ಹೊಸದಿಲ್ಲಿ, ಆ.17 : “ವಂದೇ ಮಾತರಂ ರಾಷ್ಟ್ರೀಯ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಸಿದರೂ, ಅದನ್ನು ಯಾವುದೇ ಕಾರಣಕ್ಕೂ ಹಾಡುವುದಿಲ್ಲ” ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಾರೆ. ಇದಕ್ಕೆ ತಮ್ಮ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕನ್ನು ಅವರು ಉಲ್ಲೇಖಿಸಿದ್ದಾರೆ. ಕಳೆದ ಶನಿವಾರ (ಆ.15) ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ, ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಅಗೌರವ ತೋರಿದ ಆರೋಪ ಕೇಳಿಬಂದ ಬೆನ್ನಲ್ಲೇ, ಇಮ್ರಾನ್ ಮಸೂದ್ ಅವರು ಗೀತೆಯ ಬಗೆಗಿನ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ವಂದೇ ಮಾತರಂ ವಿವಾದದ ಕುರಿತು ಮಾತನಾಡುತ್ತಾ, “ಅಲ್ಲಾಹನನ್ನು ಹೊರತುಪಡಿಸಿ ನಾನು ಬೇರೆ ಯಾರನ್ನೂ ಆರಾಧಿಸಲಾರೆ. ಸಂವಿಧಾನವು ನನಗೆ ಈ ಹಕ್ಕನ್ನು ನೀಡಿದೆ. ನೀವು ನನ್ನಿಂದ ಈ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ನಾನು ವಂದೇ ಮಾತರಂ ಗೀತೆಯನ್ನು ಅವಮಾನಿಸುವುದಿಲ್ಲ. ನಾನು ಅದನ್ನು ಹಾಡುವುದಿಲ್ಲ, ಆದರೆ ಅದನ್ನು ನುಡಿಸಿದಾಗ ಎದ್ದು ನಿಲ್ಲುತ್ತೇನೆ” ಎಂದು ಇಮ್ರಾನ್ ಮಸೂದ್ ಹೇಳಿದ್ದಾರೆ.
“ಮುಂದುವರೆದು, “ನಾನು ಎಂದಿಗೂ ವಂದೇ ಮಾತರಂ ಹಾಡಿಲ್ಲ ಮತ್ತು ಮುಂದೆಯೂ ಹಾಡುವುದಿಲ್ಲ. ಆದರೆ ಅದನ್ನು ಹಾಡುವಾಗ ಎದ್ದು ನಿಲ್ಲುತ್ತೇನೆ. ನೀವು ಬಯಸಿದರೆ ವಂದೇ ಮಾತರಂ ಗೀತೆಯನ್ನು ಪ್ರಚಾರ ಮಾಡಿ. ನಾನು ಮಾತ್ರ ಏನು ಮಾಡಲು ಬಯಸಿದ್ದೇನೋ ಅಷ್ಟನ್ನೇ ಮಾಡುತ್ತೇನೆ” ಎಂದು ಕಾಂಗ್ರೆಸ್ ಸಂಸದರು ಸ್ಪಷ್ಟಪಡಿಸಿದ್ದಾರೆ.
ಮೊದಲು ವಂದೇ ಮಾತರಂನ ಸಂಪೂರ್ಣ ಇತಿಹಾಸವನ್ನು ಓದಿ :
“ನನ್ನ ಧರ್ಮವನ್ನು ಪಾಲಿಸುವ ಸಾಂವಿಧಾನಿಕ ಹಕ್ಕು ನನಗಿದೆ. ಮೊದಲು ವಂದೇ ಮಾತರಂನ ಸಂಪೂರ್ಣ ಇತಿಹಾಸವನ್ನು ಓದಿ, ಆನಂತರ ಬಂದು ನನ್ನೊಂದಿಗೆ ಮಾತನಾಡಿ. ಅದು ಎಲ್ಲಿಂದ ಬಂತು, ಅದನ್ನು ಹೇಗೆ ಮತ್ತು ಏಕೆ ಬರೆಯಲಾಯಿತು ಎಂಬುದರ ಬಗ್ಗೆ ಓದಿ. ಮೊದಲು ಪೂರ್ತಿ ಇತಿಹಾಸವನ್ನು ಓದಿ, ಆಮೇಲೆ ನಾನು ನಿಮಗೆ ಅದನ್ನು ವಿವರಿಸುತ್ತೇನೆ” ಎಂದು ಇಮ್ರಾನ್ ಮಸೂದ್ ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
‘ವಂದೇ ಮಾತರಂ’ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ, ಬಿಜೆಪಿ ದೂರು ದಾಖಲಿಸಿದ ನಂತರ ಇಮ್ರಾನ್ ಮಸೂದ್ ಅವರಿಂದ ಈ ಹೇಳಿಕೆಗಳು ಬಂದಿವೆ. ವಂದೇ ಮಾತರಂ ನಿಲ್ಲಿಸಿದ ಸೋನಿಯಾ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು.
ಆದರೆ ಬಿಜೆಪಿ ನಾಯಕರ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್, “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ನೀಡುವಂತೆ ಸೋನಿಯಾ ಗಾಂಧಿ ಸೂಚಿಸಿದ್ದರೆ ಹೊರತು, ವಂದೇ ಮಾತರಂ ಗೀತೆ ಹಾಡುವುದನ್ನು ನಿಲ್ಲಿಸುವಂತೆ ಹೇಳಿರಲಿಲ್ಲ” ಎಂದು ಸ್ಪಷ್ಟಪಡಿಸಿದೆ.




