ಉಡುಪಿ : ಮಣಿಪಾಲದಲ್ಲಿ ಪುರಸಭೆಯ ಕುಡಿಯುವ ನೀರಿನ ಘಟಕಕ್ಕೆ ಕಾರು ನುಗ್ಗಿ ಅಪಘಾತ – ವಿದ್ಯಾರ್ಥಿಗಳಿಗೆ ಗಾಯ

ಉಡುಪಿ, ಜು. 13 : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಾಷ್ಟ್ರೀಯ ಹೆದ್ದಾರಿ 169ರಿಂದ ಮಣಿಪಾಲದ ಈಶ್ವರನಗರದಲ್ಲಿರುವ ಪುರಸಭೆಯ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಆವರಣಕ್ಕೆ ನುಗ್ಗಿದ ಪರಿಣಾಮ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

Advertisement

ಮಣಿಪಾಲದಿಂದ ಆತ್ರಾಡಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಹೊರಬಂದು ಪುರಸಭೆಯ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಆವರಣಕ್ಕೆ ನುಗ್ಗಿದೆ. ಅಪಘಾತದ ತೀವ್ರತೆಗೆ ಕಾರಿನ ಏರ್‌ಬ್ಯಾಗ್‌ಗಳು ತೆರೆದ ಪರಿಣಾಮ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಹದಿಹರೆಯದ ವಿದ್ಯಾರ್ಥಿಗಳಾಗಿದ್ದು, ತಲೆಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಪ್ರದೇಶದಲ್ಲಿ ಇದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ಅಪೂರ್ಣವಾಗಿರುವುದು ಹಾಗೂ ವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡದಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ, ಈ ರಸ್ತೆಯಲ್ಲಿ ಕ್ರ‍್ಯಾಶ್ ಬ್ಯಾರಿಯರ್‌ಗಳು, ಸುರಕ್ಷತಾ ಬೇಲಿ ಹಾಗೂ ಸಮರ್ಪಕ ಎಚ್ಚರಿಕೆ ಸೂಚನಾ ಫಲಕಗಳ ಕೊರತೆಯಿಂದ ಈ ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಖಾಸಗಿ ನಿರ್ವಹಣೆಯಲ್ಲಿರುವ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಒಪ್ಪಂದದ ಆಧಾರದ ಮೇಲೆ ಕುಡಿಯುವ ನೀರು ಪೂರೈಸುವ ಈ ಶುದ್ಧೀಕರಣ ಘಟಕಕ್ಕೆ ಸೂಕ್ತ ರಕ್ಷಣಾ ಗೋಡೆಯೂ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಹೆದ್ದಾರಿ ವಿಸ್ತರಣೆ ವೇಳೆ ಇದ್ದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದ್ದು, ಇದುವರೆಗೆ ಮರುನಿರ್ಮಾಣ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕಾನೂನು ಸಂಬಂಧಿತ ಅಡಚಣೆಗಳಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪರಿಣಾಮ, ಮಣಿಪಾಲ ಕಡೆಯಿಂದ ಇಳಿಜಾರಿನಲ್ಲಿ ಬರುವ ವಾಹನ ಸವಾರರಿಗೆ ರಸ್ತೆ ನೇರವಾಗಿ ಮುಂದುವರಿಯುತ್ತದೆ ಎಂಬ ಭ್ರಮೆ ಉಂಟಾಗುತ್ತದೆ. ಹೆಚ್ಚಿನ ವೇಗದಲ್ಲಿ ಬರುವ ವಾಹನಗಳು ನೇರವಾಗಿ ಶುದ್ಧೀಕರಣ ಘಟಕದ ಆವರಣಕ್ಕೆ ನುಗ್ಗುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಹಿಂದೆ ಖ್ಯಾತ ತುಳು ನಟ ಭೋಜರಾಜ್ ವಾಮಂಜೂರು ಕೂಡ ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿದ್ದರು ಎಂದು ಸ್ಥಳೀಯರು ನೆನಪಿಸಿದ್ದಾರೆ. ಇನ್ನಷ್ಟು ಅಪಘಾತಗಳು ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಕ್ರ‍್ಯಾಶ್ ಬ್ಯಾರಿಯರ್, ಸುರಕ್ಷತಾ ಬೇಲಿ ಹಾಗೂ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.