ನಿರಂತರ ಕಳ್ಳತನಗಳು ನಡೆಯಲು ಆರಂಭವಾದಾಗ ಉಪ್ಪಿನಂಗಡಿಯ ಉದ್ಯಮಿ ಕರುಣಾಕರ ಸುವರ್ಣ ನೇತೃತ್ವದಲ್ಲಿ ವರ್ತಕರು ಮತ್ತು ಉದ್ಯಮಿಗಳ ಸಹಕಾರ ಪಡೆದುಕೊಂಡು ನಿಧಿಯೊಂದನ್ನು ಸಂಗ್ರಹಿಸಿ ಉಪ್ಪಿನಂಗಡಿ ವೃತ್ತ, ಬೈಪಾಸ್ ರಸ್ತೆ, ದೇವಸ್ಥಾನದ ಆವರಣ, ಹಳೇ ಬಸ್ ನಿಲ್ದಾಣ, ಗಾಂಧಿ ಪಾರ್ಕ್ ಮೊದಲಾದ ಕಡೆಯಲ್ಲಿ 10 ಕೆಮರಾಗಳನ್ನು ಅಳವಡಿಸಿದ್ದರು. ಇದು ಸುಮಾರು ಆರು ವರ್ಷಗಳ ಕಾಲ ಕಾರ್ಯಾಚರಿಸುತ್ತಿತ್ತು. ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬಂದಿತ್ತು. ಕ್ರಮೇಣ ಅದರ ನಿರ್ವಹಣೆ ಆಗದ ಕಾರಣ ಅದು ಕೇವಲ ಬೆದರು ಗೊಂಬೆಯಂತೆ ಇತ್ತು.
ಕೊಡುಗೆ ರೂಪದಲ್ಲಿ ನೀಡಿದ ವ್ಯವಸ್ಥೆಯನ್ನು ಪೊಲೀಸರು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಇಲಾಖೆ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಲೇ ಇತ್ತು. ಆದರೆ ಇದೀಗ ಪೊಲೀಸ್ ಇಲಾಖೆಯೇ ಅತೀ ಅಗತ್ಯದ ಬೇಡಿಕೆಯೊಂದನ್ನು ಈಡೇರಿಸಿದ್ದು, ಇದರ ನಿರ್ವಹಣೆ ಉತ್ತಮವಾಗಿರಲಿ ಮತ್ತು ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಸಿಗಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.

